ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆಗಾರರಿಗೆ ‘ಹುಳಿ’ಯಾದ ದ್ರಾಕ್ಷಿ

Published 23 ಫೆಬ್ರುವರಿ 2024, 3:18 IST
Last Updated 23 ಫೆಬ್ರುವರಿ 2024, 3:18 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಅಂದಾಜು 35 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ವಾರ್ಷಿಕ ₹5 ಸಾವಿರ ಕೋಟಿ ವಹಿವಾಟು ಇದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಶೇ 80ರಷ್ಟು ಒಣ‌ದ್ರಾಕ್ಷಿ ಮಾಡಲಾಗುತ್ತದೆ. ಉಳಿದ ಹಸಿ ದ್ರಾಕ್ಷಿ ತಿನ್ನಲು ಬಳಕೆಯಾಗುತ್ತದೆ. ಧಾರಣೆ ಕುಸಿದು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಮುಂದಾಗಬೇಕು. ದ್ರಾಕ್ಷಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ರೈತರ ಒತ್ತಾಯ

ಉತ್ತಮ ಫಸಲು ಬಂದಿಲ್ಲ...

-ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ‘ಬರ ಪರಿಸ್ಥಿತಿಯಿಂದ ಈ ಬಾರಿ ಉತ್ತಮ ಫಸಲು ಬಂದಿಲ್ಲ. ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ
ಹೇಳಿಕೊಳ್ಳುವಂತಹ ದರವೂ ಇಲ್ಲ. ಒಣದ್ರಾಕ್ಷಿಗೂ ಬೇಡಿಕೆ ಕುಸಿದಿದೆ. ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ’.

ಕಾಗವಾಡ ತಾಲ್ಲೂಕಿನ ಮಂಗಸೂಳಿಯ ರೈತ ಸಂಗ್ರಾಮ ಸಾವಂತ ಅವರು ಅಳಲು ತೋಡಿಕೊಂಡಿದ್ದು ಹೀಗೆ. ಇದು ಜಿಲ್ಲೆಯ ಬಹುತೇಕ ದ್ರಾಕ್ಷಿ ಬೆಳೆಗಾರರ ಸ್ಥಿತಿಯೂ ಆಗಿದೆ.

ಜಿಲ್ಲೆಯಲ್ಲಿ 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ ಅವಧಿಯಲ್ಲಿ 6,268 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗಿತ್ತು. 2023ರ ಏಪ್ರಿಲ್‌ನಿಂದ ಪ್ರಸಕ್ತ ವರ್ಷದ ಫೆಬ್ರುವರಿ ಅವಧಿವರೆಗೆ ದ್ರಾಕ್ಷಿ ಬೆಳೆಯುವ ಪ್ರದೇಶವು 6,585 ಹೆಕ್ಟೇರ್‌ಗೆ ಏರಿಕೆ ಆಗಿದೆ. ಈ ಪೈಕಿ ಅಥಣಿ, ಕಾಗವಾಡ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ದ್ರಾಕ್ಷಿ ಬೆಂಗಳೂರು, ನವದೆಹಲಿ, ಹೈದರಾಬಾದ್‌ ಮತ್ತು ಮಹಾರಾಷ್ಟ್ರದ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ.

‘ಎರಡು ಎಕರೆಯಲ್ಲಿ ದ್ರಾಕ್ಷಿ ಬೆಳೆದಿರುವೆ. ಕಳೆದ ವರ್ಷ ಪ್ರತಿ 4 ಕೆ.ಜಿಗೆ ₹200 ದರದಲ್ಲಿ ಮಾರಾಟ ಮಾಡಿದ್ದೆ. ಈ ಬಾರಿ ₹110ಕ್ಕೆ 4 ಕೆ.ಜಿ ದ್ರಾಕ್ಷಿ ಮಾರಾಟ ವಾಗುತ್ತಿದೆ. ಮೂರು ತಿಂಗಳ ಹಿಂದೆ ಅಕಾಲಿಕ ಮಳೆಯಿಂದ ಒಂದಿಷ್ಟು ಬೆಳೆ ಹಾನಿಯಾಯಿತು. ಕಳೆದ ಬಾರಿಗಿಂತ ಈ ಬಾರಿ ಶೇ 40ರಷ್ಟು ಉತ್ಪಾದನೆ ಕುಸಿದಿದೆ. ಆದರೆ, ತೋಟಗಾರಿಕೆ ಇಲಾಖೆಯವರು ಸರಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸಿಲ್ಲ’ ಎಂದು ಸಂಗ್ರಾಮ ಸಾವಂತ ದೂರಿದರು.

‘ಒಣದ್ರಾಕ್ಷಿಯನ್ನು ಕೊಳ್ಳುವವರಿಲ್ಲ. ಜೊತೆಗೆ ಅದಕ್ಕೂ ಉತ್ತಮ ಬೆಲೆ ಇಲ್ಲ. ಬೆಳೆಗಾರರ ಕಷ್ಟ ಹೇಳತೀರದಾಗಿದೆ. ಸರ್ಕಾರ ತ್ವರಿತವಾಗಿ ಬೆಳೆಗಾರರ ನೆರವಿಗೆ ಧಾವಿಸಬೇಕು. ಒಣದ್ರಾಕ್ಷಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಪೌಷ್ಟಿಕಾಂಶಯುಕ್ತವಾದ ಇದನ್ನು ಸರ್ಕಾರವೇ ಖರೀದಿಸಿ ಅಂಗನವಾಡಿ ಕೇಂದ್ರಗಳಿಗೆ ವಿತರಿಸಬೇಕು’ ಎಂದು ದ್ರಾಕ್ಷಿ ಬೆಳೆಗಾರರೂ ಆಗಿರುವ ಅಥಣಿಯ ಮಾಜಿ ಶಾಸಕ ಷಹಜಹಾನ್‌ ಡೊಂಗರಗಾಂವ ಒತ್ತಾಯಿಸಿದರು.

ಬೆಳಗಾವಿಯ ರೈತರು ಮೀರಜ್‌, ಸಾಂಗ್ಲಿ, ಆಂಧ್ರಪ್ರದೇಶ ಮಾರುಕಟ್ಟೆಗೆ ದ್ರಾಕ್ಷಿ ಕಳುಹಿಸುತ್ತಿದ್ದರು. ಮಹಾರಾಷ್ಟ್ರ, ಆಂಧ್ರದಲ್ಲಿ ಈ ಬಾರಿ ಹೆಚ್ಚಾಗಿ ದ್ರಾಕ್ಷಿ ಬೆಳೆಯಲಾಗಿದೆ. ಹಾಗಾಗಿ,ಜಿಲ್ಲೆಯಲ್ಲಿ ಬೆಳೆದಿರುವ ದ್ರಾಕ್ಷಿಗೆ ಬೇಡಿಕೆ ಕುಸಿದಿದೆ
ಮಹಾಂತೇಶ ಮುರಗೋಡ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಳಗಾವಿ

ರಫ್ತು ಸ್ಥಗಿತ; ಧಾರಣೆ ಕುಸಿತ

-ಬಸವರಾಜ್‌ ಸಂಪಳ್ಳಿ

ವಿಜಯಪುರ: ರಷ್ಯಾ, ಇರಾನ್‌, ಇರಾಕ್‌, ಸೌದಿ ಅರೇಬಿಯಾ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ, ಶ್ರೀಲಂಕಾದಲ್ಲಿ ದ್ರಾಕ್ಷಿಗೆ ಬೇಡಿಕೆ ಕುಸಿದಿದೆ. ದ್ರಾಕ್ಷಿಯಲ್ಲಿ ರಾಸಾಯನಿಕ ಅಂಶ ಹೆಚ್ಚಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ರಫ್ತು ಸ್ಥಗಿತವಾಗಿದೆ. ಹಾಗಾಗಿ, ಕಳೆದ ಎರಡು ವರ್ಷಗಳಿಂದ ರಾಜ್ಯದ ಒಣದ್ರಾಕ್ಷಿ ಮಾರುಕಟ್ಟೆಗೆ ದೊಡ್ಡ ಪೆಟ್ಟು ಬಿದ್ದಿದೆ.

ರಾಜ್ಯದಲ್ಲಿ ಸದ್ಯ ದ್ರಾಕ್ಷಿ ಸುಗ್ಗಿ (ಕೊಯ್ಲು) ಆರಂಭವಾಗಿದೆ. ಮಾರುಕಟ್ಟೆಯಲ್ಲಿ 1 ಕೆ.ಜಿ ಒಣದ್ರಾಕ್ಷಿಗೆ ₹130 ರಿಂದ ₹150 ದರ ಇದೆ. 1 ಕೆ.ಜಿ ಹಸಿ ದ್ರಾಕ್ಷಿಗೆ ₹ 30ರಿಂದ ₹40 ದರ ಇದೆ. ಕಳೆದ ವರ್ಷಕ್ಕಿಂತ ₹10ರಿಂದ ₹20 ಕಡಿಮೆ ಆಗಿದೆ.  

‘ಕಳೆದ ವರ್ಷದ ಶೇ 20ರಷ್ಟು ಒಣದ್ರಾಕ್ಷಿ ಮಾರಾಟವಾಗದೇ ಇನ್ನೂ ಶೈತ್ಯಾಗಾರಗಳಲ್ಲಿಯೇ ಇದೆ. ಈಗ ಹೊಸ ಬೆಳೆ ಬರುತ್ತಿದೆ. ಆದರೆ, ರಫ್ತು ಸಂಪೂರ್ಣ ಸ್ಥಗಿತವಾದ ಕಾರಣ ಮಾರುಕಟ್ಟೆಯಲ್ಲಿ ಹಸಿ ಮತ್ತು ಒಣ ದ್ರಾಕ್ಷಿ ದರ ಕುಸಿದಿದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಹುಲ್‌ ಬಾವಿದೊಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದ್ರಾಕ್ಷಿ ಹವಾಮಾನ ಆಧಾರಿತ ಬೆಳೆ. ಹವಾಮಾನದಲ್ಲಿ ಸ್ವಲ್ಪ ಏರುಪೇರಾದರೂ ಬೆಳೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮೋಡ, ಮಳೆ, ಮಂಜಿನ ಹಿನ್ನೆಲೆಯಲ್ಲಿ ಬೆಳೆ ರಕ್ಷಿಸಿಕೊಳ್ಳಲು ಮತ್ತು ಹೆಚ್ಚು ಇಳುವರಿ ಪಡೆಯಲು ರೈತರು ರಾಸಾಯನಿಕ ಔಷಧಗಳ ಮೊರೆ ಹೋಗುತ್ತಾರೆ’ ಎಂದರು.

‘ಒಣದ್ರಾಕ್ಷಿ ಮಾಡುವಾಗಲೂ ಬಂಗಾರದ ಬಣ್ಣ ಬರಲಿ ಎಂದು ಹೆಚ್ಚು ರಾಸಾಯನಿಕ (ಗಂಧಕ, ಡಿಪಿಂಗ್‌ ಆಯಿಲ್‌, ಕಾರ್ಬೊನೇಟ್‌) ಬಳಸುತ್ತಾರೆ. ಇದು ತಿನ್ನುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಜನರುದ್ರಾಕ್ಷಿ ಬಳಕೆಯನ್ನು ಕಡಿಮೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ದ್ರಾಕ್ಷಿ ಹಾಗೂ ದ್ರಾಕ್ಷ ರಸ ಅಭಿವೃದ್ಧಿ ಮಂಡಳಿಯು ಸಂಕಷ್ಟದಲ್ಲಿರುವ ರಾಜ್ಯದ ಬೆಳೆಗಾರರ ನೆರವಿಗೆ ಬರುತ್ತಿಲ್ಲ. ಸರ್ಕಾರ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು. ವಿಜಯಪುರ ಇ–ಟ್ರೇಡಿಂಗ್‌ ವ್ಯವಸ್ಥೆ
ಸರಿಯಾಗಿ ನಡೆಯುತ್ತಿಲ್ಲ. ದಲ್ಲಾಳಿಗಳು ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಸಮರ್ಪಕವಾಗಿ ಬೆಲೆ ಸಿಗದಂತೆ ವಂಚಿಸುತ್ತಿದ್ದಾರೆ’ ಎಂದು  ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಅಧ್ಯಕ್ಷ ಅಭಯಕುಮಾರ್‌ ನಾಂದ್ರೇಕೇರ ಹೇಳಿದರು.

ದ್ರಾಕ್ಷಿ ಬೆಳೆಗಾರರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಔಷಧ ಮುಕ್ತವಾಗಿ ಬೆಳೆಯಬೇಕು. ಸರ್ಕಾರವೂ ಸಾವಯವ ದ್ರಾಕ್ಷಿ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹಿಸಬೇಕು
ಅಭಯಕುಮಾರ್‌ ನಾಂದ್ರೇಕೇರ, ಅಧ್ಯಕ್ಷ, ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ
ಮಿತಿಮೀರಿ ರಾಸಾಯನಿಕ ಬಳಕೆಯಿಂದ ಬೆಳೆಯುವವರೇ ದ್ರಾಕ್ಷಿ ತಿನ್ನುತ್ತಿಲ್ಲ. ಸಂಬಂಧಿಕರು, ಪರಿಚಯಸ್ಥರಿಗೂ ತಿನ್ನಬೇಡಿ ಎಂದು ಹೇಳುತ್ತಾರೆ. ದ್ರಾಕ್ಷಿ ಸೇವನೆಯಿಂದ ಜನ ವಿಮುಖರಾಗುತ್ತಿದ್ದಾರೆ 
ರಾಹುಲ್‌ ಬಾವಿದೊಡ್ಡಿ,ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT