ಬುಧವಾರ, ಆಗಸ್ಟ್ 4, 2021
27 °C

ಲಾಕ್‌ಡೌನ್‌: ರಾಜ್ಯದ ಆರ್ಥಿಕತೆಗೆ ಸಂಕಷ್ಟ

ಮಹೇಶ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಲಿರುವುದು ರಾಜ್ಯದ ಆರ್ಥಿಕತೆಯನ್ನು ಇನ್ನಷ್ಟು ಬಾಧಿಸಲಿದೆ ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಶೇ 30ರಷ್ಟು ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ಕೈಗಾರಿಕೆಗಳು ಇನ್ನೂ ಕಾರ್ಯಾರಂಭ ಮಾಡುವ ಮೊದಲೇ ದಿಗ್ಬಂಧನ ಜಾರಿಗೆ ಬರಲಿರುವುದು ಕೈಗಾರಿಕಾ ಉತ್ಪಾದನೆಗೆ ತೀವ್ರ ಹೊಡೆತ ನೀಡಲಿದೆ. ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುವುದಕ್ಕೆ ಅಡಚಣೆ ಒಡ್ಡಲಿದೆ.

ನಗರದಲ್ಲಿನ ಹಲವಾರು ಕೈಗಾರಿಕೆಗಳು ಅದರಲ್ಲೂ ವಿಶೇಷವಾಗಿ ತಯಾರಿಕಾ ವಲಯದ ಘಟಕಗಳು ನಿಧಾನವಾಗಿ ಎರಡನೇ ಪಾಳಿಯ ಕೆಲಸಕ್ಕೆ ಚಾಲನೆ ನೀಡಿದ್ದವು. ಈ ಹಂತದಲ್ಲಿ ಮತ್ತೆ ದಿಗ್ಬಂಧನ ಜಾರಿಗೆ ಬರಲಿರುವುದು ಮಾಲೀಕರ ಮತ್ತು ಕೆಲಸಗಾರರ ನೈತಿಕತೆ ಉಡುಗಿಸಲಿದೆ ಎಂದು ಕೈಗಾರಿಕಾ ವಲಯದ ಮೂಲಗಳು ತಿಳಿಸಿವೆ.

‘ಪುಣೆ, ಚೆನ್ನೈ ಮತ್ತು ದೆಹಲಿ ನಗರಗಳಲ್ಲಿ ಸಾಮಾಜಿಕ ದಿಗ್ಬಂಧನ ವಿಧಿಸಿ ಕೈಗಾರಿಕೆಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತ ತಯಾರಿಕೆ ಚಟುವಟಿಕೆ ಮುಂದುವರೆಸಲು ಅವಕಾಶ ನೀಡಿರುವುದನ್ನು ರಾಜ್ಯ ಸರ್ಕಾರ ನಮ್ಮಲ್ಲಿಯೂ ಪಾಲನೆ ಮಾಡಲಿರುವ ಬಗ್ಗೆ ನಮಗೆ ವಿಶ್ವಾಸ ಇದೆ. ಲಾಕ್‌ಡೌನ್‌ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಮುನ್ನ ಸರ್ಕಾರ ಕೈಗಾರಿಕಾ ಸಂಘ ಸಂಸ್ಥೆಗಳ ಅಭಿಪ್ರಾಯ ಪರಿಗಣಿಸಲಿದೆ ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಬೆಂಗಳೂರು ಚೇಂಬರ್‌ ಆಫ್ ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್‌ನ (ಬಿಸಿಐಸಿ) ಅಧ್ಯಕ್ಷ ದೇವೇಶ್‌ ಅಗರ್‌ವಾಲ್‌ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಬೆಂಗಳೂರಿನ ಕೊಡುಗೆ ಶೇ 70ರಷ್ಟಿದೆ. ಕೃಷಿ ವಹಿವಾಟು, ಆಹಾರ ಸಂಸ್ಕರಣೆ, ವೈಮಾಂತರಿಕ್ಷ ಬಿಡಿಭಾಗ, ಮಷಿನ್‌ಟೂಲ್ಸ್‌, ಔಷಧಿ ತಯಾರಿಕೆ, ಸಿದ್ಧ ಉಡುಪು, ವಾಹನ ಬಿಡಿಭಾಗ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳು ರಫ್ತು ವಹಿವಾಟನ್ನೂ ನಡೆಸುತ್ತಿವೆ.

‘ಜಿಎಸ್‌ಡಿಪಿ’ಗೆ ಕೈಗಾರಿಕಾ ವಲಯದ ಕೊಡುಗೆಯು ಶೇ 26ರಷ್ಟಿದೆ. ಈ ಹಂತದಲ್ಲಿ ಮತ್ತೆ ಕೈಗಾರಿಕೆಗಳನ್ನು ಸ್ಥಗಿತಗೊಳಿಸುವುದರಿಂಧ ಉತ್ಪಾದನೆ ಕಡಿಮೆಯಾಗಲಿದೆ. ಉದ್ಯೋಗಗಳು ನಷ್ಟವಾಗಲಿವೆ. ಇದರಿಂದ ರಾಜ್ಯದ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿನ ಕೈಗಾರಿಕೆಗಳು ಇತ್ತೀಚೆಗಷ್ಟೇ ಚೇತರಿಕೆಯ ಲಕ್ಷಣ ತೋರಿಸಿದ್ದವು. ಪಿಡುಗು ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇರಲಿದೆ. ಲಾಕ್‌ಡೌನ್‌ ಜಾರಿಗೆ ತರುವ ಮುನ್ನ ಸರ್ಕಾರ ವಾಣಿಜ್ಯೋದ್ಯಮ ಸಂಘಟನೆಗಳ ಅಭಿಪ್ರಾಯ ಕೇಳಬೇಕು’ ಎಂದು ಟಾಟಾ ಹಿಟಾಚಿ ಕನ್‌ಸ್ಟ್ರಕ್ಷನ್‌ ಮಷಿನರಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

’ಕೈಗಾರಿಕೆಗಳಿಗೆ  ಲಾಕ್‌ಡೌನ್‌ನಿಂದ ವಿನಾಯ್ತಿ ನೀಡದಿದ್ದರೆ, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ರಫ್ತು ವಹಿವಾಟಿನ ಮೇಲೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಟೊಯೋಟ ಇಂಡಸ್ಟ್ರೀಸ್‌ ಎಂಜಿನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಟಿ. ಆರ್‌. ಪರಶುರಾಮನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು