ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಂಪನಿಗಳ ಲಾಭ ಶೇ 50 ಜಿಗಿತ

2021–22ನೇ ಸಾಲಿನ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಮೀಕ್ಷೆ ಹೇಳಿಕೆ
Last Updated 3 ಜನವರಿ 2023, 22:24 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಕಂಪನಿಗಳ ನಿವ್ವಳ ಲಾಭದ ಪ್ರಮಾಣವು 2021–22ರಲ್ಲಿ ಶೇಕಡ 50.87ರಷ್ಟು ಹೆಚ್ಚಳವಾಗಿದ್ದು,
₹ 2.49 ಲಕ್ಷ ಕೋಟಿಗೆ ತಲುಪಿದೆ. ಒಎನ್‌ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಪವರ್‌ ಗ್ರಿಡ್‌, ಎನ್‌ಟಿಪಿಸಿ ಮತ್ತು ಎಸ್‌ಎಐಎಲ್‌ ಲಾಭ ಗಳಿಕೆಯ ವಿಚಾರದಲ್ಲಿ ಮೊದಲ ಐದು ಸ್ಥಾನಗಳಲ್ಲಿವೆ.

ಹಿಂದಿನ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ
ನಿವ್ವಳ ಲಾಭವು ₹ 1.65 ಲಕ್ಷ ಕೋಟಿ ಆಗಿತ್ತು ಎಂದು 2021–22ನೇ ಸಾಲಿನ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಮೀಕ್ಷೆಯು ಹೇಳಿದೆ.

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ನಿವ್ವಳ ನಷ್ಟವು 2021–22ರಲ್ಲಿ ₹ 15 ಸಾವಿರ ಕೋಟಿಗೆ ಇಳಿಕೆಯಾಗಿದೆ. ಅದು ಹಿಂದಿನ ಹಣಕಾಸು ವರ್ಷದಲ್ಲಿ ₹ 23 ಸಾವಿರ ಕೋಟಿ ಆಗಿತ್ತು.

ಭಾರತ್‌ ಸಂಚಾರ್ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌), ಮಹಾನಗರ್ ಟೆಲಿಕಾಂ ನಿಗಮ್‌ ಲಿಮಿಟೆಡ್ (ಎಂಟಿಎನ್‌ಎಲ್‌),
ಏರ್ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್ ಲಿ, ಈಸ್ಟರ್ನ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್ ಮತ್ತು ಅಲಯನ್ಸ್ ಏರ್‌ ಏವಿಯೇಷನ್ ಲಿಮಿಟೆಡ್ ನಷ್ಟದಲ್ಲಿರುವ ಕಂಪನಿಗಳ ಪೈಕಿ ಪ್ರಮುಖವಾದವು.

‘ಕೇಂದ್ರ ಸರ್ಕಾರದ ಉದ್ದಿಮೆಗಳ ಕಾರ್ಯಾಚರಣೆ ವರಮಾನವು 2021–22ರಲ್ಲಿ ₹ 31.95 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ವರ್ಷದಲ್ಲಿ ಇದು ₹ 24.08 ಲಕ್ಷ ಕೋಟಿ ಆಗಿತ್ತು. ಅಂದರೆ ಕಾರ್ಯಾಚರಣೆ ವರಮಾನದಲ್ಲಿ ಶೇ 32.65ರಷ್ಟು ಹೆಚ್ಚಳವಾಗಿದೆ’ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕೇಂದ್ರ ಸರ್ಕಾರದ ಉದ್ಯಮಗಳು 2021–22ರಲ್ಲಿ ಘೋಷಿಸಿರುವ ಲಾಭಾಂಶದ (ಡಿವಿಡೆಂಡ್) ಮೊತ್ತ
₹ 1.15 ಲಕ್ಷ ಕೋಟಿ.

ಪೆಟ್ರೋಲಿಯಂ (ಸಂಸ್ಕರಣೆ ಮತ್ತು ಮಾರಾಟ), ಕಚ್ಚಾ ತೈಲ
ಮತ್ತು ಸಾರಿಗೆ, ಸರಕು ಸಾಗಣೆ ವಲಯಗಳಲ್ಲಿ ಉತ್ತಮ ವಹಿವಾಟು ಕಂಡುಬಂದ ಕಾರಣದಿಂದಾಗಿ ಕಾರ್ಯಾಚರಣೆ ವರಮಾನ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ.

ಕೇಂದ್ರ ಸರ್ಕಾರದ ಉದ್ದಿಮೆಗಳು ಕೇಂದ್ರದ ಬೊಕ್ಕಸಕ್ಕೆ ಎಕ್ಸೈಸ್‌ ಸುಂಕ, ಕಸ್ಟಮ್ಸ್ ಸುಂಕ, ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ, ಕೇಂದ್ರ
ದಿಂದ ಪಡೆದ ಸಾಲಕ್ಕೆ ಬಡ್ಡಿ, ಡಿವಿಡೆಂಡ್ ಮತ್ತು ಇತರ ಸುಂಕಗಳ ಮೂಲಕ ಪಾವತಿಸುವ ಮೊತ್ತವು 2021–22ರಲ್ಲಿ ₹ 5.07 ಲಕ್ಷ ಕೋಟಿ ಆಗಿದೆ. ಇದು ಹಿಂದಿನ ವರ್ಷದಲ್ಲಿ ₹ 4.97 ಲಕ್ಷ ಕೋಟಿ ಆಗಿತ್ತು.

ಕೇಂದ್ರಕ್ಕೆ ಹೆಚ್ಚು ಆದಾಯ ಕೊಡುವವರು

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಒಮಾನ್ ರಿಫೈನರೀಸ್, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT