ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭ ಶೇ 18.5ರಷ್ಟು ಹೆಚ್ಚಳ

ನವದೆಹಲಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹12,259 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ₹10,342 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 18.5ರಷ್ಟು ಹೆಚ್ಚಾಗಿದೆ.
ಬ್ಯಾಂಕ್‌ನ ವರಮಾನವು ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹40,652 ಕೋಟಿ ಇತ್ತು. ಅದು ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹51,208 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಬ್ಯಾಂಕ್‌ನ ಆಸ್ತಿ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 1.23ರಷ್ಟು ಇದೆ. ನಿವ್ವಳ ಎನ್‌ಪಿಎ ಶೇ 0.37 ರಿಂದ ಶೇ 0.33ಕ್ಕೆ ಇಳಿಕೆ ಆಗಿದೆ.
ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು 2022ರ ಡಿಸೆಂಬರ್ 31ರ ಅಂತ್ಯಕ್ಕೆ ₹2,806 ಕೋಟಿಯಷ್ಟು ಇದೆ. 2021ರ ಡಿಸೆಂಬರ್ 31ರ ಅಂತ್ಯದಲ್ಲಿ ₹2,994 ಕೋಟಿಯಷ್ಟು ಇತ್ತು ಎಂದು ಬ್ಯಾಂಕ್ ತಿಳಿಸಿದೆ.
ನಿವ್ವಳ ಬಡ್ಡಿ ವರಮಾನವು ಶೇ 24.6ರಷ್ಟು ಹೆಚ್ಚಾಗಿದ್ದು ₹22,988 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹18,443 ಕೋಟಿಯಷ್ಟು ಇತ್ತು. ಬ್ಯಾಂಕ್‌ನ ಮುಂಗಡ ಶೇ 19.5ರಷ್ಟು, ರಿಟೇಲ್ ಸಾಲ ಶೇ 21.4ರಷ್ಟು ಬೆಳವಣಿಗೆ ಕಂಡಿದೆ. ಠೇವಣಿ ಪ್ರಮಾಣವು ಶೇ 19.9ರಷ್ಟು ಹೆಚ್ಚಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.