ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿ ಮ್ಯೂಚುವಲ್ ಫಂಡ್‌: ದಾಖಲೆಯ ಒಳಹರಿವು

Last Updated 8 ಏಪ್ರಿಲ್ 2022, 12:42 IST
ಅಕ್ಷರ ಗಾತ್ರ

ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಮಾರ್ಚ್‌ನಲ್ಲಿ ₹ 28,463 ಕೋಟಿ ಬಂಡವಾಳ ಆಕರ್ಷಿಸಿವೆ. ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಮೊತ್ತ ಇದಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಶುಕ್ರವಾರ ತಿಳಿಸಿದೆ.

ಸಣ್ಣ ಹೂಡಿಕೆದಾರರು ಮತ್ತು ಸಿರಿವಂತರು (ಎಚ್‌ಎನ್‌ಐ) ಮಾರುಕಟ್ಟೆಯ ಅಸ್ಥಿರ ಸ್ಥಿತಿಯನ್ನು ಖರೀದಿಯ ಅವಕಾಶವನ್ನಾಗಿ ಬಸಿಕೊಂಡಿದ್ದರಿಂದ ಈ ಪ್ರಮಾಣದಲ್ಲಿ ಬಂಡವಾಳ ಒಳಹರಿವು ಆಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ ಅನ್ನೂ ಒಳಗೊಂಡು ಸತತವಾಗಿ 13ನೇ ಬಾರಿ ಬಂಡವಾಳ ಒಳಹರಿವು ಆದಂತಾಗಿದೆ. ಇನ್ನೊಂದೆಡೆ ವಿದೇಶಿ ಬಂಡವಾಳ ಹೊರಹರಿವು ಆಗುತ್ತಿದೆ.

2021-22ನೇ ಹಣಕಾಸು ವರ್ಷದಲ್ಲಿ ಈಕ್ವಿಟಿ ಎಂಎಫ್‌ಗಳು ₹ 1.64 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿವೆ. 2020–21ನೇ ಹಣಕಾಸು ವರ್ಷದಲ್ಲಿ ₹ 25,966 ಕೋಟಿ ಬಂಡವಾಳ ಹೂಡಿಕೆ ಆಗಿತ್ತು.

ರಷ್ಯಾ–ಉಕ್ರೇನ್‌ ಸಂಘರ್ಷವು ಮಾರುಕಟ್ಟೆಯಲ್ಲಿ ಏರಿಳಿತ ಉಂಟುಮಾಡುತ್ತಿದೆ. ಈ ಸ್ಥಿತಿಯು ಹೂಡಿಕೆದಾರರಿಗೆ ಹೆಚ್ಚಿನ ಬಂಡವಾಳ ತೊಡಗಿಸಲು ಅಥವಾ ತಮ್ಮ ಹಾಲಿ ಹೂಡಿಕೆಯನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಎಎಂಸಿಯ ಮುಖ್ಯ ವಹಿವಾಟು ಅಧಿಕಾರಿ ಅಖಿಲ್‌ ಚತುರ್ವೇದಿ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ನಕಾರಾತ್ಮಕ ಚಲನೆಯು ದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿಲ್ಲ. ಭಾರತದ ಹೂಡಿಕೆದಾರರನ್ನು ಮ್ಯೂಚುವಲ್ ಫಂಡ್‌ ಮೂಲಕ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದೇಶಿ ಮಾರುಕಟ್ಟೆಯ ಬಗ್ಗೆ ದೇಶಿ ಹೂಡಿಕೆದಾರರು ಹೊಂದಿರುವ ನಂಬಿಕೆಯನ್ನು 2022ರ ಮಾರ್ಚ್‌ನಲ್ಲಿ ಆಗಿರುವ ಹೂಡಿಕೆಯು ತೋರಿಸುತ್ತಿದೆ ಎಂದು ಟ್ರೇಡ್‌ಸ್ಮಾರ್ಟ್‌ ಕಂಪನಿ ಅಧ್ಯಕ್ಷ ವಿಜಯ್‌ ಸಿಂಘಾನಿಯಾ ತಿಳಿಸಿದ್ದಾರೆ.

ಸಾಲಪತ್ರ ವಿಭಾಗದಿಂದ ಮಾರ್ಚ್‌ನಲ್ಲಿ ₹ 1.15 ಲಕ್ಷ ಕೋಟಿ ಬಂಡವಾಳ ಹೊರಹೋಗಿದೆ. ಫೆಬ್ರುವರಿಯಲ್ಲಿ ₹ 8,274 ಕೋಟಿ ಹೂಡಿಕೆ ಆಗಿತ್ತು.

ಒಟ್ಟಾರೆಯಾಗಿ, ಮ್ಯೂಚುವಲ್ ಫಂಡ್‌ ಉದ್ಯಮದಿಂದ ಮಾರ್ಚ್‌ನಲ್ಲಿ ₹ 69,883 ಕೋಟಿ ಬಂಡವಾಳ ಹೊರಹೋಗಿದೆ. ಫೆಬ್ರುವರಿಯಲ್ಲಿ ₹ 31,533 ಕೋಟಿ ಹೂಡಿಕೆ ಆಗಿತ್ತು. ಬಂಡವಾಳ ಹೊರಹರಿವಿನಿಂದಾಗಿ ಮ್ಯೂಚುವಲ್ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ₹ 38.56 ಲಕ್ಷ ಕೋಟಿಗಳಿಂದ ₹ 37.7 ಲಕ್ಷ ಕೋಟಿಗಳಿಗೆ ಇಳಿಕೆ ಆಗಿದೆ.

ಬಂಡವಾಳ ಹೂಡಿಕೆ (ಕೋಟಿಗಳಲ್ಲಿ)

2021 ಡಿಸೆಂಬರ್‌; ₹ 25,077

2022 ಜನವರಿ; ₹ 14,888

ಫೆಬ್ರುವರಿ; ₹ 19,705

ಮಾರ್ಚ್‌; ₹ 28,463.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT