ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ತ್ರೈಮಾಸಿಕ: ಕೋವಿಡ್‌ಗೂ ಮುಂಚಿನ ಮಟ್ಟ ದಾಟಿದ ಜಿಡಿಪಿ ಬೆಳವಣಿಗೆ

ಜಿಡಿಪಿ ಶೇ 8.4ರಷ್ಟು ಬೆಳವಣಿಗೆ
Last Updated 30 ನವೆಂಬರ್ 2021, 16:49 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8.4ರಷ್ಟು ಬೆಳವಣಿಗೆ ಕಂಡಿದ್ದು, ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿದೆ.

ಭಾರತದ ಆರ್ಥಿಕತೆಯು ಈ ವರ್ಷ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯನ್ನು ದಾಖಲಿಸುವ ಹಾದಿಯಲ್ಲಿದೆ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ 20.1ರಷ್ಟು ಬೆಳವಣಿಗೆ ಕಂಡಿತ್ತು. ಇದಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆಯು ಇಳಿಕೆ ಆಗಿದೆ. ಆದರೆ, ಹೋಲಿಕೆಯ ಮಟ್ಟವಾದ ಹಿಂದಿನ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಭಾರಿ ಕುಸಿತ (ಶೇ (–) 7.4) ಕಂಡಿದ್ದು ಕೂಡ, ಈ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಇಷ್ಟಿರುವುದಕ್ಕೆ ಒಂದು ಕಾರಣ.

ಕೋವಿಡ್‌ ನಿಯಂತ್ರಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಜಿಡಿಪಿ ಬೆಳವಣಿಗೆ ನಕಾರಾತ್ಮಕ ಮಟ್ಟ ತಲುಪಿತ್ತು.

ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಸತತ ನಾಲ್ಕನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಸಕಾರಾತ್ಮಕ ಬೆಳವಣಿಗೆ ಕಂಡಂತಾಗಿದೆ.

ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದರಿಂದ ಜನರು ಸರಕು ಮತ್ತು ಸೇವೆಗಳ ಖರೀದಿಗೆ ಮಾಡುತ್ತಿರುವ ಖರ್ಚಿನಲ್ಲಿ ಏರಿಕೆ ಕಂಡುಬಂದಿದೆ. ಹೆಚ್ಚು ಜನರು ಲಸಿಕೆ ಪಡೆದಿದ್ದರಿಂದ ಈ ಅವಧಿಯಲ್ಲಿ ಕೋವಿಡ್‌ ತೀವ್ರತೆಯೂ ಕಡಿಮೆ ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್–ಸೆಪ್ಟೆಂಬರ್‌ ಅವಧಿ) ಜಿಡಿಪಿಯು ಶೇ 13.7ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ (–) 15.9ರಷ್ಟು ಇಳಿಕೆ ಕಂಡಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ನೀಡಿದೆ.

ತಯಾರಿಕಾ ವಲಯ: ಎನ್‌ಎಸ್‌ಒ ಮಾಹಿತಿಯ ಪ್ರಕಾರ, ತಯಾರಿಕಾ ವಲಯವು ಎರಡನೇ ತ್ರೈಮಾಸಿಕದಲ್ಲಿ ಶೇ 5.5ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ (–) 1.5ರಷ್ಟು ಇಳಿಕೆ ಕಂಡಿತ್ತು. ಕೃಷಿ ವಲಯ ಶೇ 4.5ರಷ್ಟು, ನಿರ್ಮಾಣ ವಲಯ ಶೇ 7.5ರಷ್ಟು, ಗಣಿ ವಲಯ ಶೇ 15.4ರಷ್ಟು ಬೆಳವಣಿಗೆ ಕಂಡಿವೆ.

ಎರಡಂಕಿ ಪ್ರಗತಿ ನಿರೀಕ್ಷೆ: ಸಿಇಎ

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್‌ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ 13.7ರಷ್ಟು ಬೆಳವಣಿಗೆ ಕಂಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತಲೂ ತುಸು ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಲಿದ್ದು, ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿತ್ತೀಯ ಕೊರತೆ ₹ 5.47 ಲಕ್ಷ ಕೋಟಿ

ದೇಶದ ವಿತ್ತೀಯ ಕೊರತೆಯು ಅಕ್ಟೋಬರ್‌ ತಿಂಗಳ ಅಂತ್ಯಕ್ಕೆ ₹ 5.47 ಲಕ್ಷ ಕೋಟಿಗಳಷ್ಟಾಗಿದೆ. ಬಜೆಟ್‌ ಅಂದಾಜಿನ ಪ್ರಕಾರ ಶೇ 36.3ರಷ್ಟಾಗಿದೆ.

ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವಿತ್ತೀಯ ಕೊರತೆಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಸಿಜಿಎ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯು ಜಿಡಿಪಿಯ ಶೇ 6.8ರಷ್ಟು (₹ 15.06 ಲಕ್ಷ ಕೋಟಿಗಳಷ್ಟು) ಇರುವ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT