ಬುಧವಾರ, ಅಕ್ಟೋಬರ್ 20, 2021
23 °C

ಜಿಡಿಪಿ ದಾಖಲೆಯ ಬೆಳವಣಿಗೆ: ಜೂನ್‌ ತ್ರೈಮಾಸಿಕದಲ್ಲಿ ಶೇ 20.1ರಷ್ಟು ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಕಾರಣದಿಂದಾಗಿ ಉಂಟಾಗಿದ್ದ ಕುಸಿತದಿಂದ ಮೇಲೆದ್ದು ಬಂದಿರುವ ದೇಶದ ಅರ್ಥ ವ್ಯವಸ್ಥೆಯು, ಏಪ್ರಿಲ್‌–ಜೂನ್‌ ಅವಧಿಯಲ್ಲಿ ದಾಖಲೆಯ ಗರಿಷ್ಠ ಮಟ್ಟದ ತ್ರೈಮಾಸಿಕ ಬೆಳವಣಿಗೆಯನ್ನು ಕಂಡಿದೆ. ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 20.1ರಷ್ಟು ಇತ್ತು ಎಂದು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.

ತಯಾರಿಕಾ ವಲಯದಲ್ಲಿ ಭಾರಿ ಬೆಳವಣಿಗೆ ಸಾಧ್ಯವಾಗಿದ್ದು, ಕಟ್ಟಡ ನಿರ್ಮಾಣ ವಲಯದಲ್ಲಿ ಒಳ್ಳೆಯ ಚೇತರಿಕೆ ಕಂಡುಬಂದಿದ್ದು ಜಿಡಿಪಿಯ ಈ ಬೆಳವಣಿಗೆಗೆ ಕಾರಣ. ಹಿಂದಿನ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ (–)24.4ರಷ್ಟು ಕುಸಿತ ಕಂಡಿತ್ತು. ಹೋಲಿಕೆಯ ಮಟ್ಟವಾದ ಹಿಂದಿನ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಭಾರಿ ಕುಸಿತ ಕಂಡಿದ್ದು ಕೂಡ, ಈ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಇಷ್ಟಿರುವುದಕ್ಕೆ ಒಂದು ಕಾರಣ.

ಏಪ್ರಿಲ್–ಜೂನ್ ಅವಧಿಯಲ್ಲಿ ತಯಾರಿಕಾ ವಲಯವು ಶೇ 49.6ರಷ್ಟು ಬೆಳವಣಿಗೆ ಸಾಧಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ (–)36ರಷ್ಟು ಕುಸಿತ ಆಗಿತ್ತು. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದ ನಿರ್ಮಾಣ ಚಟುವಟಿಕೆಗಳು ಈ ಬಾರಿ ಶೇ 68.3ರಷ್ಟು ಏರಿಕೆ ಕಂಡಿವೆ. ಗಣಿಗಾರಿಕೆ ವಲಯದಲ್ಲಿ ಶೇ 18ರಷ್ಟು ಏರಿಕೆ ಈ ಬಾರಿ ದಾಖಲಾಗಿದೆ. ವಾಣಿಜ್ಯ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಅದಕ್ಕೆ ಸಂಬಂಧಿಸಿದ ಸೇವಾ ವಲಯದ ಬೆಳವಣಿಗೆಯು ಶೇ 34.3ರಷ್ಟು ಆಗಿದೆ.

ಕೋವಿಡ್‌ ಎರಡನೆಯ ಅಲೆಯ ಪರಿಣಾಮ ಏನೇ ಇದ್ದರೂ 2022ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಾಲಿ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 11ರ ಆಸುಪಾಸಿನಲ್ಲಿ ಇರಲಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಖಾಸಗಿ ವಲಯದಿಂದ ಬರುತ್ತಿರುವ ಬೇಡಿಕೆಗಳು ಹಾಗೂ ಆಗುತ್ತಿರುವ ಹೂಡಿಕೆಗಳು ಕೋವಿಡ್‌ಗೂ ಮೊದಲಿನ ಮಟ್ಟಕ್ಕಿಂತ ಕೆಳಗೆ ಇವೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

‘ತಯಾರಿಕಾ ವಲಯ ಹಾಗೂ ನಿರ್ಮಾಣ ವಲಯಗಳು ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿನ ಬೆಳವಣಿಗೆಗೆ ಪ್ರಮುಖ ಕಾರಣಗಳು. ಆದರೆ, ಈ ಎಲ್ಲ ವಲಯಗಳಲ್ಲಿನ ಜೂನ್‌ ತ್ರೈಮಾಸಿಕದಲ್ಲಿನ ಚಟುವಟಿಕೆಗಳು ಕೋವಿಡ್‌ಗೂ ಮೊದಲಿನ ಸ್ಥಿತಿಗಿಂತ ಕಡಿಮೆ ಮಟ್ಟದಲ್ಲಿ ಇವೆ. ಕೃಷಿ ಮತ್ತು ವಿದ್ಯುತ್‌ ವಲಯಗಳು ಮಾತ್ರ ಕೋವಿಡ್‌ಗೂ ಮೊದಲಿನ ಮಟ್ಟಕ್ಕಿಂತ ಮೇಲಕ್ಕೆ ಬಂದಿವೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಹೇಳಿದ್ದಾರೆ.

‘ಹಿಂದಿನ ವರ್ಷದ ಕುಸಿತದಿಂದ ನಾವು ಇನ್ನೂ ಪೂರ್ತಿಯಾಗಿ ಹೊರಬಂದಿಲ್ಲ’ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ. ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೋವಿಡ್‌ನ ಎರಡನೆಯ ಅಲೆಯು ತೀವ್ರವಾಗಿ ಇದ್ದರೂ ಜಿಡಿಪಿ ಬೆಳವಣಿಗೆ ಶೇ 20.1ರಷ್ಟು ಇದ್ದುದು, ಅರ್ಥ ವ್ಯವಸ್ಥೆಯು ಕುಸಿತ ಕಂಡಷ್ಟೇ ವೇಗವಾಗಿ ಚೇತರಿಕೆ ಕಾಣಲಿದೆ ಎಂದು ಸರ್ಕಾರ ಮಾಡಿದ್ದ ಅಂದಾಜಿಗೆ ಪೂರಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ತಲುಪಿಲ್ಲ ಕೋವಿಡ್‌ ಪೂರ್ವದ ಸ್ಥಿತಿ
ನವದೆಹಲಿ (ಪಿಟಿಐ):
ಹಿಂದಿನ ವರ್ಷದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಜಿಡಿಪಿಯು ಬೆಳವಣಿಗೆ ಕಂಡಿದ್ದರೂ, ಕೋವಿಡ್‌ಗೂ ಮೊದಲಿನ 2019ರ ಏಪ್ರಿಲ್‌–ಜೂನ್‌ ತ್ರೈಮಾಸಿಕದ ಮಟ್ಟಕ್ಕೆ ಹೋಲಿಸಿದರೆ ಜಿಡಿಪಿಯು ಶೇಕಡ 9.2ರಷ್ಟು ಕಡಿಮೆ ಇದೆ.

ಭಾರತ ಅರ್ಥ ವ್ಯವಸ್ಥೆಯು ಈಗಲೂ ಕೋವಿಡ್‌ ಪೂರ್ವದ ಸ್ಥಿತಿಯನ್ನು ತಲುಪಿಲ್ಲ. 2019ರ ಏಪ್ರಿಲ್‌–ಜೂನ್ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆಯ ಗಾತ್ರವು ₹ 35.66 ಲಕ್ಷ ಕೋಟಿ ಆಗಿತ್ತು. ಇದು 2020ರ ಜೂನ್ ತ್ರೈಮಾಸಿಕದಲ್ಲಿ ₹ 26.95 ಲಕ್ಷ ಕೋಟಿಗೆ ಕುಸಿಯಿತು. ಈ ಬಾರಿಯ ಜೂನ್ ತ್ರೈಮಾಸಿಕದಲ್ಲಿ ಇದು ₹ 32.38 ಲಕ್ಷ ಕೋಟಿಗೆ ಹೆಚ್ಚಳ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು