ಭಾನುವಾರ, ಆಗಸ್ಟ್ 9, 2020
23 °C
ಮೇಲ್ಮನವಿ ಪ್ರಾಧಿಕಾರ ರಚನೆಗೆ ಕೇಂದ್ರ ಸಂಪುಟ ಸಮ್ಮತಿ

ಜಿಎಸ್‌ಟಿ: ರಾಷ್ಟ್ರೀಯ ಪೀಠ ಸ್ಥಾಪನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಮೇಲ್ಮನವಿ ಪ್ರಾಧಿಕಾರದ ರಾಷ್ಟ್ರೀಯ ಪೀಠ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ.

ರಾಜ್ಯ ಮಟ್ಟದಲ್ಲಿನ ಪ್ರಾಧಿಕಾರಗಳು ವಿಭಿನ್ನ ಆದೇಶ ನೀಡಿದ ಪ್ರಕರಣಗಳನ್ನು ಈ ಪೀಠವು ಇತ್ಯರ್ಥಪಡಿಸಲಿದೆ. ಈ ಮೇಲ್ಮನವಿ ಪ್ರಾಧಿಕಾರದ ರಾಷ್ಟ್ರೀಯ ಪೀಠ ರಚನೆಗೆ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯ ಇದೆ.

ದೆಹಲಿಯಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಪೀಠವು ಕೇಂದ್ರ ಮತ್ತು ರಾಜ್ಯಗಳ ತಲಾ ಒಬ್ಬ ಸದಸ್ಯರನ್ನು ಮತ್ತು ಒಬ್ಬ ಅಧ್ಯಕ್ಷರನ್ನು ಒಳಗೊಂಡಿರಲಿದೆ. ಜಿಎಸ್‌ಟಿ ಕಾಯ್ದೆಗೆ ಸಂಬಂಧಿಸಿದಂತೆ ಎರಡನೆ ಮೇಲ್ಮನವಿ ಸಲ್ಲಿಸುವ ವೇದಿಕೆಯಾಗಿ ಇದು ಕಾರ್ಯನಿರ್ವಹಿಸಲಿದೆ. ಜತೆಗೆ, ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಉದ್ಭವಿಸುವ ಜಿಎಸ್‌ಟಿ ವಿವಾದಗಳನ್ನು ಬಗೆಹರಿಸಲೂ ನೆರವಾಗಲಿದೆ.

ಜಿಎಸ್‌ಟಿಗೆ ಸಂಬಂಧಿಸಿದಂತೆ ಉದ್ಭವಿಸುವ ಬಿಕ್ಕಟ್ಟುಗಳನ್ನು ಇತ್ಯರ್ಥಪಡಿಸುವಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಈ ಪೀಠವು ಗಮನಹರಿಸಲಿದೆ.

ಎರಡು ರಾಜ್ಯಗಳಲ್ಲಿನ ಪ್ರಾಧಿಕಾರಗಳು ಪ್ರತ್ಯೇಕ ಆದೇಶ ಹೊರಡಿಸಿದ ಪ್ರಕರಣಗಳನ್ನಷ್ಟೇ ಈ ಪೀಠವು ವಿಚಾರಣೆಗೆ ಪರಿಗಣಿಸಲಿದೆ. ಡಿಸೆಂಬರ್‌ನಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯು ಈ ಕೇಂದ್ರೀಕೃತ ಮೇಲ್ಮನವಿ ಪ್ರಾಧಿಕಾರ ಸ್ಥಾಪಿಸುವ ನಿರ್ಧಾರ ಕೈಗೊಂಡಿತ್ತು.

ಒಂದೇ ವಿಷಯ ಅಥವಾ ನಿರ್ದಿಷ್ಟ ಪ್ರಕರಣಗಳಲ್ಲಿ ರಾಜ್ಯಗಳಲ್ಲಿನ ಪ್ರಾಧಿಕಾರಗಳು ವಿರೋಧಾಭಾಸದ ತೀರ್ಪು ನೀಡುತ್ತಿವೆ. ಇದರಿಂದ ನಿರ್ಮಾಣವಾಗುವ  ಗೊಂದಲ ದೂರ ಮಾಡಲು  ಮೇಲ್ಮನವಿ ಪ್ರಾಧಿಕಾರದ ರಾಷ್ಟ್ರೀಯ ಪೀಠ ಸ್ಥಾಪಿಸುವ ಬಗ್ಗೆ ಉದ್ದಿಮೆ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

ಕುವೈತ್‌ ಜತೆ ಒಪ್ಪಂದಕ್ಕೆ ಒಪ್ಪಿಗೆ

ಮನೆ ಕೆಲಸಗಾರರಾಗಿ ಕುವೈತ್‌ಗೆ ಹೋಗುವವರ ಸುರಕ್ಷತೆಗೆ ಸಂಬಂಧಿಸಿ ಆ ದೇಶದ ಜತೆಗೆ ಮಾಡಿಕೊಳ್ಳುವ ಒಪ್ಪಂದಕ್ಕೆ ಸಂಪುಟವು  ಅನುಮೋದನೆ ನೀಡಿದೆ. ಈ ಒಪ್ಪಂದವು ಐದು ವರ್ಷ ಅವಧಿಯದ್ದಾಗಿದೆ. ನಂತರ ಅದರನ್ನು ನವೀಕರಿಸಲು ಅವಕಾಶ ಇದೆ.

ಕುವೈತ್‌ನಲ್ಲಿ ಭಾರತದ ಮೂರು ಲಕ್ಷ ಮಂದಿ ಮನೆ ಕೆಲಸದವರಿದ್ದಾರೆ. ಅವರಲ್ಲಿ 90 ಸಾವಿರ ಮಹಿಳೆಯರು. ಒಪ್ಪಂದ ಅನುಷ್ಠಾನಕ್ಕಾಗಿ ಭಾರತ ಮತ್ತು ಕುವೈಟ್‌ನ ಪ್ರತಿನಿಧಿಗಳಿರುವ ಜಂಟಿ ಸಮಿತಿಯೊಂದನ್ನು ಸ್ಥಾಪಿಸುವ ಪ್ರಸ್ತಾವವನ್ನೂ ಒಪ್ಪಂದ ಹೊಂದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು