ನವದೆಹಲಿ: ಹಬ್ಬದ ಋತುವಿನ ಕಾರಣದಿಂದಾಗಿ ಅಕ್ಟೋಬರ್‌ನಲ್ಲಿ ವಾಹನಗಳ ರಿಟೇಲ್ ಮಾರಾಟವು ಶೇ 48ರಷ್ಟು ಹೆಚ್ಚಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
2021ರ ಅಕ್ಟೋಬರ್‌ನಲ್ಲಿ 14.18 ಲಕ್ಷ ವಾಹನಗಳು ಮಾರಾಟ ಆಗಿದ್ದವು. 2022ರ ಅಕ್ಟೋಬರ್‌ನಲ್ಲಿ 20.94 ಲಕ್ಷ ವಾಹನಗಳು ಮಾರಾಟ ಆಗಿವೆ. 2019ರ ಅಕ್ಟೋಬರ್‌ಗೆ ಹೋಲಿಸಿದರೂ ಮಾರಾಟವು ಶೇಕಡ 8ರಷ್ಟು ಹೆಚ್ಚಾಗಿದೆ.
ನಾಲ್ಕು ವರ್ಷಗಳ ಹಬ್ಬದ ಋತುವಿಗೆ ಹೋಲಿಸಿದರೆ ಈ ಬಾರಿ ಮಾರಾಟವು ಉತ್ತಮವಾಗಿದೆ ಎಂದು ಅದು ತಿಳಿಸಿದೆ. ಈ ವರ್ಷ 42 ದಿನಗಳ ಹಬ್ಬದ ಋತುವಿನಲ್ಲಿ ರಿಟೇಲ್ ಮಾರಾಟ 28.88 ಲಕ್ಷ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 29ರಷ್ಟು ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.