ಶನಿವಾರ, ಏಪ್ರಿಲ್ 17, 2021
27 °C

ಆರ್‌ಬಿಐ ಆರ್ಥಿಕ ನಿರ್ಬಂಧಕ್ಕೆ ಒಳಗಾದ ಬ್ಯಾಂಕ್‌ಗಳಿಗೆ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ರಾಯಿಟರ್ಸ್‌): ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧಗಳಿಗೆ (ಪಿಸಿಎ) ಒಳಗಾಗಿರುವ ಬ್ಯಾಂಕ್‌ಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ₹ 14,500 ಕೋಟಿ ನೆರವನ್ನು ಮುಂದಿನ ಕೆಲವು ದಿನಗಳಲ್ಲಿ ನೀಡುವ ನಿರೀಕ್ಷೆ ಇದೆ. ಈ ಬ್ಯಾಂಕ್‌ಗಳ ಹಣಕಾಸಿನ ಸ್ಥಿತಿ ಸುಧಾರಿಸಲು ಸಚಿವಾಲಯವು ಈ ನೆರವು ನೀಡಲಿದೆ.

ಇಂಡಿಯನ್‌ ಓವರ್ಸೀಸ್‌ ಬ್ಯಾಂಕ್‌, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೋ ಬ್ಯಾಂಕ್‌ ಈಗ ಆರ್‌ಬಿಐನ ನಿರ್ಬಂಧಗಳನ್ನು ಎದುರಿಸುತ್ತಿವೆ. ಸಾಲ ವಿತರಣೆ, ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರ ಶುಲ್ಕ ಪಾವತಿ ಸೇರಿದಂತೆ ಹಲವು ವಿಚಾರಗಳಲ್ಲಿ ಈ ಬ್ಯಾಂಕ್‌ಗಳ ಮೇಲೆ ನಿರ್ಬಂಧಗಳು ಇವೆ.

ಯಾವ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ಸಿಗಲಿದೆ ಎಂಬುದನ್ನು ಸಚಿವಾಲಯವು ಬಹುತೇಕ ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಹಣಕಾಸಿನ ನೆರವು ಪಡೆದು ಈ ಬ್ಯಾಂಕ್‌ಗಳು ನಿರ್ಬಂಧಗಳಿಂದ ಹೊರಬರಬಹುದು ಎಂಬ ನಿರೀಕ್ಷೆ ಇದೆ.

ಸರ್ಕಾರವು ಎರಡು ಬ್ಯಾಂಕ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ. ಒಟ್ಟು ನಾಲ್ಕು ಬ್ಯಾಂಕ್‌ಗಳ ಹೆಸರು ಇರುವ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದ್ದು, ನಾಲ್ಕು ಬ್ಯಾಂಕ್‌ಗಳ ಪೈಕಿ ಎರಡು ಬ್ಯಾಂಕ್‌ಗಳು ಮಾರಾಟ ಆಗಲಿವೆ ಎಂದು ಈ ಹಿಂದೆ ರಾಯಿಟರ್ಸ್‌ ವರದಿ ಮಾಡಿತ್ತು. ಇಂಡಿಯನ್ ಓವರ್ಸೀಸ್‌ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೆಸರು ಈ ಪಟ್ಟಿಯಲ್ಲಿ ಇದೆ ಎಂದು ವರದಿ ಹೇಳಿತ್ತು. ಈ ಎರಡು ಬ್ಯಾಂಕ್‌ಗಳಿಗೆ ಸರ್ಕಾರದಿಂದ ನೆರವು ಸಿಗುವ ನಿರೀಕ್ಷೆ ಇದೆ.

ಶೇ 5ಕ್ಕೆ ತಲುಪಿದ ಹಣದುಬ್ಬರ
ನವದೆಹಲಿ (ಪಿಟಿಐ):
ಫೆಬ್ರುವರಿ ತಿಂಗಳಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 5.03ಕ್ಕೆ ಏರಿಕೆ ಆಗಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಇದಕ್ಕೆ ಮುಖ್ಯ ಕಾರಣ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇ 4.06ರಷ್ಟು ಆಗಿತ್ತು.

ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇ 1.89ರಷ್ಟು ಇದ್ದಿದ್ದು ಫೆಬ್ರುವರಿಯಲ್ಲಿ ಶೇ 3.87ಕ್ಕೆ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು