ತೈಲ ಬೆಲೆ ಏರಿಕೆ: ನಿರ್ಮಲಾ ಸೀತಾರಾಮನ್ ಸಮರ್ಥನೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 137 ದಿನಗಳವರೆಗೆ ಪರಿಷ್ಕರಿಸದೆ ಇದ್ದ ಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಪೂರೈಕೆ ವ್ಯವಸ್ಥೆಯಲ್ಲಿ ಅಡಚಣೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆ ಆಗಿರುವುದು ‘ಎರಡು ವಾರಗಳ’ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ರಷ್ಯಾ ದೇಶವು ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ಇದಕ್ಕೂ ಕೆಲವು ದಿನಗಳ ಮೊದಲು ಕಚ್ಚಾ ತೈಲ ಬೆಲೆ ಏರಿಕೆ ಆರಂಭವಾಯಿತು. ಭಾರತ ಖರೀದಿಸುವ ಕಚ್ಚಾ ತೈಲದ ಬೆಲೆಯು ಫೆಬ್ರುವರಿ 24ರಂದು ಬ್ಯಾರೆಲ್‌ಗೆ 100.71 ಡಾಲರ್ ಇತ್ತು. ಇದು 2021ರ ನವೆಂಬರ್‌ನಲ್ಲಿ 82 ಡಾಲರ್ ಆಗಿತ್ತು.
ಒಂಬತ್ತು ದಿನಗಳಲ್ಲಿ ಎಂಟು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ
ಮಾರ್ಚ್ 9ರಂದು ಕಚ್ಚಾ ತೈಲ ಬೆಲೆಯು 128 ಡಾಲರ್ ಆಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಾರ್ಚ್ 22ರಿಂದ ದರ ಪರಿಷ್ಕರಣೆಯನ್ನು ಮತ್ತೆ ಆರಂಭಿಸಿವೆ. ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ, ‘ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆಯು ಎರಡು ವಾರಗಳಿಂದ ಆಗುತ್ತಿದೆ’ ಎಂದು ಹೇಳಿದರು.
ಮಾರ್ಚ್ 22ರ ನಂತರದ ಎಂಟು ದಿನಗಳಲ್ಲಿ ಆಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ದಾಖಲೆಯ ಮಟ್ಟದ್ದು. ‘ಕಚ್ಚಾ ತೈಲ ಬೆಲೆ ಏರಿಕೆಗೆ ಪ್ರತಿಯಾಗಿ ಕೇಂದ್ರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ನಿರ್ಮಲಾ ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬಾಂಡ್ ಹೊರಡಿಸಿದ್ದ ಕ್ರಮವನ್ನು ಟೀಕಿಸಿದರು. ‘ಒಂದು ದಶಕಕ್ಕೂ ಹಿಂದೆ ತೈಲೋತ್ಪನ್ನಗಳ ಗ್ರಾಹಕರಿಗೆ ನೀಡಿದ್ದ ಸಬ್ಸಿಡಿಗೆ ಇಂದಿನ ತೆರಿಗೆ ಪಾವತಿದಾರರು ಬೆಲೆ ತೆರುತ್ತಿದ್ದಾರೆ. ಇನ್ನೂ ಐದು ವರ್ಷಗಳವರೆಗೆ ಅವರು ಬೆಲೆ ತೆರುವುದು ಮುಂದುವರಿಯಲಿದೆ. ಏಕೆಂದರೆ, ಬಾಂಡ್‌ಗಳ ನಗದೀಕರಣವು 2026ರವರೆಗೆ ಚಾಲ್ತಿಯಲ್ಲಿ ಇರಲಿದೆ’ ಎಂದರು. ನಗದೀಕರಣ ಆಗಲಿರುವ ಮೊತ್ತವು ₹ 2 ಲಕ್ಷ ಕೋಟಿ ಎಂದು ತಿಳಿಸಿದರು.
ಯುಪಿಎ ಅವಧಿಗಿಂತ ಶೇ.65ರಷ್ಟು ಹೆಚ್ಚು ಎಫ್ಡಿಐ ಹರಿದು ಬಂದಿದೆ: ನಿರ್ಮಲಾ
ತೈಲ ಬಾಂಡ್‌ಗಳನ್ನು ಮೊದಲಿಗೆ ಹೊರಡಿಸಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದು ವಿರೋಧ ಪಕ್ಷಗಳು ಮಾಡಿದ ಆರೋಪಕ್ಕೆ ಪ್ರತಿಯಾಗಿ ನಿರ್ಮಲಾ ಅವರು, ‘ವಾಜಪೇಯಿ ನೇತೃತ್ವದ ಸರ್ಕಾರವು ₹ 9 ಸಾವಿರ ಕೋಟಿ ಮೌಲ್ಯದ ಬಾಂಡ್ ವಿತರಿಸಿತ್ತು. ಆದರೆ ಯುಪಿಎ ಸರ್ಕಾರವು ₹ 2 ಲಕ್ಷ ಕೋಟಿ ಮೌಲ್ಯದ ಬಾಂಡ್ ವಿತರಣೆ ಮಾಡಿದೆ’ ಎಂದು ಉತ್ತರಿಸಿದರು.
ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಒಂದು ಬಾರಿ ಮಾತ್ರ ಬಾಂಡ್ ನೀಡಲಾಯಿತು. ಯುಪಿಎ ಅವಧಿಯಲ್ಲಿ ನಿರಂತರವಾಗಿ ಬಾಂಡ್ ನೀಡಲಾಯಿತು ಎಂದು ನಿರ್ಮಲಾ ದೂರಿದರು. ‘ಕಚ್ಚಾ ತೈಲ ಬೆಲೆ ದುಬಾರಿ ಆಗಿದ್ದಾಗ, ಅದಕ್ಕೆ ಹಣಕಾಸಿನ ನೆರವು ಒದಗಿಸಲು ಪ್ರಾಮಾಣಿಕ ಮಾರ್ಗ ಇದೆ. ನೆರವು ಒದಗಿಸುವ ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸುವ, ಇನ್ನೊಂದು ಸರ್ಕಾರ ಅದಕ್ಕಾಗಿ ಹಣ ಪಾವತಿಸಬೇಕಾದ ಸಂದರ್ಭ ಸೃಷ್ಟಿಸುವ ಕೆಲಸವನ್ನು ನಾವು ಮಾಡಿಲ್ಲ’ ಎಂದೂ ಹೇಳಿದರು.
ಒಎನ್ಜಿಸಿ: ಶೇ 1.5ರಷ್ಟು ಷೇರು ಮಾರಲಿರುವ ಕೇಂದ್ರ
ರಷ್ಯಾ–ಉಕ್ರೇನ್ ಸಂಘರ್ಷವು ಹಲವು ಸವಾಲುಗಳನ್ನು ಸೃಷ್ಟಿಸಿದ್ದರೂ, ಹಣದುಬ್ಬರ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.