ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

EMI ಕಟ್ಟುವವರ ಪರವಾಗಿ ಬ್ಯಾಂಕುಗಳಿಗೆ ಈ ಪ್ರಮುಖ ಸೂಚನೆ ನೀಡಿದ RBI

ಬ್ಯಾಂಕ್‌, ಎನ್‌ಬಿಎಫ್‌ಸಿಗಳಿಗೆ ಆರ್‌ಬಿಐ ಸೂಚನೆ
Published 18 ಆಗಸ್ಟ್ 2023, 15:48 IST
Last Updated 18 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ಮುಂಬೈ: ಸಾಲವನ್ನು ಸಮಾನ ಕಂತುಗಳಲ್ಲಿ (ಇಎಂಐ) ತೀರಿಸುತ್ತ ಇರುವವರಿಗೆ, ನಿಶ್ಚಿತ ಬಡ್ಡಿ ದರ ವ್ಯವಸ್ಥೆಗೆ ಬದಲಾಗಲು ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೂಚನೆ ನೀಡಿದೆ.

ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಕೂಡ ಅವಕಾಶ ಕಲ್ಪಿಸಬೇಕು ಎಂದು ಆರ್‌ಬಿಐ ಹೇಳಿದೆ. ಬಡ್ಡಿ ದರ ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಾಲ ಮಾಡಿದವರು ಅದನ್ನು ತೀರಿಸಲಿಕ್ಕೇ ಆಗದ ಸ್ಥಿತಿಯಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ಆರ್‌ಬಿಐ ಈ ಸೂಚನೆ ನೀಡಿದೆ.

ಆರ್‌ಬಿಐ 2022ರ ಮೇ ತಿಂಗಳಿನಿಂದ ರೆಪೊ ದರವನ್ನು ಹೆಚ್ಚಿಸುತ್ತ ಬಂದಿದೆ. ಅದರ ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ದರವು ಹೆಚ್ಚಾಗಿದೆ. ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ರೆಪೊ ದರದ ಏರಿಳಿತಗಳಿಗೆ ಹೊಂದಿಕೊಂಡಿರುತ್ತದೆ. 2022ರ ಮೇ ತಿಂಗಳ ನಂತರದಲ್ಲಿ ರೆಪೊ ದರವು ಶೇ 2.50ರಷ್ಟು ಹೆಚ್ಚಾಗಿದೆ.

ಸಾಲದ ಮೇಲಿನ ಬಡ್ಡಿ ದರ ಹೆಚ್ಚಾದ ನಂತರದಲ್ಲಿ, ಹಲವು ಸಾಲಗಾರರು ಸಾಲ ಮರುಪಾವತಿಸಲು ಕಟ್ಟುವ ಇಎಂಐ ಕಂತು, ಅವರ ಸಾಲದ ಮೇಲಿನ ತಿಂಗಳ ಬಡ್ಡಿಯ ಮೊತ್ತಕ್ಕೂ ಸಾಲದಾಯಿತು. ಇಎಂಐ ಪಾವತಿಯಲ್ಲಿ ಯಾವುದೇ ಲೋಪ ಆಗದಿದ್ದರೂ, ಅಸಲು ಮೊತ್ತವು ಹಾಗೇ ಉಳಿಯಿತು. ತೀರಿಸದೆ ಉಳಿದ ಬಡ್ಡಿಯು ಅಸಲಿಗೆ ಸೇರಿ, ಅಸಲು ಮೊತ್ತ ಹೆಚ್ಚುತ್ತ ಹೋಯಿತು. ಇಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗದಂತೆ ನೋಡಿಕೊಳ್ಳಲು ಆರ್‌ಬಿಐ ಈ ಮಾರ್ಗಸೂಚಿ ಹೊರಡಿಸಿದೆ.

ಗ್ರಾಹಕರ ಒಪ್ಪಿಗೆ ಪಡೆಯದೆ, ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡದೆ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಿರುವ ಅಥವಾ ಇಎಂಐ ಮೊತ್ತವನ್ನು ಹೆಚ್ಚು ಮಾಡಿರುವ ದೂರುಗಳು ಬಂದಿವೆ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ
ಆರ್‌ಬಿಐ

ಆರ್‌ಬಿಐ ಸೂಚನೆಗಳು

ಇಎಂಐ ಆಧಾರಿತ ನಿಶ್ಚಿತವಲ್ಲದ ಬಡ್ಡಿ ದರದ ವೈಯಕ್ತಿಕ ಸಾಲ ನೀಡುವ ಸಂದರ್ಭದಲ್ಲಿ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಸಾಲ ಬಯಸಿದವರ ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಬೇಕು. * ಮುಂದಿನ ದಿನಗಳಲ್ಲಿ ಬಡ್ಡಿ ದರ ಹೆಚ್ಚಿದರೆ ವ್ಯಕ್ತಿಯ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಲು ಅಥವಾ ಇಎಂಐ ಮೊತ್ತವನ್ನು ಹೆಚ್ಚು ಮಾಡಲು ಅವಕಾಶ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. * ಬಡ್ಡಿ ದರದಲ್ಲಿ ಬದಲಾವಣೆ ತರುವ ಸಂದರ್ಭದಲ್ಲಿ ನೋಂದಾಯಿತ ಹಣಕಾಸು ಸಂಸ್ಥೆಗಳು ನಿಶ್ಚಿತ ಬಡ್ಡಿ ದರದ ವ್ಯವಸ್ಥೆಗೆ ಬದಲಾಗಲು ಗ್ರಾಹಕರಿಗೆ ಅವಕಾಶ ಕಲ್ಪಿಸಬೇಕು. ಇದಕ್ಕೆ ಅವು ತಮ್ಮ ಆಡಳಿತ ಮಂಡಳಿಯ ಮೂಲಕ ನಿಯಮ ರೂಪಿಸಬಹುದು. ಗ್ರಾಹಕರು ತಮ್ಮ ಸಾಲದ ಬಡ್ಡಿ ವ್ಯವಸ್ಥೆಯಲ್ಲಿ ಎಷ್ಟು ಬಾರಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಆಡಳಿತ ಮಂಡಳಿ ತೀರ್ಮಾನಿಸಬಹುದು. * ರೆಪೊ ದರದಲ್ಲಿ ಆಗುವ ಬದಲಾವಣೆಗಳು ಇಎಂಐ ಹಾಗೂ ಸಾಲದ ಮರುಪಾವತಿ ಅವಧಿಯ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ನೋಂದಾಯಿತ ಸಂಸ್ಥೆಗಳು ಸಾಲವನ್ನು ಮಂಜೂರು ಮಾಡುವಾಗ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ನಂತರ ಇಎಂಐ ಹೆಚ್ಚಳ ಅಥವಾ ಮರುಪಾವತಿ ಅವಧಿಯ ವಿಸ್ತರಣೆಯನ್ನು ಸೂಕ್ತ ರೀತಿಯಲ್ಲಿ ತಕ್ಷಣವೇ ತಿಳಿಸಬೇಕು. * ಹಾಲಿ ಸಾಲದ ಖಾತೆಗಳಿಗೆ ಹಾಗೂ ಹೊಸ ಸಾಲದ ಖಾತೆಗಳಿಗೆ ಈ ನಿಯಮಗಳು ಡಿಸೆಂಬರ್‌ 31ರೊಳಗೆ ಅನ್ವಯವಾಗುವಂತೆ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ಖಾತರಿಪಡಿಸಿಕೊಳ್ಳಬೇಕು. * ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಅಥವಾ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳುವ ಆಯ್ಕೆಯನ್ನು ಗ್ರಾಹಕನಿಗೆ ನೀಡಬೇಕು. ಅಲ್ಲದೆ ಇಎಂಐ ಮೊತ್ತವನ್ನು ತುಸು ಹೆಚ್ಚಿಸಿಕೊಂಡು ಮರುಪಾವತಿ ಅವಧಿಯನ್ನು ಕೂಡ ತುಸು ಹೆಚ್ಚಿಸಿಕೊಳ್ಳುವ ಅವಕಾಶ ಕೂಡ ಕೊಡಬಹುದು. * ಸಾಲವನ್ನು ಯಾವುದೇ ಸಂದರ್ಭದಲ್ಲಿ ಪೂರ್ತಿಯಾಗಿ ಮರುಪಾವತಿಸುವ ಆಂಶಿಕವಾಗಿ ಮರುಪಾವತಿ ಮಾಡುವ ಅವಕಾಶ ನೀಡಬೇಕು. ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಿದ ಪರಿಣಾಮವಾಗಿ ಸಾಲ ತೀರಿಸುವುದೇ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಬಾರದು. * ನೋಂದಾಯಿತ ಸಂಸ್ಥೆಗಳು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಅದುವರೆಗೆ ವಸೂಲು ಮಾಡಲಾದ ಅಸಲು ಹಾಗೂ ಬಡ್ಡಿ ಮೊತ್ತ ಇಎಂಐ ಮೊತ್ತ ಬಾಕಿ ಇರುವ ಇಎಂಐ ಮುಂತಾದ ವಿವರಗಳನ್ನು ಗ್ರಾಹಕರಿಗೆ ಒದಗಿಸಬೇಕು.

‘ದಂಡ ಶುಲ್ಕ ಮಾತ್ರ ದಂಡದ ರೂಪದ ಬಡ್ಡಿ ಇಲ್ಲ’

ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ತಮ್ಮ ವರಮಾನ ಹೆಚ್ಚಿಸಿಕೊಳ್ಳುವ ಕ್ರಮವಾಗಿ ‘ದಂಡದ ರೂಪದಲ್ಲಿ ಬಡ್ಡಿ’ ವಿಧಿಸುವ ಮಾರ್ಗ ತುಳಿಯುತ್ತಿರುವುದನ್ನು ತಡೆಯಲು ಆರ್‌ಬಿಐ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸಾಲ ಪಡೆದವರು ಸಾಲವನ್ನು ಸರಿಯಾಗಿ ಮರುಪಾವತಿ ಮಾಡದೆ ಇದ್ದಲ್ಲಿ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ‘ಸಕಾರಣ ಪ್ರಮಾಣದಲ್ಲಿ ದಂಡ ಶುಲ್ಕವನ್ನು’ ವಿಧಿಸಬಹುದು ಎಂದು ಹೇಳಿದೆ. 2024ರ ಜನವರಿ 1ರಿಂದ ಅನ್ವಯಿಸುವಂತೆ ಬ್ಯಾಂಕ್‌ ಹಾಗೂ ಇತರ ಹಣಕಾಸು ಸಂಸ್ಥೆಗಳು ಸಾಲದ ಮೇಲೆ ‘ದಂಡ ರೂಪದ ಬಡ್ಡಿ’ಯನ್ನು ವಿಧಿಸಲು ಅವಕಾಶ ಇರುವುದಿಲ್ಲ ಎಂದು ಆರ್‌ಬಿಐ ಅಧಿಸೂಚನೆ ಹೇಳಿದೆ. ‘ಗ್ರಾಹಕರಿಗೆ ವಿಧಿಸುವ ದಂಡ ಶುಲ್ಕವು ಸಕಾರಣ ಮಟ್ಟದಲ್ಲಿ ಇರಬೇಕು. ತಾರತಮ್ಯಕ್ಕೆ ಆಸ್ಪದ ಮಾಡಿಕೊಡುವಂತೆ ಇರಬಾರದು’ ಎಂದು ಹೇಳಿದೆ. ಆದರೆ ಈ ನಿರ್ದೇಶನಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಅನ್ವಯವಾಗುವುದಿಲ್ಲ. ‘ದಂಡ ಶುಲ್ಕವನ್ನು ವಿಧಿಸುವ ಉದ್ದೇಶ ಸಾಲ ಪಡೆದವರಲ್ಲಿ ಶಿಸ್ತನ್ನು ಮೂಡಿಸುವುದೇ ವಿನಾ ಆ ಶುಲ್ಕವನ್ನು ವರಮಾನ ಹೆಚ್ಚಿಸುವ ಉದ್ದೇಶಕ್ಕೆ ಬಳಸಿಕೊಳ್ಳಬಾರದು’ ಎಂದು ಆರ್‌ಬಿಐ ತಾಕೀತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT