ನವದೆಹಲಿ: ದೇಶೀಯ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ದೇಶದ 10 ರಾಜ್ಯಗಳಲ್ಲಿ ಹೊಸದಾಗಿ 12 ಕೈಗಾರಿಕಾ ಸ್ಮಾರ್ಟ್‌ಸಿಟಿ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.
ಉತ್ತರಾಖಂಡ, ಪಂಜಾಬ್, ಮಹಾರಾಷ್ಟ್ರ, ಕೇರಳ, ಉತ್ತರಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಲ್ಲಿ ಈ ಕೈಗಾರಿಕಾ ಸ್ಮಾರ್ಟ್‌ಸಿಟಿಗಳು ಸ್ಥಾಪನೆಯಾಗಲಿವೆ.
ಈಗಾಗಲೇ, ದೇಶದಲ್ಲಿ 8 ಕೈಗಾರಿಕಾ ಸ್ಮಾರ್ಟ್‌ಸಿಟಿಗಳು ಅಭಿವೃದ್ಧಿ ಹಂತದಲ್ಲಿವೆ. ಹೊಸ ಸ್ಮಾರ್ಟ್‌ಸಿಟಿಗಳ ಸ್ಥಾಪನೆಯಿಂದ ಇವುಗಳ ಸಂಖ್ಯೆ 20ಕ್ಕೆ ಏರಲಿದೆ.
‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ (ಎನ್‌ಐಸಿಡಿಪಿ) ಈ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಅಂದಾಜು ₹28,602 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇದರಲ್ಲಿ ₹11 ಸಾವಿರ ಕೋಟಿ ಜಾಗದ ವೆಚ್ಚವನ್ನು ಒಳಗೊಂಡಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಯೋಜನೆಯಿಂದ ನೇರವಾಗಿ 10 ಲಕ್ಷ ಮತ್ತು ಪರೋಕ್ಷವಾಗಿ 30 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಯೋಜನೆಗಳು ₹1.52 ಲಕ್ಷ ಕೋಟಿ ಹೂಡಿಕೆಯನ್ನು ಆಕರ್ಷಿಸಲಿವೆ ಎಂದು ಹೇಳಿದ್ದಾರೆ.