ಗುರುವಾರ , ಮೇ 26, 2022
28 °C

ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಮಾನವ ಕೂದಲಿನ ರಫ್ತು ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ಕ್ರಮವನ್ನು ದೇಶದ ಕೂದಲು ಉದ್ಯಮ ಸ್ವಾಗತಿಸಿದೆ. ಭಾರತದಿಂದ ಉತ್ಪನ್ನದ ಕಳ್ಳಸಾಗಣೆಯನ್ನು ತಡೆಯಲು ಈ ಕ್ರಮ ನೆರವಾಗಲಿದೆ ಎಂದು ಉದ್ಯಮದ ಪ್ರಮುಖರು ಹೇಳಿದ್ದಾರೆ.

ಈ ಹಿಂದೆ ಯಾವುದೇ ನಿರ್ಬಂಧವಿಲ್ಲದೆ ಕೂದಲು ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ರಫ್ತುದಾರರು ವಾಣಿಜ್ಯ ಸಚಿವಾಲಯದ ವಿದೇಶಿ ವ್ಯಾಪಾರದ ಮಹಾನಿರ್ದೇಶಕ (ಡಿಜಿಎಫ್‌ಟಿ)ರಿಂದ ಅನುಮತಿ ಅಥವಾ ಪರವಾನಗಿ ಪಡೆದು ರಫ್ತು ಮಾಡಬೇಕಾಗುತ್ತದೆ.

‘ಮಾನವನ ಕೂದಲಿನ ರಫ್ತು ನೀತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗಕ್ಕೆ ಒಳಪಡಿಸಲಾಗಿದೆ’ ಎಂದು ಡಿಜಿಎಫ್‌ಟಿ ಸಂತೋಷ್ ಕುಮಾರ್ ಸಾರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕ್ರಮವನ್ನು ಸ್ವಾಗತಿಸಿರುವ ಕೂದಲು ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘದ ಸದಸ್ಯ ಸುನಿಲ್ ಎಮಾನಿ ‘ಇದು ಬಹುಕಾಲದ ಬೇಡಿಕೆಯಾಗಿತ್ತು. ಈ ಉದ್ಯಮವು ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದ ಪ್ರತಿಸ್ಪರ್ಧಿಗಳಾದ ಚೀನಾ ಮತ್ತು ಮ್ಯಾನ್ಮಾರ್‌ಗೆ ಕೂದಲು ಕಳ್ಳಸಾಗಣೆಯಾಗುತ್ತಿದೆ. ಇದು ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತಿಗೆ ತೊಂದರೆಯುಂಟುಮಾಡುತ್ತಿದೆ’ ಎಂದು ಅವರು ಹೇಳಿದರು.

‘ನಿರ್ಬಂಧದಿಂದ ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ‘ ಎಂದು ಅವರು ಹೇಳಿದರು.

ಭಾರತದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳವು ಕೂದಲು ಉದ್ಯಮದ ಪ್ರಮುಖ ಕೇಂದ್ರಗಳಾಗಿವೆ. ಭಾರತದ ಪ್ರಮುಖ ಸ್ಪರ್ಧಿಗಳು ಚೀನಾ, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಮ್ಯಾನ್ಮಾರ್. ಕೂದಲನ್ನು ಮುಖ್ಯವಾಗಿ ದೇವಾಲಯಗಳು ಮತ್ತು ಮನೆಗಳಿಂದ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಜಾಗತಿಕ ಸೌಂದರ್ಯವರ್ಧಕ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ಭಾರತದಲ್ಲಿ ರೆಮಿ ಮತ್ತು ನಾನ್-ರೆಮಿ ಎಂಬ ಎರಡು ಬಗೆಯ ಕೂದಲನ್ನು ಸಂಗ್ರಹಿಸಲಾಗುತ್ತದೆ. ಧಾರ್ಮಿಕ ಸ್ಥಳಗಳಲ್ಲಿ ಯಾತ್ರಿಕರು ತಮ್ಮ ಕೂದಲನ್ನು ಅರ್ಪಿಸುವುದು ರೆಮಿ ಕೂದಲು. ಅದು ಉತ್ತಮ ದರ್ಜೆಯದ್ದಾಗಿರುತ್ತದೆ. ಇದನ್ನು ಮುಖ್ಯವಾಗಿ ಹೇರ್‌ಪೀಸ್ ಮತ್ತು ವಿಗ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಳ್ಳಿಗಳು ಮತ್ತು ನಗರಗಳಲ್ಲಿನ ಸಣ್ಣ ಗುಂಪುಗಳಿಂದ, ತ್ಯಾಜ್ಯದಿಂದ ಸಂಗ್ರಹಿಸಲಾಗುವ ಕೂದಲನ್ನು ನಾನ್‌ ರೆಮಿ ಕೂದಲು ಎನ್ನಲಾಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್-ನವೆಂಬರ್ ಅವಧಿಯಲ್ಲಿ ₹10,78 ಕೋಟಿ ಮೌಲ್ಯದ ವಹಿವಾಟನ್ನು ಈ ಉದ್ಯಮ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು