ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌: ಜಿಎಸ್‌ಟಿ ಕಡಿತ?

ಶೇ 12ರಿಂದ ಶೇ 5ಕ್ಕೆ ಇಳಿಸಲು ಜಿಎಸ್‌ಟಿ ಸಚಿವರ ಸಮಿತಿ ಒಲವು
Last Updated 8 ಫೆಬ್ರುವರಿ 2019, 16:33 IST
ಅಕ್ಷರ ಗಾತ್ರ

ನವದೆಹಲಿ: ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ 12 ರಿಂದ ಶೇ 5ಕ್ಕೆ ಇಳಿಸಬೇಕು ಎಂದು ಸಚಿವರ ಸಮಿತಿ ಅಭಿಪ್ರಾಯಪಟ್ಟಿದೆ.

ಶುಕ್ರವಾರ ಇಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿಯೇ ಈ ನಿರ್ಧಾರಕ್ಕೆ ಬರಲಾಗಿದೆ. ಕೈಗೆಟುಕುವ ಬೆಲೆಯ ಮನೆಗಳಿಗೆ ಶೇ 8ರ ಬದಲಿಗೆ ಶೇ 3ರಷ್ಟು ಜಿಎಸ್‌ಟಿ ಅನ್ವಯಿಸಲು ಸಮಿತಿಯು ಒಲವು ತೋರಿದೆ.

ವಸತಿ ಯೋಜನೆಗಳಿಗೆ ಹುಟ್ಟುವಳಿ ತೆರಿಗೆ ಜಮೆ (ಐಟಿಸಿ) ಇಲ್ಲದೆ ಶೇ 5ರಷ್ಟು ಮತ್ತು ಕೈಗೆಟುಕುವ ಮನೆಗಳಿಗೆ ಜಿಎಸ್‌ಟಿಯನ್ನು ಶೇ 3ಕ್ಕೆ ಇಳಿಸುವ ಬಗ್ಗೆ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿದೆ.

ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆ ಅಥವಾ ಮಾರಾಟ ಸಂದರ್ಭದಲ್ಲಿ ವಾಸಕ್ಕೆ ಯೋಗ್ಯ ಪ್ರಮಾಣಪತ್ರ ನೀಡದ ಫ್ಲ್ಯಾಟ್‌ಗಳಿಗೆ ಸದ್ಯಕ್ಕೆ ‘ಐಟಿಸಿ’ ಸೇರಿದಂತೆ ಶೇ 12 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇಂತಹ ವಸತಿ ಯೋಜನೆಗಳಿಗೆ ಜಿಎಸ್‌ಟಿ ಜಾರಿಗೆ ಬರುವ ಮೊದಲಿನ ತೆರಿಗೆ ಹೊರೆಯು ಶೇ 15 ರಿಂದ ಶೇ 18ರಷ್ಟಿತ್ತು.

ಮಾರಾಟ ಸಂದರ್ಭದಲ್ಲಿ ವಾಸಯೋಗ್ಯ ಪ್ರಮಾಣಪತ್ರ ನೀಡಿದ್ದರೆ ಖರೀದಿದಾರರ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿಲ್ಲ.

ಜಿಎಸ್‌ಟಿ ಜಾರಿಗೆ ಬಂದ ನಂತರ, ಮನೆ, ಫ್ಲ್ಯಾಟ್‌ಗಳ ಬೆಲೆ ಕಡಿಮೆಯಾದ ನಂತರವೂ ಕಟ್ಟಡ ನಿರ್ಮಾಣಗಾರರು / ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಅದರ ಲಾಭವನ್ನು ಖರೀದಿದಾರರಿಗೆ ವರ್ಗಾಯಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.

‘ಜಿಎಸ್‌ಟಿ’ ವ್ಯವಸ್ಥೆಯಡಿ, ಗೃಹ ನಿರ್ಮಾಣ ವಲಯಕ್ಕೆ ಉತ್ತೇಜನ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಜನವರಿಯಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಚಿವರ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು.

ಜಿಎಸ್‌ಟಿ ಜಾರಿಗೆ ಬಂದ ನಂತರ ರಿಯಲ್‌ ಎಸ್ಟೇಟ್‌ ವಲಯ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಈ ಸಚಿವರ ಸಮಿತಿ ರಚಿಸಲಾಗಿತ್ತು. ಗುಜರಾತ್‌ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರ ಅಧ್ಯಕ್ಷತೆಯಲ್ಲಿನ ಈ ಸಮಿತಿಯಲ್ಲಿ ಕರ್ನಾಟಕದ ಕೃಷ್ಣ ಬೈರೇಗೌಡ ಸೇರಿದಂತೆ 7 ಮಂದಿ ಸದಸ್ಯರು ಇದ್ದಾರೆ.

ಒಂದು ವಾರದ ಒಳಗೆ ಸಮಿತಿಯ ವರದಿಯನ್ನು ಅಂತಿಮಗೊಳಿಸಲಾಗುವುದು. ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಇದನ್ನು ಮಂಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT