ಬುಧವಾರ, ಜನವರಿ 22, 2020
16 °C

ಮುಂದಿನ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತ; ಸುಳಿವು ನೀಡಿದ ನಿರ್ಮಲಾ ಸೀತಾರಾಮನ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಆರ್ಥಿಕತೆ ಹಿಂಜರಿತಕ್ಕೆ ಕುಸಿದಿರುವ ಬೇಡಿಕೆಯೇ ಕಾರಣವೆಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದು, ಜನರಿಂದ ಬೇಡಿಕೆ ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮಗಳಿಗಾಗಿ ಯೋಜನೆ ರೂಪಿಸುತ್ತಿದೆ. ಇದರ ಭಾಗಿವಾಗಿಯೇ ವೈಯಕ್ತಿಕ ಆದಾಯ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳಿವು ನೀಡಿದ್ದಾರೆ. 

ಶನಿವಾರ 'ಹಿಂದುಸ್ತಾನ್‌ ಟೈಮ್ಸ್ ಲೀಡರ್‌ಶಿಪ್‌ ಸಮಾವೇಶ 2019'ರಲ್ಲಿ ಮಾತನಾಡಿದ ಅವರು, 'ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವುದು ನಾವು ಪರಿಗಣಿಸುತ್ತಿರುವ ಕ್ರಮಗಳಲ್ಲಿ ಒಂದು' ಎಂದು ಹೇಳಿದ್ದಾರೆ. ಆದಾಯ ತೆರಿಗೆ ಯಾವಾಗ ಇಳಿಕೆಯಾಗಲಿದೆ ಎಂದು ಕೇಳಿದ ಪ್ರಶ್ನೆಗೆ, 'ಬಜೆಟ್ ವರೆಗೂ ಕಾಯಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. 

ಫೆಬ್ರುವರಿಯಲ್ಲಿ 2021ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದ್ದು, ಆದಾಯ ತೆರಿಗೆ ಕಡಿತ ಘೋಷಣೆಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ವೈಯಕ್ತಿಕ ಆದಾಯ ತೆರಿಗೆ ಇಳಿಸುವ ಮೂಲಕ ಜನರು ಖರೀದಿಯಲ್ಲಿ ತೊಡಗುವಂತೆ ಮಾಡುವುದು ಹಾಗೂ ಖಾಸಗಿ ಹೂಡಿಕೆಯನ್ನು ಮುಂದುವರಿಸುವಂತೆ ಮಾಡಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ: ಸುಳ್ಳಾಗಲಿಲ್ಲ ಸಂಶೋಧನಾ ವರದಿಗಳು; ಶೇ 4.5ಕ್ಕೆ ಕುಸಿದ ಜಿಡಿಪಿ

ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ ಮಸೂದೆಗೆ ತಿದ್ದುಪಡಿ ಪ್ರಸ್ತಾವನೆ ವೇಳೆ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸದಸ್ಯ ಸೌಗತ ರಾಯ್‌ ಆದಾಯ ತೆರಿಗೆ ಕುರಿತು ಪ್ರಶ್ನೆ ಎತ್ತಿದ್ದರು. ಅದಕ್ಕೆ ಉತ್ತರವಾಗಿ ಸೀತಾರಾಮನ್‌, 'ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಹಾಗೂ ಹೊರಹೊಮ್ಮುತ್ತಿರುವ ಆರ್ಥಿಕತೆಗಳ ನಡುವೆ ಹೋಲಿಕೆ ಭಿನ್ನವಾದುದಾಗಿದೆ. ಅವರಲ್ಲಿ ಆದಾಯ ತೆರಿಗೆ ಕಡಿತಗೊಳಿಸಲಾಗಿದೆ ಹಾಗಾಗಿ ನೀವು ಮಾಡಬೇಕು ಎಂದರೆ...' ಎಂದಿದ್ದರು. 

ಇದನ್ನೂ ಓದಿ: ತೆರಿಗೆ ದರ ಕಡಿತದ ಬಂಪರ್‌ ಕೊಡುಗೆ

ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಕಳೆದ ಆರು ವರ್ಷಗಳ ಕನಿಷ್ಠ ಶೇ 4.5ಕ್ಕೆ ಕುಸಿದಿದೆ. ಆರ್ಥಿಕತೆ ಉತ್ತೇಜನಕ್ಕಾಗಿ ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ತಕ್ಕ ಫಲಿತಾಂಶ ಇನ್ನಷ್ಟೇ ಗೋಚರಿಸಬೇಕಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು