ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ: ಸರ್ಕಾರದ ಆರ್ಥಿಕ ನೆರವು ಸಾಧ್ಯತೆ

Last Updated 25 ಮೇ 2021, 15:38 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನ ಎರಡನೆಯ ಅಲೆಯು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿರುವ ಕಾರಣ, ಅಗತ್ಯವಿರುವ ವಲಯಗಳಿಗೆ ಆರ್ಥಿಕ ನೆರವನ್ನು ಸೂಕ್ತ ಸಂದರ್ಭದಲ್ಲಿ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಸೇರಿದಂತೆ ಕೆಲವು ಆರ್ಥಿಕ ಆರೋಗ್ಯ ಸೂಚಕಗಳು ವಿಶ್ವಾಸ ಮೂಡಿಸುವಂತೆ ಇವೆ. ಮುಂದಿನ ದಿನಗಳಲ್ಲಿ ದೊರೆಯಲಿರುವ ಇನ್ನೂ ಕೆಲವು ಅಂಕಿ–ಅಂಶಗಳು ಆರ್ಥಿಕ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಇನ್ನಷ್ಟು ಸ್ಪಷ್ಟ ಚಿತ್ರಣ ನೀಡಲಿವೆ ಎಂದು ಮೂಲಗಳು ಹೇಳಿವೆ.

ಆತಿಥ್ಯ, ಪ್ರವಾಸೋದ್ಯಮ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿದ್ದವು. ಆ ಸಂದರ್ಭದಲ್ಲೇ ಎರಡನೆಯ ಅಲೆಯು ಜೋರಾಗಿ ಅಪ್ಪಳಿಸಿತು. ಈ ವಲಯಗಳಿಗೆ ಸರ್ಕಾರದ ಕಡೆಯಿಂದ ತುರ್ತಾಗಿ ಬೆಂಬಲದ ಅವಶ್ಯಕತೆ ಇದ್ದಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ದೇಶದಲ್ಲಿ ಕೃಷಿ ವಲಯದ ನಂತರ ಅತಿಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಿರುವ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ವಲಯದ ಮೇಲೆ ಎರಡನೆಯ ಅಲೆಯ ಪರಿಣಾಮವು ತೀವ್ರವಾಗಿದೆ. ಈ ವಲಯಕ್ಕೆ ಕೂಡ ಹಣಕಾಸಿನ ನೆರವಿನ ಅಗತ್ಯ ಇದೆ. ಈಗಾಗಲೇ ಜಾರಿಯಲ್ಲಿ ಇರುವ ತುರ್ತು ಸಾಲ ಖಾತರಿ ಯೋಜನೆಯ ಕೆಲವು ನಿಯಮಗಳಲ್ಲಿ ಬದಲಾವಣೆ ತಂದು, ಈ ವಲಯಕ್ಕೆ ತಕ್ಷಣದ ಸಹಾಯ ಒದಗಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಎಂಎಸ್‌ಎಂಇ ವಲಯದ 6.5 ಕೋಟಿ ಉದ್ಯಮಗಳು ದೇಶದ ಜಿಡಿಪಿಗೆ ಶೇಕಡ 30ರಷ್ಟು ಕೊಡುಗೆ ನೀಡುತ್ತಿವೆ. ಸ್ಥಳೀಯವಾಗಿ ಜಾರಿಗೆ ಬಂದಿರುವ ಲಾಕ್‌ಡೌನ್‌ ಕ್ರಮಗಳು ತೆರವಾದ ನಂತರ, ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಇಲ್ಲವಾದ ನಂತರ ಆರ್ಥಿಕ ಸಹಾಯ ಪ್ರಕಟಿಸಿದರೆ ಅದು ಉದ್ಯಮಗಳಿಗೆ ನೆರವಾಗಬಹುದು ಎಂದು ಮೂಲಗಳು ವಿವರಿಸಿವೆ.

ಅರ್ಥ ವ್ಯವಸ್ಥೆಯ ಯಾವ ವಲಯಗಳಿಗೆ ಆದ್ಯತೆ ನೀಡಬೇಕು, ಕೋವಿಡ್‌ ಎರಡನೆಯ ಅಲೆಯಿಂದಾಗಿ ತೊಂದರೆಗೆ ಒಳಗಾಗಿರುವ ಉದ್ಯಮ ವಲಯಗಳಿಗೆ ಸಂಬಂಧಿಸಿದಂತೆ ಬೇಡಿಕೆ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ನೀತಿ ಆಯೋಗವು ಚರ್ಚೆ ನಡೆಸಿದೆ ಎಂದು ಗೊತ್ತಾಗಿದೆ. ನೀತಿ ಆಯೋಗವು ಒಂದು ಕಾರ್ಯಯೋಜನೆಯನ್ನು ಸಿದ್ಧಪಡಿಸಿದ ನಂತರ, ಮುಂದೆ ಕೈಗೊಳ್ಳಬೇಕಾದ ಕ್ರಮ ಏನು ಎಂಬುದನ್ನು ಹಣಕಾಸು ಸಚಿವಾಲಯವು ತೀರ್ಮಾನಿಸಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT