ಬುಧವಾರ, ಸೆಪ್ಟೆಂಬರ್ 23, 2020
23 °C

ಡಿಜಿಟಲ್ ಬ್ಯಾಂಕಿಂಗ್‌ಗೆ ಒತ್ತು: ಫಿನ್‌ಟೆಕ್ ಕಂಪನಿಗಳ ನಿರೀಕ್ಷೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಫಿನ್‌ಟೆಕ್ ಕಂಪನಿಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ನವೋದ್ಯಮಗಳು (ಸ್ಟಾರ್ಟ್‌ಅಪ್‌) ಈ ಬಾರಿಯ ಬಜೆಟ್‌ನಲ್ಲಿ ಹೊಸ ಸುಧಾರಣೆಗಳ ನಿರೀಕ್ಷೆಯಲ್ಲಿವೆ. ತೆರಿಗೆ ವಿನಾಯ್ತಿ, ಬಂಡವಾಳ ಹೂಡಿಕೆ ಮತ್ತು ಡಿಜಿಟಲ್ ಆರ್ಥಿಕತೆಗೆ ಮತ್ತಷ್ಟು ಒತ್ತು ಸಿಗುವ ಭರವಸೆ ಇಟ್ಟುಕೊಂಡಿವೆ.

ಬಳಕೆದಾರರಿಂದ ಬೇಡಿಕೆಯು ಅಂದುಕೊಂಡಷ್ಟು ಹೆಚ್ಚಾಗುತ್ತಿಲ್ಲ. ಬಂಡವಾಳ ಹೂಡಿಕೆಗೆ ನೂರೆಂಟು ಅಡ್ಡಿಗಳಿವೆ. ರಫ್ತು ಪ್ರಮಾಣವೂ ಕುಗ್ಗುತ್ತಿದೆ. 

‘ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿ, ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ. ದೇಶದ ಆರ್ಥಿಕ ಕ್ಷೇತ್ರ ನೀತಿಗಳಲ್ಲಿ ಗಮನಾರ್ಹ ಬದಲಾವಣೆ ತರಲು ಸರ್ಕಾರಕ್ಕೆ ಅವಕಾಶವಿದೆ’ ಎಂದು ಲಾಯಲ್ಟಿ ಪ್ರೋಗ್ರಾಂಗಳನ್ನು ರೂಪಿಸುವ ಸಂಸ್ಥೆ ‘ಪೇಬ್ಯಾಕ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌತಮ್ ಕೌಶಿಕ್ ಅಭಿಪ್ರಾಯಪಡುತ್ತಾರೆ.

‘ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಕೆಲ ದಿಟ್ಟ ಕ್ರಮಗಳನ್ನು ಪ್ರಕಟಿಸಲಿದೆ ಎಂದು ನಾವು ಅಂದುಕೊಂಡಿದ್ದೇವೆ. ದೇಶೀಯ ಬಳಕೆ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ವೃದ್ಧಿಯಾಗುತ್ತಿಲ್ಲ. ಜಾಗತಿಕ ಆರ್ಥಿಕ ಪರಿಸ್ಥಿತಿಯೂ ಅಷ್ಟು ಚೆನ್ನಾಗಿಲ್ಲ. ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತಿದ್ದರೆ, ರಫ್ತು ಸಹ ಕುಂಠಿತಗೊಂಡಿದೆ’ ಎಂದು ಅವರು ಹೇಳಿದ್ದಾರೆ.

2018-19ರಲ್ಲಿ ಭಾರತದ ಆರ್ಥಿಕ ಪ್ರಗತಿಯು ಐದು ವರ್ಷಗಳ ಕನಿಷ್ಠ ಪ್ರಮಾಣಕ್ಕೆ ಅಂದರೆ ಶೇ6.8ಕ್ಕೆ ಕುಸಿದಿತ್ತು. ಹಿಂದಿನ ಆರ್ಥಿಕ ವರ್ಷದಲ್ಲಿ ಶೇ7.2ರ ಪ್ರಗತಿ ದಾಖಲಾಗಿತ್ತು.

‘ಮಧ್ಯಂತರ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದ ಕ್ರಮಗಳು ಈ ಬಾರಿಯೂ ಮುಂದುವರಿಯಬಹುದು. ತೆರಿಗೆ ರಿಯಾಯ್ತಿ, ಆರ್ಥಿಕ ಸದೃಢತೆ, ರೈತರಿಗೆ ಪ್ರೋತ್ಸಾಹ, ಡಿಜಿಟಲ್ ಆರ್ಥಿಕತೆಯತ್ತ ದಾಪುಗಾಲು ಹಾಕುವ ಕ್ರಮಗಳನ್ನು ಈ ಬಾರಿಯ ಬಜೆಟ್‌ನಲ್ಲಿಯೂ ನಿರೀಕ್ಷಿಸಬಹುದು’ ಎನ್ನುತ್ತಾರೆ myloancare.in ಸಂಸ್ಥೆಯ ಸಹಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಗುಪ್ತ.

ಈ ಬಾರಿಯೂ ಆದಾಯ ತೆರಿಗೆಯಲ್ಲಿ ಇನ್ನಷ್ಟು ರಿಯಾಯ್ತಿ ಸಿಗಬಹುದು. ಆಧಾರ್ ಬಳಸಿ ಎಲೆಕ್ಟ್ರಾನಿಕ್ ವಿಧಾನದ ಗ್ರಾಹಕ ಮಾಹಿತಿ ಸಂಗ್ರಹ (ಇಕೆವೈಸಿ) ವಿಧಾನದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಬಹುದು. ಡಿಜಿಟಲ್ ಆರ್ಥಿಕತೆಗೆ ಇನ್ನಷ್ಟು ಪ್ರೋತ್ಸಾಹ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲ್ ಇಂಡಿಯಾ 2.0 ಸಾಕಾರಗೊಳ್ಳಲು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಸರ್ಕಾರ ಘೋಷಿಸಬೇಕು ಎಂದು ಹಣಕಾಸು ಸೇವೆಗಳ ಆನ್‌ಲೈನ್ ಅಗ್ರಿಗೇಟರ್ ಇಂಡಿಯಾಲೆಂಡ್ಸ್‌ನ ಸ್ಥಾಪಕ ಕಾರ್ಯನಿರ್ವಹಣಾಧಿಕಾರಿ ಗೌರವ್ ಚೋಪ್ರಾ ಹೇಳುತ್ತಾರೆ.

‘ಸೈಬರ್ ಅಪರಾಧಗಳನ್ನು ತಡೆಯಲು ಸರ್ಕಾರ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇನ್ನೂ ಬಿಗಿಯಾದ ಕಾನೂನು ಮತ್ತು ನೀತಿಗಳನ್ನು ಘೋಷಿಸಬೇಕು. ಸೈಬರ್ ಆತಂಕಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ನವೋದ್ಯಮಗಳಿಗೆ ಇನ್ನಷ್ಟು ತೆರಿಗೆ ವಿನಾಯ್ತಿ ಮತ್ತು ವಿಶೇಷ ಪ್ರೋತ್ಸಾಹಕಗಳನ್ನು ಬಜೆಟ್‌ನಲ್ಲಿ ಘೋಷಿಸಬಹುದು ಎನ್ನುವ ನಿರೀಕ್ಷೆ ಇದೆ. ಮುಖ್ಯವಾಗಿ ಒಟ್ಟಾರೆ ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆಯಾಗಬಹುದು ಎಂದುಕೊಂಡಿದ್ದೇವೆ’ ಎನ್ನುತ್ತಾರೆ ಚೋಪ್ರಾ.

ಕಿಯೋಸ್ಕ್‌ ಬ್ಯಾಂಕಿಂಗ್ ಮತ್ತು ಬ್ಯಾಂಕ್‌ಗಳಿಗೆ ಪಾವತಿ ಸೇವೆ ಒದಗಿಸುವ ಎಫ್‌ಐಎ ಟೆಕ್ನಾಲಜಿ ಸರ್ವಿಸಸ್ ಆರ್ಥಿಕ ವ್ಯವಹಾರಗಳ ತಂತ್ರಜ್ಞಾನ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ನವೋದ್ಯಮಗಳ ನೆರವಿಗೆ ಬರಲು ಸರ್ಕಾರ ನೆರವಿನ ರೂಪುರೇಷೆ ಘೋಷಿಸಬೇಕು ಎಂದು ಸಲಹೆ ಮಾಡುತ್ತಾರೆ.

‘ಈ ಬಜೆಟ್ ಮೂಲಕ ಸರ್ಕಾರವು ಚಾಲ್ತಿ ಬಂಡವಾಳಕ್ಕೆ ಇರುವ ನಿಬಂಧನೆಗಳನ್ನು ಸಡಿಲಗೊಳಿಸುವ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ’ ಎಂದು ಎಫ್‌ಐಎ ಟೆಕ್ನಾಲಜಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀಮಾ ಪ್ರೇಮ್ ಅಭಿಪ್ರಾಯಪಡುತ್ತಾರೆ.

‘ಬಂಡವಾಳ ಸಂಗ್ರಹಿಸಲು ಇರುವ ತೊಡಕುಗಳನ್ನು ನಿವಾರಿಸುವುದರ ಜೊತೆಗೆ ಆರ್ಥಿಕ ಸೇರ್ಪಡೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದ ಬಳಿ ಇರುವ ಹೆಚ್ಚುವರಿ ನಿಧಿಯನ್ನು ಫಿನ್‌ಟೆಕ್ ಕಂಪನಿಗಳಿಗೆ ಬಂಡವಾಳ ರೂಪದಲ್ಲಿ ಒದಗಿಸುವ ಅಗತ್ಯವಿದೆ’ ಎಂದು ಪ್ರೇಮ್ ಹೇಳುತ್ತಾರೆ.

ವೈಯಕ್ತಿಕ ಸಾಲ (ಪರ್ಸನಲ್ ಲೋನ್), ಗ್ರಾಹಕ ಉತ್ಪನ್ನಗಳ ಖರೀದಿಗೆ ಸಾಲ (ಕನ್ಸೂಮರ್ ಲೋನ್), ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಾಲ (ಎಸ್‌ಎಂಇ ಲೆಂಡಿಂಗ್) ಒದಗಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಇನ್‌ಕ್ರೆಡ್, ದೇಶೀಯ ಬಳಕೆ ಪ್ರಮಾಣ ಹೆಚ್ಚಿಸುವ ಮೂಲಕ ಪ್ರಗತಿದರವನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿರುತ್ತೆ ಎಂದು ಅಭಿಪ್ರಾಯಪಟ್ಟಿದೆ.

‘ಜನರ ಬಳಿ ಕೈ ಖರ್ಚಿಗೆ ಕಾಸು ನಿಲ್ಲುವಂತೆ ಮಾಡಬೇಕು. ಉದ್ಯೋಗ ಸೃಷ್ಟಿಗೆ ಮತ್ತು ಹಣಕಾಸು ನಿಯಮಗಳಲ್ಲಿ ಅಗತ್ಯ ಬದಲಾವಣೆಗೆ ಹೆಚ್ಚು ಗಮನ ನೀಡಬೇಕು’ ಎಂದು ಇನ್‌ಕ್ರೆಡ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಪಿಂದರ್ ಸಿಂಗ್ ಹೇಳುತ್ತಾರೆ.

ನಿಯೊ (NiYO) ಸಹಸ್ಥಾಪಕ ಮತ್ತು ಸಿಇಒ ವಿನಯ್ ಬಗ್ರಿ ಅವರಿಗೆ ‘ಫಿನ್‌ಟೆಕ್ ನವೋದ್ಯಮಗಳ ಸುಲಲಿತ ಕಾರ್ಯನಿರ್ವಹಣೆಗೆ ಪೂರಕ ವಾತಾವರಣ ರೂಪಿಸಲು ಸರ್ಕಾರ ಅಗತ್ಯ ಗಮನ ಕೊಡುತ್ತದೆ. ಇಕೆವೈಸಿ ನಿಷೇಧಿಸಿದ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ಉಂಟಾಗಿರುವ ತೊಂದರೆಗಳನ್ನು ಸರಿಪಡಿಸುತ್ತದೆ’ ಎನ್ನುವ ವಿಶ್ವಾಸ ಇದೆ.

‘ಡಿಜಿಟಲ್ ಇಂಡಿಯಾ 2.0 ಹೆಸರಿನಲ್ಲಿ ಸರ್ಕಾರವು ಹೊಸ ಸುಧಾರಣಾ ಕ್ರಮಗಳನ್ನು ಘೋಷಿಸುತ್ತದೆ. ಫಿನ್‌ಟೆಕ್ ಕಂಪನಿಗಳು ಮತ್ತು ಪಾವತಿ ಉದ್ಯಮದಲ್ಲಿರುವ (ಪೇಮೆಂಟ್) ಕಂಪನಿಗಳಿಗೆ ತೆರಿಗೆ ವಿನಾಯ್ತಿ ಘೋಷಿಸುತ್ತದೆ’ ಎನ್ನುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.