ಭಾನುವಾರ, ಏಪ್ರಿಲ್ 18, 2021
31 °C

ಪೆಟ್ರೋಲ್ ತೆರಿಗೆ ಕಡಿತಕ್ಕೆ ರಾಜ್ಯ–ಕೇಂದ್ರವು ಜಂಟಿಯಾಗಿ ನಿರ್ಧರಿಸಬೇಕು: ನಿರ್ಮಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸಬೇಕೆಂದು ಗ್ರಾಹಕರ ಒತ್ತಾಯದಲ್ಲಿ ಅರ್ಥವಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.  ಆದರೆ, ತೆರಿಗೆಯನ್ನು ಕಡಿತಗೊಳಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಕರೆಯಾಗಿದೆ ಎಂದು ಹೇಳಿದ್ದಾರೆ. 

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಹಲವೆಡೆ ಪೆಟ್ರೋಲ್ ದರ ₹ 100 ದಾಟಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಕಾರಣವಾಗಿವೆ.

ಅಂತರರಾಷ್ಟ್ರೀಯ ತೈಲ ಬೆಲೆಗಳು ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸಲು ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿದ್ದ ನಿರ್ಮಲಾ ಸೀತಾರಾಮನ್, ಇದೀಗ, ಕೇಂದ್ರ ತೆರಿಗೆಯನ್ನು ಕಡಿತಗೊಳಿಸಿ ಗ್ರಾಹಕರಿಗೆ ರಿಲೀಫ್ ನೀಡುವ ಮೊದಲ ಹೆಜ್ಜೆ ಇಡಲು ಹಿಂದೇಟು ಹಾಕುತ್ತಿದ್ದಾರೆ.

ತೈಲ ಬೆಲೆಗಳು ಕಡಿಮೆಯಾಗಬೇಕು ಎಂದು ಹೇಳಲು ಗ್ರಾಹಕರಿಗೆ ಸಾಕಷ್ಟು ಕಾರಣಗಳಿವೆ, ನಿಜಕ್ಕೂ ತೈಲ ಬೆಲೆ ಏರಿಕೆ ಗ್ರಾಹಕರಿಗೆ ಒಂದು ಹೊರೆಯಾಗಿದೆ" ಎಂದು ಐಡಬ್ಲ್ಯೂಪಿಸಿಯಲ್ಲಿ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.

ತೈಲದ ಮೇಲಿನ ತೆರಿಗೆ ಇಳಿಸುವುದ ಧರ್ಮಸಂಕಟದ ವಿಷಯವಾಗಿದೆ. "ಪೆಟ್ರೋಲಿಯಂ ಉತ್ಪನ್ನಗಳ ಕೇಂದ್ರದ ತೆರಿಗೆ ಮಾತ್ರವಲ್ಲ, ರಾಜ್ಯಗಳೂ ಸುಂಕ ವಿಧಿಸುತ್ತವೆ. ಹಾಗಾಗಿ, ಇದು ಕೇವಲ ಕೇಂದ್ರ ಸರ್ಕಾರದ ವಿಷಯವಲ್ಲ. ಹೀಗಾಗಿ,. ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಮಾತನಾಡಬೇಕು." ಎಂದಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ತೆರಿಗೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡು ಆದಾಯವನ್ನು ಪಡೆಯುತ್ತವೆ ಎಂದು ಹೇಳಿದ ಅವರು, ಕೇಂದ್ರವು ಸಂಗ್ರಹಿಸಿದ ತೆರಿಗೆಯ ಶೇ. 41 ರಷ್ಟು ರಾಜ್ಯಗಳಿಗೆ ಹೋಗುತ್ತದೆ ಎಂದು ಹೇಳಿದರು.

"ಆದ್ದರಿಂದ ಕೇಂದ್ರ ಮತ್ತು ರಾಜ್ಯಗಳು ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು" ಎಂದಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವ ಮೂಲಕ ತೆರಿಗೆಗಳ ಈ ವಿಪರೀತ ಪರಿಣಾಮವನ್ನು ಕೊನೆಗೊಳಿಸಲು ಸಾಧ್ಯವಿದೆ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಏಕರೂಪತೆಯನ್ನು ತರುತ್ತದೆ. ಹಾಗಾಗಿ, ಜಿಎಸ್‌ಟಿ ಕೌನ್ಸಿಲ್ ಈ ಬಗ್ಗೆ ಚಿಂತಿಸಬೇಕಿದೆ ಎಂದರು.

ಪ್ರಸ್ತುತ, ಕೇಂದ್ರ ಸರ್ಕಾರವು ನಿಗದಿತ ಅಬಕಾರಿ ಸುಂಕವನ್ನು ವಿಧಿಸುತ್ತದೆ ಮತ್ತು ರಾಜ್ಯಗಳು ವಿಭಿನ್ನ ದರಗಳ ವ್ಯಾಟ್ ವಿಧಿಸುತ್ತವೆ. ಜಿಎಸ್ಟಿ ಅಡಿಯಲ್ಲಿ ಎರಡೂ ವಿಲೀನಗೊಳ್ಳುತ್ತವೆ. ಆ ಮೂಲಕ ಏಕರೂಪತೆಯನ್ನು ತರುತ್ತದೆ. ಹೆಚ್ಚಿನ ವ್ಯಾಟ್ ಹೊಂದಿರುವ ರಾಜ್ಯಗಳಲ್ಲಿ ಇಂಧನ ದರಗಳು ಹೆಚ್ಚಿರುವ ಸಮಸ್ಯೆ ಪರಿಹಾರವಾಗುತ್ತದೆ ಎಂದರು.

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಷಯ ಜಿಎಸ್‌ಟಿ ಮಂಡಳಿ ಗಮನದಲ್ಲಿದೆ. ಅದರ ಜಾರಿ ಬಗ್ಗೆ ಮಂಡಳಿ ನಿರ್ಧಾರ ಕೈಗೊಳ್ಳಬೇಕು ಎಂದರು.

ಈ ತಿಂಗಳ ಮುಂದಿನ ಸಭೆಯಲ್ಲಿ ಜಿಎಸ್‌ಟಿ ಮಂಡಳಿಗೆ ಇಂತಹ ಪ್ರಸ್ತಾಪವನ್ನು ಕೇಂದ್ರವು ಸಲ್ಲಿಸುತ್ತದೆಯೇ ಎಂದು ಕೇಳಿದಾಗ, "ಕೌನ್ಸಿಲ್ ಸಭೆಯ ದಿನಾಂಕಕ್ಕೆ ಹತ್ತಿರದಲ್ಲಿ" ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾರ್ಚ್ 2020 ಮತ್ತು ಮೇ 2020 ರ ನಡುವೆ ನಿರ್ಮಲಾ ಸೀತಾರಾಮನ್ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹ 13 ಮತ್ತು ₹ 16 ಹೆಚ್ಚಿಸಿದ್ದಾರೆ. ಇದರ ಪರಿಣಾಮ ಪೆಟ್ರೋಲ್ ಡೀಸೆಲ್ ಬೆಲೆ ಮೇಲೆ ಬಿದ್ದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿಯ ವ್ಯಾಪ್ತಿಗೆ ತಂದರೆ ದೇಶದಾದ್ಯಂತ ಪೆಟ್ರೋಲ್ ಬೆಲೆ ಲೀಟರ್‌ಗೆ 75 ರೂ.ಗೆ ಇಳಿಯಬಹುದು ಎಂದು ಈ ವಾರದ ಆರಂಭದಲ್ಲಿ ಎಸ್‌ಬಿಐನ ಅರ್ಥಶಾಸ್ತ್ರಜ್ಞರ ವರದಿಯಲ್ಲಿ ತಿಳಿಸಲಾಗಿತ್ತು.

ಡೀಸೆಲ್ ಲೀಟರ್‌ಗೆ 68 ರೂ.ಗೆ ಬರಲಿದೆ. ಇದರಿಂದ ಕೇಂದ್ರ ಮತ್ತು ರಾಜ್ಯಗಳಿಗೆ ಆದಾಯ ನಷ್ಟ ಕೇವಲ 1 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇಕಡಾ 0.4 ಆಗಿರುತ್ತದೆ ಎಂದು ಜಾಗತಿಕ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 60 ಡಾಲರ್ ಮತ್ತು ವಿನಿಮಯ ದರ ಪ್ರತಿ ಡಾಲರ್‌ಗೆ ₹73 ಎಂಬ ಊಹೆಯ ಅಡಿಯಲ್ಲಿ ಅರ್ಥಶಾಸ್ತ್ರಜ್ಞರು ಈ ಲೆಕ್ಕಾಚಾರ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು