ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್‌ ತ್ರೈಮಾಸಿಕದ ಜಿಡಿಪಿ ಪ್ರಗತಿ ಶೇ 7.1: ಎಸ್‌ಬಿಐ ಅರ್ಥಶಾಸ್ತ್ರಜ್ಞರು

Published : 26 ಆಗಸ್ಟ್ 2024, 15:37 IST
Last Updated : 26 ಆಗಸ್ಟ್ 2024, 15:37 IST
ಫಾಲೋ ಮಾಡಿ
Comments

ಮುಂಬೈ: 2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ನೈಜ ಜಿಡಿಪಿ ಬೆಳವಣಿಗೆ ಶೇ 7.1ಕ್ಕೆ ಇಳಿಯಲಿದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಕಳೆದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 7.8ರಷ್ಟು ದಾಖಲಾಗಿತ್ತು. ಒಟ್ಟು ಮೌಲ್ಯ ವರ್ಧನೆಯ (ಜಿವಿಎ) ಬೆಳವಣಿಗೆಯು ಶೇ 6.7 ರಿಂದ ಶೇ 6.8ರಷ್ಟಾಗಲಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 7ರಷ್ಟು ದಾಖಲಾಗಿತ್ತು ಎಂದು ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿ ಸೋಮವಾರ ಹೇಳಿದೆ. 

ತಯಾರಿಕಾ ವಲಯದ ಚಟುವಟಿಕೆಯಲ್ಲಿ ಮಂದಗತಿ ಮತ್ತು ಲೋಕಸಭಾ ಚುನಾವಣೆಯಿಂದ ಸರ್ಕಾರದ ವೆಚ್ಚವು ಕಡಿಮೆಯಾಗಿದ್ದರಿಂದ ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆ ನಿಧಾನಗೊಂಡಿದೆ. ಇದರಿಂದ ಬೆಳವಣಿಗೆ ಇಳಿಕೆಯಾಗಲಿದೆ.

ಅನಿಶ್ಚಿತ ಜಾಗತಿಕ ಬೆಳವಣಿಗೆಯ ಮುನ್ನೋಟ ಮತ್ತು ಹಣದುಬ್ಬರದ ಇಳಿಕೆಯನ್ನು ಗಮನಿಸಿದರೆ, ಬಡ್ಡಿ ದರ ಕಡಿತಗೊಳಿಸುವ ಅವಕಾಶವಿದೆ ಎಂದು ಹೇಳಿದೆ.

ಕೈಗಾರಿಕಾ ಚಟುವಟಿಕೆ, ಸೇವಾ ವಲಯದ ಚಟುವಟಿಕೆ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಜೊತೆ ಬೆಸೆದುಕೊಂಡಿರುವ 41 ಸೂಚ್ಯಂಕಗಳನ್ನು ಆಧರಿಸಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಅಂದಾಜಿಸುವ ‘ನೌವ್‌ಕಾಸ್ಟಿಂಗ್’ ಮಾದರಿಯನ್ನು ಎಸ್‌ಬಿಐ ರೂಪಿಸಿದೆ.

ಮಾರಾಟದ ಪ್ರಮಾಣ ಇಳಿಕೆ ಮತ್ತು ತಯಾರಿಕಾ ವಲಯದ ಕಂಪನಿಗಳ ಸಿಬ್ಬಂದಿ ವೆಚ್ಚದಲ್ಲಿ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ, ಲಾಭದ ಪ್ರಮಾಣವು ಕುಸಿದಿದ್ದು, ತಯಾರಿಕಾ ವಲಯದ ಬೆಳವಣಿಗೆಯನ್ನು ಕಡಿಮೆ ಮಾಡುತ್ತಿದೆ ಎಂದು ವರದಿಯಲ್ಲಿ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

2024-25ರ ಆರ್ಥಿಕ ವರ್ಷದಲ್ಲಿ ಶೇ 7.5ರ ಬೆಳವಣಿಗೆಯ ಅಂದಾಜನ್ನು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹಾಗೆಯೇ ಉಳಿಸಿಕೊಂಡಿದ್ದಾರೆ. ಇದು ಆರ್‌ಬಿಐ ಅಂದಾಜು ಮಾಡಿದ ಶೇ 7.2ಕ್ಕಿಂತ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT