ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಭಾರತದಲ್ಲಿ ಹೆಚ್ಚಿದ ಹೂಡಿಕೆ

ಹಣಕಾಸು ಸೇವೆಗಳ ವಲಯದತ್ತ ಗಮನ; ಐ.ಟಿ. ಷೇರಿಗೆ ನಿರಾಸಕ್ತಿ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಹಣ ತೊಡಗಿಸಲು ವಲಯಗಳಿಗಿಂತಲೂ ಹೆಚ್ಚಾಗಿ ದೇಶದಲ್ಲಿನ ಹಣದುಬ್ಬರ, ಜಿಡಿಪಿ ಬೆಳವಣಿಗೆಯಂತಹ ನಿರ್ದಿಷ್ಟ ಅಂಶಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದರು.

ಹೂಡಿಕೆದಾರರು ಜನವರಿ–ಫೆಬ್ರುವರಿ ಅವಧಿಯಲ್ಲಿ ಭಾರತದಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದು, ಚೀನಾದಲ್ಲಿ ಷೇರುಗಳನ್ನು ಖರೀದಿ ಸಿದ್ದಾರೆ. ಈ ಅವಧಿಯಲ್ಲಿ ಭಾರತದಿಂದ ₹34,626 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆ ಬಳಿಕ ಮಾರ್ಚ್‌ನಿಂದಲೂ ಚೀನಾದಲ್ಲಿ ಷೇರುಗಳನ್ನು ಮಾರಾಟ ಮಾಡುವ ಮತ್ತು ಭಾರತದಲ್ಲಿ ಖರೀದಿಸುವ ಪ್ರವೃತ್ತಿಯನ್ನು ಹೂಡಿಕೆದಾರರು ಅನುಸರಿಸುತ್ತಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜನವರಿ–ಫೆಬ್ರುವರಿ ಅವಧಿಯಲ್ಲಿ ಹಣಕಾಸು ಸೇವೆಗಳ ವಲಯದಿಂದ ₹15,744 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿತ್ತು. ಆದರೆ, ಜೂನ್‌ನಲ್ಲಿ ₹19,229 ಕೋಟಿ ಹೂಡಿಕೆ ಮಾಡಲಾಗಿದೆ. ಹೀಗಾಗಿ ಹಣಕಾಸು ವಲಯದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಭಾರತದ ಷೇರುಪೇಟೆಗಳ ಮುನ್ನೋಟದ ಕುರಿತು ಹೂಡಿಕೆದಾರರು ಆಶಾವಾದ ಹೊಂದಿದ್ದಾರೆ. ಇದರ ಜೊತೆಗೆ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರುವುದು ಹಾಗೂ ಕಾರ್ಪೊರೇಟ್ ವಲಯದ ಗಳಿಕೆ ಹೆಚ್ಚಾಗುವ ನಿರೀಕ್ಷೆಯು ಸಹ ಷೇರುಪೇಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ತೊಡಗಿಸಲು ಉತ್ತೇಜನ ನೀಡುತ್ತಿವೆ. ಅಮೆರಿಕವು ಆರ್ಥಿಕ ಹಿಂಜರಿತ ಅನುಭವಿಸುವ ಸಾಧ್ಯತೆಯೂ ಕಡಿಮೆ ಆಗುತ್ತಿರುವುದು ಹೂಡಿಕೆದಾರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದರು.

ಜುಲೈ 7ರವರೆಗೆ ನಡೆದಿರುವ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ₹21,943 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೂಡಿಕೆಯ ಈ ಪ್ರಮಾಣವನ್ನು ಗಮನಿಸಿದರೆ ಮೇ ಮತ್ತು ಜೂನ್‌ ತಿಂಗಳಿಗಿಂತಲೂ ಜುಲೈನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ ಎಂದು ವಿಜಯಕುಮಾರ್‌
ಅಭಿಪ್ರಾಯಪಟ್ಟರು. ಮೇನಲ್ಲಿ ₹43,838 ಕೋಟಿ ಮತ್ತು ಜೂನ್‌ನಲ್ಲಿ ₹47,148 ಕೋಟಿ ಹೂಡಿಕೆ ಆಗಿದೆ.

ಹಣಕಾಸು ಸೇವೆಗಳು, ಆಟೊಮೊಬೈಲ್‌, ಬಂಡವಾಳ ಸರಕುಗಳು ಮತ್ತು ನಿರ್ಮಾಣ ವಲಯಗಳಲ್ಲಿನ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅವರು ಖರೀದಿಸುತ್ತಿದ್ದಾರೆ. ಐ.ಟಿ. ವಲಯದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT