ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸ್ಸೈಸ್ ಸುಂಕ ಕಡಿತ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ನೀಡಿದ್ದ ಸಬ್ಸಿಡಿಗೆ ಬದಲಾಗಿ ಪಾವತಿ ಮಾಡಬೇಕಿರುವ ಮೊತ್ತವು ಸುಂಕ ಕಡಿತಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲವನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿತ್ತು. ಸಬ್ಸಿಡಿ ಮೊತ್ತವನ್ನು ಪಾವತಿಸುವ ಬದಲು ಆಗ ಕೇಂದ್ರವು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ₹ 1.34 ಲಕ್ಷ ಕೋಟಿ ಮೊತ್ತದ ತೈಲ ಬಾಂಡ್ ನೀಡಿತು. ಆ ಬಾಂಡ್‌ನ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಈಗ ಪಾವತಿಸಲಾಗುತ್ತಿದೆ.
‘ತೈಲ ಬಾಂಡ್‌ಗೆ ಸಂಬಂಧಿಸಿದ ಮೊತ್ತವನ್ನು ಪಾವತಿಸುವ ಹೊರೆ ಇಲ್ಲದಿದ್ದರೆ ನಾನು ಈಗ ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿ ಇರುತ್ತಿದ್ದೆ’ ಎಂದು ನಿರ್ಮಲಾ ಅವರು ಸುದ್ದಿಗಾರರ ಬಳಿ ಹೇಳಿದರು. ‘ತೈಲ ಬಾಂಡ್ ವಿತರಿಸುವ ಮೂಲಕ ಹಿಂದಿನ ಸರ್ಕಾರವು ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ. ತೈಲ ಬಾಂಡ್‌ಗಳಿಗೆ ಭಾರಿ ಮೊತ್ತ ತೆಗೆದಿರಿಸಬೇಕಾಗಿದೆ’ ಎಂದು ಅವರು ವಿವರಿಸಿದರು.
ಕಳೆದ ಏಳು ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲಿನ ಬಡ್ಡಿ ಪಾವತಿಯು ₹ 70,195 ಕೋಟಿ ಆಗಿದೆ ಎಂದರು. ತೈಲ ಬಾಂಡ್‌ನ ಅಸಲು ಮೊತ್ತ ₹ 1.34 ಲಕ್ಷ ಕೋಟಿ. ಅಸಲು ಮೊತ್ತದಲ್ಲಿ ₹ 3,500 ಕೋಟಿ ಮಾತ್ರ ಪಾವತಿ ಆಗಿದೆ. ಇನ್ನುಳಿದ ₹ 1.3 ಲಕ್ಷ ಕೋಟಿ ಮೊತ್ತವನ್ನು 2025–26ರೊಳಗೆ ಪಾವತಿಸಬೇಕಿದೆ ಎಂದು ತಿಳಿಸಿದರು. ‘ಗಮನಾರ್ಹ ಮೊತ್ತವು ಬಡ್ಡಿ ಹಾಗೂ ಅಸಲು ಪಾವತಿಗೆ ವಿನಿಯೋಗ ಆಗುತ್ತಿದೆ. ನನ್ನ ಮೇಲೆ ಅನ್ಯಾಯದ ಹೊರೆ ಬಿದ್ದಿದೆ’ ಎಂದು ಅಳಲು ತೋಡಿಕೊಂಡರು.
ಎಕ್ಸೈಸ್ ಸುಂಕದಲ್ಲಿ ಮಾಡಿದ ಹೆಚ್ಚಳದಿಂದ ಸಂಗ್ರಹವಾಗಿರುವ ಮೊತ್ತವು ತೈಲ ಕಂಪನಿಗಳಿಗೆ ಪಾವತಿಸಬೇಕಿರುವ ಮೊತ್ತಕ್ಕಿಂತ ಜಾಸ್ತಿ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಕೇಂದ್ರವು ಸಂಗ್ರಹಿಸಿರುವ ಮೊತ್ತವು ಮಾರ್ಚ್ 31ರವರೆಗೆ ₹ 3.35 ಲಕ್ಷ ಕೋಟಿ ಆಗಿತ್ತು ಎಂದು ಸರ್ಕಾರವು ಸಂಸತ್ತಿಗೆ ಈಚೆಗೆ ತಿಳಿಸಿದೆ. ಹಿಂದಿನ ವರ್ಷದಲ್ಲಿ ಸಂಗ್ರಹವಾದ ಮೊತ್ತ ₹ 1.78 ಲಕ್ಷ ಕೋಟಿ ಆಗಿತ್ತು.
ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು ಎಂದು ನಿರ್ಮಲಾ ಹೇಳಿದರು.
ತೈಲ ಬಾಂಡ್‌ಗಳಿಗೆ ಯಾವ ವರ್ಷ, ಎಷ್ಟು ಪಾವತಿ?
ವರ್ಷ;ಮೊತ್ತ
2021–22;₹ 10,000
2023–24;₹ 31,150
2024–25;₹ 52,860
2025–26;₹ 36,913
(ತೈಲ ಬಾಂಡ್‌ಗಾಗಿ ಕೇಂದ್ರವು ಪಾವತಿಸಬೇಕಿರುವ ಮೊತ್ತ ಇದು. ಮೊತ್ತವನ್ನು ಕೋಟಿ ರೂಪಾಯಿಗಳಲ್ಲಿ ನೀಡಲಾಗಿದೆ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.