ಬುಧವಾರ, ಸೆಪ್ಟೆಂಬರ್ 29, 2021
20 °C

ಮೂಲಸೌಕರ್ಯ ವಲಯದಲ್ಲಿ ಶೇ 8.9ರಷ್ಟು ಬೆಳವಣಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದಕತೆಯು ಜೂನ್ ತಿಂಗಳಿನಲ್ಲಿ ಶೇಕಡ 8.9ರಷ್ಟು ಬೆಳವಣಿಗೆ ಕಂಡಿದೆ. ನೈಸರ್ಗಿಕ ಅನಿಲ, ಉಕ್ಕು, ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು ಇದಕ್ಕೆ ಒಂದು ಕಾರಣ.

ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಈ ವಲಯಗಳ ಉತ್ಪಾದಕತೆ ಬಹಳ ಕಡಿಮೆ ಇದ್ದುದರಿಂದ, ಆ ಮಟ್ಟಕ್ಕೆ ಹೋಲಿಸಿದರೆ ಈ ವರ್ಷದ ಉತ್ಪಾದಕತೆ ಹೆಚ್ಚಾಗಿದೆ. ಎಂಟು ಪ್ರಮುಖ ಮೂಲಸೌಕರ್ಯ ವಲಯಗಳಾದ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್, ವಿದ್ಯುತ್ ಮತ್ತು ಸಂಸ್ಕರಣಾ ಘಟಕಗಳ ಉತ್ಪಾದಕತೆಯು ಹಿಂದಿನ ವರ್ಷದ ಜೂನ್‌ ತಿಂಗಳಲ್ಲಿ ಶೇ (–) 12.4ರಷ್ಟು ಕುಸಿತ ಕಂಡಿತ್ತು. ಲಾಕ್‌ಡೌನ್‌ ನಿರ್ಬಂಧಗಳು ಜಾರಿಯಲ್ಲಿ ಇದ್ದುದು ಈ ಕುಸಿತಕ್ಕೆ ಕಾರಣವಾಗಿತ್ತು.

ಈ ವರ್ಷದ ಮೇ ತಿಂಗಳಲ್ಲಿ ಈ ಎಂಟು ವಲಯಗಳು ಶೇ 16.3ರಷ್ಟು ಬೆಳವಣಿಗೆ ಸಾಧಿಸಿದ್ದವು. ಏಪ್ರಿಲ್‌ನಲ್ಲಿ ಬೆಳವಣಿಗೆ ಪ್ರಮಾಣವು ಶೇ 60.9ರಷ್ಟು ಇತ್ತು.

ಈ ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ಈ ಎಂಟು ವಲಯಗಳು ಶೇ 25.3ರಷ್ಟು ಬೆಳವಣಿಗೆ ಸಾಧಿಸಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯಗಳು ಶೇ (–)23.8ರಷ್ಟು ಕುಸಿತ ದಾಖಲಿಸಿದ್ದವು.

‘ರಾಜ್ಯಗಳು ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದು, ಜನರ ಸಂಚಾರ ಹೆಚ್ಚಾಗಿರುವುದು, ವಿದ್ಯುತ್ ಬೇಡಿಕೆ ಜಾಸ್ತಿ ಆಗಿರುವುದು ಪ್ರಮುಖ ವಲಯಗಳ ಬೆಳವಣಿಗೆಯನ್ನು ಜುಲೈ ತಿಂಗಳಿನಲ್ಲಿ ಶೇ 11–14ರ ಮಟ್ಟಕ್ಕೆ ಒಯ್ಯುವ ನಿರೀಕ್ಷೆ ಇದೆ’ ಎಂದು ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಜಿಎಸ್‌ಟಿ ಇ–ವೇ ಬಿಲ್‌, ಆಟೊಮೊಬೈಲ್‌ ಉತ್ಪಾದನೆ ಹೆಚ್ಚಾಗಿರುವ ಸೂಚನೆಗಳು ಇರುವ ಕಾರಣ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಜೂನ್‌ ತಿಂಗಳಲ್ಲಿ ಶೇ 12–17ರ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ... ಖಾದ್ಯ ತೈಲ ಬೆಲೆ ಹೆಚ್ಚಳ ಪ್ರಮಾಣ ಶೇ 52!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು