ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ, ಜೊಮ್ಯಾಟೊ ಸೇವೆಗೆ ಜಿಎಸ್‌ಟಿ: ಗ್ರಾಹಕರಿಗಿಲ್ಲ ಹೊರೆ

ಜನವರಿ 1ರಿಂದ ಶೇ 5ರಷ್ಟು ತೆರಿಗೆ: ಜಿಎಸ್‌ಟಿ ಮಂಡಳಿ
Last Updated 19 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರ ವಸ್ತುಗಳನ್ನು ಹೋಟೆಲ್ ಹಾಗೂ ರೆಸ್ಟಾರೆಂಟ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಜೊಮ್ಯಾಟೊದಂತಹ ಕಂಪನಿಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿ ತೆರಿಗೆ ವಿಧಿಸುವುದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗದು ಎಂದು ತೆರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಕಂಪನಿಗಳು ಜನವರಿ 1ರಿಂದ ಗ್ರಾಹಕರಿಂದ ಶೇ 5ರಷ್ಟು ತೆರಿಗೆ ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿಸಬೇಕು ಎಂಬ ತೀರ್ಮಾನವನ್ನು ಜಿಎಸ್‌ಟಿ ಮಂಡಳಿ ಕಳೆದ ವಾರ ತೆಗೆದುಕೊಂಡಿದೆ. ಸದ್ಯ ರೆಸ್ಟಾರೆಂಟ್‌ಗಳೇ ತೆರಿಗೆ ಪಾವತಿಸುತ್ತಿವೆ.

ಆಹಾರ ವಸ್ತುಗಳಿಗೆ ಗ್ರಾಹಕರು ಕೊಡುವ ಮೊತ್ತದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈಗ, ಆಹಾರ ವಸ್ತುಗಳನ್ನು ಖರೀದಿಸಿದ್ದಕ್ಕೆ ರೆಸ್ಟಾರೆಂಟ್‌ ನೀಡುವ ಬಿಲ್‌ಅನ್ನು ಸ್ವಿಗ್ಗಿ, ಜೊಮ್ಯಾಟೊದಂತಹ ಕಂಪನಿಗಳು ಗ್ರಾಹಕರಿಗೆ ನೀಡುತ್ತಿವೆ. ಇನ್ನುಮುಂದೆ ಈ ಕಂಪನಿಗಳೇ ಆಹಾರ ವಸ್ತುಗಳಿಗೆ ಬಿಲ್‌ ನೀಡಿ ಗ್ರಾಹಕರಿಂದ ತೆರಿಗೆ ಸಂಗ್ರಹಿಸುತ್ತವೆ. ಆಹಾರ ವಿತರಣಾ ಸೇವೆಯನ್ನು ವ್ಯವಸ್ಥಿತಗೊಳಿಸಲು ಇದನ್ನು ಜಾರಿಗೆ ತರಲಾಗುತ್ತಿದೆ. ಕೆಲವು ಹೋಟೆಲ್‌ಗಳು ತೆರಿಗೆ ತಪ್ಪಿಸುವುದನ್ನು ತಡೆಯಲು ಇದು ನೆರವಾಗುತ್ತದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ತೆರಿಗೆ ತಜ್ಞ ಬಿ.ಟಿ. ಮನೋಹರ್‌ ಮಾಹಿತಿ ನೀಡಿದರು.

ಜಿಎಸ್‌ಟಿ ದರ, ಸರ್ಕಾರಕ್ಕೆ ಬರುವ ವರಮಾನ ಯಾವುದರಲ್ಲಿಯೂ ವ್ಯತ್ಯಾಸ ಆಗುವುದಿಲ್ಲ. ಹಲವರು ಜಿಎಸ್‌ಟಿ ವಿಧಿಸದೇ ಆಹಾರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂಥವರನ್ನು ಪತ್ತೆ ಮಾಡುವುದು ಕಷ್ಟ. ಹೀಗಾಗಿ ಜಿಎಸ್‌ಟಿ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸುವ ಹೊಣೆಗಾರಿಕೆಯನ್ನು ವಿತರಣಾ ಕಂಪನಿಗಳಿಗೇ ನೀಡುವ ನಿರ್ಧಾರಕ್ಕೆ ಬಂದಿರಬಹುದು ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಡಿ.ಮುರಳೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT