ಹೌಸಿಂಗ್ಡಾಟ್ಕಾಂ: ಬಾಡಿಗೆ ಮನೆ, ಪೂರಕ ಸೇವೆಗಳ ಹೌಸಿಂಗ್ ಎಡ್ಜ್ಗೆ ಚಾಲನೆ

ನವದೆಹಲಿ: ರಿಯಲ್ ಎಸ್ಟೇಟ್ ವಹಿವಾಟಿನ ಪ್ರಮುಖ ಅಂತರ್ಜಾಲ ತಾಣವಾಗಿರುವ ಎಲಾರಾ ಟೆಕ್ನಾಲಜೀಸ್ ಒಡೆತನದ ಹೌಸಿಂಗ್ಡಾಟ್ಕಾಂ (Housing.com), ಬಾಡಿಗೆ ಮನೆ ಮತ್ತು ಪೂರಕ ಸೇವೆಗಳನ್ನು ಒದಗಿಸಲು ‘ಹೌಸಿಂಗ್ ಎಡ್ಜ್’ಗೆ (Housing Edge) ಚಾಲನೆ ನೀಡಿದೆ.
ಮನೆ ಮಾಲೀಕರು ಮತ್ತು ಬಾಡಿಗೆದಾರರು ಮನೆಗಳಲ್ಲಿ ಕುಳಿತುಕೊಂಡೇ ನಿರ್ವಹಿಸಬಹುದಾದ ಹಲವಾರು ಡಿಜಿಟಲ್ ಸೇವೆಗಳನ್ನು ಹೌಸಿಂಗ್ ಎಡ್ಜ್ ಒದಗಿಸಲಿದೆ. ಆನ್ಲೈನ್ನಲ್ಲಿಯೇ ಮನೆ ಬಾಡಿಗೆ ಪಾವತಿ, ಆನ್ಲೈನ್ ಬಾಡಿಗೆ ಒಪ್ಪಂದ, ಬಾಡಿಗೆದಾರರ ಗುರುತು ದೃಢೀಕರಣ, ಮನೆಯಲ್ಲಿನ ಸರಕು ಸರಂಜಾಮುಗಳ ಪ್ಯಾಕಿಂಗ್ ಮತ್ತು ಸಾಗಾಣಿಕೆ, ಪೀಠೋಪಕರಣಗಳ ಬಾಡಿಗೆ, ಒಳಾಂಗಣ ಅಲಂಕಾರ ಮತ್ತು ಮನೆಗೆ ಸಂಬಂಧಿಸಿದ ಇತರ ಡಿಜಿಟಲ್ ಸೇವೆಗಳೆಲ್ಲ ಇಲ್ಲಿ ಮಾಲೀಕರು ಮತ್ತು ಬಾಡಿಗೆದಾರರಿಗೆ ಒಂದೆಡೆಯೇ ದೊರೆಯಲಿವೆ.
ಹೌಸಿಂಗ್ ಎಡ್ಜ್ನ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಲಭ್ಯ ಇವೆ. ಮುಂಬರುವ ದಿನಗಳಲ್ಲಿ ಹೊಸ ಹೊಸ ಸೇವೆಗಳನ್ನೂ ಈ ಆನ್ಲೈನ್ ವೇದಿಕೆಯಲ್ಲಿ ಒದಗಿಸಲಾಗುವುದು.
‘ಬಾಡಿಗೆ ಮನೆಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳನ್ನು ತಂತ್ರಜ್ಞಾನದ ನೆರವಿನಿಂದ ಇಲ್ಲಿ ಒಂದೆಡೆಯೇ ಒದಗಿಸಲಾಗುತ್ತಿದೆ. ನಗರಗಳಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಾಡಿಗೆ ಮನೆಗೆ ಸಂಬಂಧಿಸಿದಂತೆ ಮಾಲೀಕರ ಮತ್ತು ಬಾಡಿಗೆದಾರರ ಅನೇಕ ಅಗತ್ಯ ಸೌಲಭ್ಯಗಳನ್ನು ಸರಳ ಮತ್ತು ಅಡಚಣೆರಹಿತ ರೀತಿಯಲ್ಲಿ ಹೌಸಿಂಗ್ ಎಡ್ಜ್ ಮೂಲಕ ಒದಗಿಸಲಾಗುವುದು’ ಎಂದು ಹೌಸಿಂಗ್ಡಾಟ್ಕಾಂ, ಮಕಾನ್ಡಾಟ್ಕಾಂ ಮತ್ತು ಪ್ರಾಪ್ಟೈಗರ್ಡಾಟ್ಕಾಂ ಸಮೂಹಗಳ ಸಿಇಒ ಧ್ರುವ ಅಗರ್ವಾಲ್ ಹೇಳಿದ್ದಾರೆ.
‘ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ವೃತ್ತಿಪರತೆಯ ಸಹಾಯ ಒದಗಿಸಲು ವಿಶೇಷ ಕೊಡುಗೆಗಳನ್ನು ಪರಿಚಯಿಸಲಾಗಿದೆ. ಪ್ರಮುಖ ಬ್ರ್ಯಾಂಡ್ಗಳ ಜತೆಗಿನ ಪಾಲುದಾರಿಕೆ ಮೂಲಕ ಹೌಸಿಂಗ್ ಎಡ್ಜ್ , ಬಾಡಿಗೆದಾರರು ಮತ್ತು ಮಾಲೀಕರಿಗೆ ಒಂದೆಡೆಯೇ ಎಲ್ಲ ಸೇವೆಗಳನ್ನು ಒದಗಿಸಲಿದೆ’ ಎಂದು ಗ್ರೂಪ್ನ ಸಿಒಒ ಮಣಿ ರಂಗರಾಜನ್ ಹೇಳಿದ್ದಾರೆ.
ಮನೆಗಳ ಮಾಲೀಕರು ಬಾಡಿಗೆಗೆ ನೀಡಲಿರುವ ತಮ್ಮ ಮನೆಗಳನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಪರಿಚಯಿಸಲೂ ಹೌಸಿಂಗ್ಡಾಟ್ಕಾಂ ನೆರವಾಗುತ್ತಿದೆ. ಮೂರು ಆಯಾಮದ (3ಡಿ) ಡಿಜಿಟಲ್ ಮಾಹಿತಿ ಮತ್ತು ವೈಯಕ್ತಿಕ ಅಗತ್ಯಗಳನ್ನು ಒದಗಿಸುವ ಸೇವೆಗಳ ಮೂಲಕ ತಮ್ಮ ಮನೆಗಳಿಗೆ ಉತ್ತಮ ಮಾರುಕಟ್ಟೆ ಕುದುರಿಸಿಕೊಳ್ಳಲು ನೆರವಾಗುತ್ತಿದೆ.
ತನ್ನ ಸೇವೆಗಳ ವ್ಯಾಪ್ತಿ ವಿಸ್ತರಿಸಲು ಮತ್ತು ಹೌಸಿಂಗ್ ಎಡ್ಜ್ನಲ್ಲಿ ಮನೆ ಬಾಡಿಗೆಗೆ ಸಂಬಂಧಿಸಿದಂತೆ ಬಾಡಿಗೆದಾರರಿಗೆ ನೆರವಾಗುವ ಸೇವೆಗಳನ್ನು ಆಕರ್ಷಕ ದರಗಳಲ್ಲಿ ಒದಗಿಸಲು ಹೌಸಿಂಗ್ಡಾಟ್ಕಾಂ- ಅರ್ಬನ್ ಕಂಪನಿ, ರೆಂಟೊಮೊಜೊ, ಲೀವ್ಸ್ಪೇಸ್, ಹ್ಯಾಪಿಲೋಕೇಟ್ ಮತ್ತು ಅಥಬ್ರಿಡ್ಜ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.