ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿದರೆ ಉದ್ಯೋಗಕ್ಕೆ ಕುತ್ತು, ನಮ್ಮ ಆದಾಯಕ್ಕೂ ಜಿಡಿಪಿಗೂ ಏನು ಸಂಬಂಧ?

ಆರ್‌ಬಿಐ ಕೇಂದ್ರಕ್ಕೆ ಯಾಕೆ ದೊಡ್ಡ ಮೊತ್ತದ ಹಣ ನೀಡಿತು?
Last Updated 3 ಸೆಪ್ಟೆಂಬರ್ 2019, 8:49 IST
ಅಕ್ಷರ ಗಾತ್ರ

ಒಂದೆರಡು ದಿನಗಳ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೇಂದ್ರಕ್ಕೆ₹ 1.76 ಲಕ್ಷ ಕೋಟಿ ಹಣ ನೀಡಿದ್ದು, ಜಿಡಿಪಿ ಕುಸಿತದ ಬಗ್ಗೆ ಕೇಳಿದ್ದೇವೆ. ಏನಿದು ಜಿಡಿಪಿ? ಆರ್‌ಬಿಐ ಕೇಂದ್ರಕ್ಕೆ ಯಾಕೆ ದೊಡ್ಡ ಮೊತ್ತದ ಹಣ ನೀಡಿತು? ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಪೃಥ್ವಿರಾಜ್ ಎಂ.ಎಚ್.

---

ಆರ್ಥಿಕ ವೃದ್ಧಿ ದರ (ಜಿಡಿಪಿ) ಎಂದರೇನು?

ಆರ್ಥಿಕ ವೃದ್ಧಿ ದರ ಅಥವಾ ಜಿಡಿಪಿ (Gross domestic product) ದೇಶದ ಒಟ್ಟಾರೆ ಆಂತರಿಕ ಉತ್ಪನ್ನ ಹಾಗೂ ಆರ್ಥಿಕ ಗಾತ್ರವನ್ನು ಸಂಕೇತಿಸುತ್ತದೆ. ಇನ್ನು ಸರಳವಾಗಿ ಹೀಗೆ ಹೇಳಬಹುದು;ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಜನರ ಒಟ್ಟು ಆದಾಯ ಹಾಗೂ ಉತ್ಪಾದನೆ (ಸರಕು),ಸೇವಾಕ್ಷೇತ್ರದಮಾರುಕಟ್ಟೆ ಮೌಲ್ಯವೇ ಜಿಡಿಪಿ.

ಈ ಜಿಡಿಪಿ ಆಧಾರದ ಮೇಲೆಯೇ ಸಿರಿವಂತ ಹಾಗೂ ಬಡ ದೇಶಗಳು ಎಂದು ಮಾಪನ ಮಾಡುವುದುಂಟು. ವಿಶ್ವದ ಒಟ್ಟು ಜಿಡಿಪಿಯಲ್ಲಿ ಅಮೆರಿಕ ಶೇ 25ರಷ್ಟುಭಾಗವನ್ನು ಹೊಂದಿದೆ. ಭಾರತ ಹೊಂದಿರುವುದು ಕೇವಲ ಶೇ 3ರಷ್ಟು ಮಾತ್ರ.

ಆರ್ಥಿಕ ವೃದ್ಧಿದರ (ಜಿಡಿಪಿ) ಕಡಿಮೆಯಾಗುವುದು ಎಂದರೇನು?

ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಕುಂಠಿತಗೊಳ್ಳುವುದು, ದೇಶೀಯ ಹಾಗೂ ವಿದೇಶಿ ಹೂಡಿಕೆ ಚಟುವಟಿಕೆಯಲ್ಲಿ ಇಳಿಕೆಯಾಗುವುದು, ಉದ್ಯೋಗ ಸೃಷ್ಟಿ ಕಡಿಮೆಯಾಗುವುದು ಮತ್ತು ಸೇವಾ ವಲಯದ (ರಿಯಲ್‌ ಎಸ್ಟೇಟ್‌, ಉದ್ಯಮ, ಕೈಗಾರಿಕೆ, ಸಾರಿಗೆ) ಮಂದಗತಿ ಬೆಳವಣಿಗೆ ಜಿಡಿಪಿ ಇಳಿಕೆಗೆ ಕಾರಣವಾಗಲಿದೆ. ಆದಾಗ್ಯೂ ಜಾಗತಿಕ ಮಟ್ಟದ ಆರ್ಥಿಕ ಹಿಂಜರಿತ ಹಾಗೂ ನಮ್ಮ ದೇಶದ ಕೇಂದ್ರಸರ್ಕಾರಆರ್ಥಿಕ ಬೆಳವಣಿಗೆ ಕುರಿತಂತೆತೆಗೆದುಕೊಂಡ ತಪ್ಪು ನಿರ್ಧಾರಗಳೂ ಜಿಡಿಪಿ ಇಳಿಕೆಯ ಮೇಲೆ ನೇರ ಪರಿಣಾಮ ಉಂಟುಮಾಡುತ್ತವೆ ಎಂದು ಅರ್ಥಶಾಸ್ತ್ರ್ಞರು ಹೇಳುತ್ತಾರೆ.

ಆರ್ಥಿಕ ವೃದ್ಧಿ ದರ (ಜಿಡಿಪಿ)ವನ್ನು ಯಾರು ನಿರ್ಧರಿಸುತ್ತಾರೆ? ಹೇಗೆ?

ವಿಶ್ವಬ್ಯಾಂಕ್‌ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಮಾನದಂಡಗಳಿಗೆ ಅನುಸಾರವಾಗಿ ಜಿಡಿಪಿ ದರವನ್ನು ಲೆಕ್ಕ ಹಾಕಲಾಗುತ್ತದೆ. ಭಾರತದಲ್ಲಿ ಯೋಜನೆ ಅನುಷ್ಠಾನ ಮತ್ತು ಸಾಂಖ್ಯಿಕ ಇಲಾಖೆ ಜಿಡಿಪಿಯನ್ನು ಮಾಪನ ಮಾಡುತ್ತದೆ. ದೇಶದಲ್ಲಿ ಜಿಡಿಪಿದರವನ್ನು ಪ್ರತಿ ತ್ರೈಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಆಯಾ ದೇಶಗಳಲ್ಲಿನ ಪ್ರಾಕೃತಿಕ ಮೂಲದಿಂದ ಬಂದ ಆದಾಯ (ಅರಣ್ಯ ಇತ್ಯಾದಿ), ಕೃಷಿ, ಕೈಗಾರಿಕೆ, ಉದ್ಯಮಗಳ ಉತ್ಪಾದನೆ ಹಾಗೂ ಸೇವಾ ವಲಯಗಳ ಗಾತ್ರವನ್ನುಪರಿಗಣಿಸಿ ಜಿಡಿಪಿ ನಿರ್ಧರಿಸಲಾಗುತ್ತದೆ. ದೇಶದ ಒಟ್ಟಾರೆ ಜನಸಂಖ್ಯೆಯ ಆದಾಯ ಮತ್ತು ಉತ್ಪಾದಿತ ಸರಕು ಸೇವೆಯ ಮೌಲ್ಯವನ್ನು ಲೆಕ್ಕಹಾಕಿ ಜಿಡಿಪಿಯ ರೇಟಿಂಗ್‌ಪ್ರಕಟಿಸಲಾಗುತ್ತಿದೆ.

ಕೃಷಿ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಗಣಿಗಾರಿಕೆ, ಉತ್ಪಾದನೆ (ಕೈಗಾರಿಕೆ ಮತ್ತು ಉದ್ಯಮಗಳು) ವಿದ್ಯುತ್, ಪೆಟ್ರೋಲಿಯಂ, ನೀರು, ವಸತಿ ಸೇರಿದಂತೆ ನಾಗರಿಕ ಸೌಕರ್ಯಗಳ, ಅಮದು, ರಫ್ತು ಸೇರಿದಂತೆ ವಾಣಿಜ್ಯ ಚಟುವಟಿಕೆಗಳು, ಸಾರಿಗೆ ಹಾಗೂ ರಕ್ಷಣಾ ವಲಯ ಸೇರಿದಂತೆ ಉತ್ಪಾದನೆಗೊಳ್ಳುವ ಎಲ್ಲಾ ಸೇವಾ ವಲಯಗಳನ್ನು ಜಿಡಿಪಿಯ ಮಾಪನಕ್ಕೆ ಒಳಪಡಿಸಲಾಗುವುದು. ಎಲ್ಲಾ ವಲಯಗಳ ದತ್ತಾಂಶಗಳನ್ನು ಕ್ರೋಡೀಕರಿಸಿ ಜಿಡಿಪಿಯನ್ನು ನಿರ್ಧರಿಸಲಾಗುತ್ತದೆ.

ನಮ್ಮ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ?

ಭಾರತದ ಆರ್ಥಿಕ ವರ್ಷ ಏಪ್ರಿಲ್‌ ತಿಂಗಳಿಂದ ಆರಂಭಗೊಂಡು ಮಾರ್ಚ್‌ಗೆ ಕೊನೆಗೊಳ್ಳುತ್ತದೆ. 2018–19ನೇ ಸಾಲಿನ ವಾರ್ಷಿಕ ಜಿಡಿಪಿ ದರ ಶೇ 7.1 ರಷ್ಟಿತ್ತು. 2019ರಏಪ್ರಿಲ್‌ನಿಂದ ಜೂನ್‌ ಅಂತ್ಯದವರೆಗಿನ ತ್ರೈಮಾಸಿಕದಲ್ಲಿನ ಒಟ್ಟು ಆಂತರಿಕ ಉತ್ಪಾದನೆ ಹೆಚ್ಚಳವು (ಜಿಡಿಪಿ)ಶೇ 5ರಷ್ಟಾಗುವ ಮೂಲಕ 6 ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ತಲುಪಿದೆ. 2012–13ನೇ ಸಾಲಿನ ಜನವರಿ– ಮಾರ್ಚ್‌ ತ್ರೈಮಾಸಿಕ ಅವಧಿಯಲ್ಲಿನ ವೃದ್ಧಿ ದರ ಶೇ 4.3ರಷ್ಟಾಗಿತ್ತು. 2018–19ರಲ್ಲಿನ ಇದೇ (ಏಪ್ರಿಲ್‌–ಜೂನ್‌) ತ್ರೈಮಾಸಿಕದಲ್ಲಿನ ವೃದ್ಧಿ ದರ ಶೇ 8ರಷ್ಟಿತ್ತು. 2020ರ ಮಾರ್ಚ್‌ ಅಂತ್ಯಕ್ಕೆ ಶೇ 7.5ರಷ್ಟು ವೃದ್ಧಿ ದರ ದಾಖಲಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಆರ್ಥಿಕ ವೃದ್ಧಿ ದರ (ಜಿಡಿಪಿ) ಯಾಕೆ ಮುಖ್ಯವಾಗುತ್ತದೆ ?

ದೇಶದ ಒಟ್ಟಾರೆ ಆರ್ಥಿಕ ಗಾತ್ರವನ್ನು ಜಿಡಿಪಿ ನಿರ್ಧರಿಸುತ್ತದೆ. ಇದರ ವೃದ್ದಿ ದರದ ಪರಿಣಾಮವಾಗಿ ವಿದೇಶಿ ಹೂಡಿಕೆಯ ಒಳ ಹರಿವು ಹೆಚ್ಚಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ. ವಿದೇಶಿಯರು ಇಲ್ಲಿ ಬಂಡವಾಳ ಹೂಡಿಕೆ ಮಾಡುವುದರಿಂದ ದೇಶದ ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಿ ದೇಶದ ಆಂತರಿಕ ತಲಾ ಆದಾಯ ಹೆಚ್ಚುವುದರಿಂದ ಆರ್ಥಿಕ ಪ್ರಗತಿಯನ್ನು ಕಾಣಬಹುದು.

ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿದರೆ ಜನರ ಕೈಯಲ್ಲಿ ಹಣ ಹರಿದಾಡುತ್ತದೆ ಇದರಿಂದ ಕೊಳ್ಳುವ ಶಕ್ತಿ ಹೆಚ್ಚಾಗಿ ಉತ್ಪಾದನ ಸರಕುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಈ ಸರಪಳಿ ವ್ಯವಸ್ಥೆ ಸಮತೋಲನವಾಗಿದ್ದರೆ ಮಾತ್ರ ಜಿಡಿಪಿ ಬೆಳವಣಿಗೆಯಾಗುತ್ತದೆ.

ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿಯಲು ಏನು ಕಾರಣ? ಮತ್ತು ಅದರ ಪರಿಣಾಮಗಳೇನು?

ನೋಟು ರದ್ಧತಿ ಹಾಗೂ ಜಿಎಸ್‌ಟಿ (ಸರಕು ಸೇವಾ ತೆರಿಗೆ)ಪರಿಣಾಮ ದೇಶಿಯ ಹೂಡಿಕೆ ಹಾಗೂ ವ್ಯಾಪಾರ ವಹಿವಾಟು ಕಡಿಮೆಯಾಗಿರುವುದು, ಹೆಚ್ಚುತ್ತಿರುವ ನಿರುದ್ಯೋಗ, ಬ್ಯಾಂಕುಗಳಲ್ಲಿನ ವಸೂಲಾಗದ ಸಾಲದ ಮೊತ್ತ ಹೆಚ್ಚಳ, ಸರ್ಕಾರ ಆರ್ಥಿಕ ಸುಧಾರಣೆಯ ಕ್ರಮಕ್ಕೆ ಸೂಕ್ತ ರೀತಿಯಲ್ಲಿ ಮುಂದಾಗದಿರುವುದು, ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವೇ ಜಿಡಿಪಿ ಇಳಿಕೆಗೆ ಕಾರಣ ಎನ್ನಲಾಗಿದೆ.

ಜಿಡಿಪಿ ಇಳಿಕೆಯ ಪರಿಣಾಮ ಉತ್ಪಾದನ ವಲಯ ಕುಂಠಿತಗೊಂಡು ಕೈಗಾರಿಕೆ ಹಾಗೂ ಸೇವಾವಲಯದ ಉದ್ಯಮಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತದೆ. ಇದರಿಂದ ಜನರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆ ಜಿಡಿಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಇದನ್ನು ಸರಿಪಡಿಸಲು ಸರ್ಕಾರಗಳು ಆರ್ಥಿಕ ಸುಧಾರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರ್ಥಶಾಸ್ತ್ರಜ್ಞರುಹೇಳುತ್ತಾರೆ.

ರಿಸರ್ವ್‌ ಬ್ಯಾಂಕಿನಿಂದ ಕೇಂದ್ರಸರ್ಕಾರ ₹ 1.76 ಲಕ್ಷ ಕೋಟಿ ಪಡೆದದ್ದು ಏಕೆ?

ಭಾರತದ ಆರ್ಥಿಕ ಬೆಳವಣಿಗೆಯಹಿಂಜರಿತ ತಡೆಗಟ್ಟಲು ಕೇಂದ್ರ ಸರ್ಕಾರ ಭಾರತೀಯ ರಿಸರ್ವ್‌ ಬ್ಯಾಂಕಿನಹೆಚ್ಚುವರಿ ಮೀಸಲು ನಿಧಿಯಲ್ಲಿನ₹1.76 ಲಕ್ಷ ಕೋಟಿಯನ್ನು ಕೇಂದ್ರದ ಬೊಕ್ಕಸಕ್ಕೆ ನೀಡಲಿದೆ. ಈ ಕ್ರಮದಿಂದಾಗಿಸರ್ಕಾರಿ ಹೂಡಿಕೆ ಹೆಚ್ಚಿಸಲು ಮತ್ತು ವಲಯವಾರು ಉತ್ತೇಜನಾ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ರಿಸರ್ವ್‌ ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಗಳ ಸಾಲ ಸಂಗ್ರಹದ ಗುರಿ ಕಡಿಮೆ ಮಾಡಲು, ಬ್ಯಾಂಕ್‌ಗಳಿಗೆ ಪುನರ್ಧನ ಕಲ್ಪಿಸಲು, ನಷ್ಟದ ಸುಳಿಗೆ ಸಿಲುಕಿರುವ ಹಲವಾರು ವಲಯಗಳಿಗೆ ಹಣಕಾಸು ನೆರವು ಒದಗಿಸುವುದು ಸರ್ಕಾರಕ್ಕೆ ಇನ್ನು ಮುಂದೆ ಸುಲಭವಾಗಲಿದೆ.

ಬ್ಯಾಂಕ್‌ಗಳಿಗೆ ಪುನರ್ಧನ ನೀಡುವುದರಿಂದ ಗೃಹ, ವಾಹನ ಖರೀದಿ ಮತ್ತಿತರ ಸಾಲಗಳ ಬಡ್ಡಿ ದರಗಳು ಅಗ್ಗವಾಗಲಿವೆ. ಸಾಲ ನೀಡಿಕೆ ಹೆಚ್ಚಳಗೊಂಡರೆ ಅದರಿಂದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಅಶ್ವಿನ್‌ ಪಾರೇಖ್‌ ಅಡ್ವೈಸರಿ ಸರ್ವಿಸಸ್‌ನ ಪಾಲುದಾರ ಅಶ್ವಿನ್‌ ಪಾರೇಖ್‌ ಹೇಳಿದ್ದಾರೆ.

ಜಿಡಿಪಿ ನಿರ್ಧಾರಕ್ಕೆಸ್ವತಂತ್ರ ಸಮಿತಿ ಅಗತ್ಯವಿದೆ ಎನ್ನುವ ಕೂಗು ಈಗೇಕೆ ಕೇಳಿಬರುತ್ತಿದೆ?

ಕೇಂದ್ರದಯೋಜನೆ ಅನುಷ್ಠಾನ ಮತ್ತು ಸಾಂಖ್ಯಿಕ ಇಲಾಖೆಯು ದೇಶವ್ಯಾಪಿ ದತ್ತಾಂಶಗಳನ್ನು ಸಂಗ್ರಹಿಸಿ ಜಿಡಿಪಿಯನ್ನು ನಿರ್ಧರಿಸುತ್ತದೆ.ಯೋಜನೆ ಅನುಷ್ಠಾನ ಮತ್ತು ಸಾಂಖ್ಯಿಕ ಇಲಾಖೆ ಸರ್ಕಾರದ ಹಿಡಿತದಲ್ಲಿ ಇರುವುದರಿಂದ ವಿಶ್ವಾರ್ಹತೆಯ ಪ್ರಶ್ನೆಗಳು ಎದ್ದಿವೆ. ಜಿಡಿಪಿ ನಿರ್ಧರಿಸುವ ಸಂಸ್ಥೆಗೆ ಕೇಂದ್ರ ಬ್ಯಾಂಕ್‌ (ರಿಸರ್ವ್‌ ಬ್ಯಾಂಕ್) ರೀತಿಯಲ್ಲಿ ಸ್ವಾಯುತ್ತತೆನೀಡಬೇಕು ಎಂಬ ಕೂಗುಗಳುಕೇಳಿಬಂದಿವೆ.

ಕಳೆದ ವರ್ಷ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ– ರಾಷ್ಟ್ರೀಯ ಮಾದರಿ ಸಮೀಕ್ಷೆ) ನಡೆಸಿದ ಅಧ್ಯಯನದಲ್ಲಿ, ಆರ್ಥಿಕ ವೃದ್ಧಿ ದರ ಲೆಕ್ಕ ಹಾಕುವಲ್ಲಿ ಗಮನಾರ್ಹ ದೋಷಗಳು ಇರುವುದು ಪತ್ತೆಯಾಗಿತ್ತು.

ಇದನ್ನೂ ಓದಿ: ಆರ್ಥಿಕ ವೃದ್ಧಿ ದರ ಕುಸಿತ ಆತಂಕಕಾರಿ ವಿದ್ಯಮಾನ

ಸರ್ಕಾರಿ ಸಂಸ್ಥೆಗಳು ಆರ್ಥಿಕ ವೃದ್ಧಿ ದರ ಲೆಕ್ಕ ಹಾಕಲು ಪರಿಗಣಿಸಿರುವ ಉದ್ಯಮ, ಕೈಗಾರಿಕೆಗಳ ಪೈಕಿ ಮೂರನೇ ಒಂದರಷ್ಟುಸಂಸ್ಥೆಗಳು ಬಾಗಿಲು ಹಾಕಿವೆ ಇಲ್ಲವೆ ಉತ್ಪಾದನೆ ನಿಲ್ಲಿಸಿವೆ ಅಥವಾ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ‘ಎನ್‌ಎಸ್‌ಎಸ್‌ಒ’ ಅಧ್ಯಯನದಲ್ಲಿ ಹೇಳಿತ್ತು. ಇದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.

‘ಭಾರತದ ಜಿಡಿಪಿ ವೃದ್ಧಿ ದರ ಮತ್ತು ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಪರಾಮರ್ಶೆಗೆ ಒಳಪಡುತ್ತಿರುವುದರಿಂದಸರ್ಕಾರಿ ಸಂಸ್ಥೆಗಳ ಬದಲಿಗೆ ಸ್ವಾಯತ್ತ ಸಂಸ್ಥೆಯ ಮೂಲಕಆರ್ಥಿಕ ವೃದ್ಧಿ ದರ ಮಾಪನ ಮಾಡಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT