ಶನಿವಾರ, ಸೆಪ್ಟೆಂಬರ್ 25, 2021
30 °C

ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ತಗ್ಗಿಸಿದ ಐಎಂಎಫ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ಶೇಕಡ 9.5ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಕೋವಿಡ್‌ನ ಎರಡನೆಯ ಅಲೆ ಅಪ್ಪಳಿಸುವುದಕ್ಕೂ ಮೊದಲು ಐಎಂಎಫ್‌, ಭಾರತದ ಜಿಡಿಪಿ ಈ ವರ್ಷದಲ್ಲಿ ಶೇ 12.5ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು.

2022–23ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 8.5ರಷ್ಟು ಇರಬಹುದು ಎಂದು ಐಎಂಎಫ್ ಅಂದಾಜಿಸಿದೆ. ‘ಮಾರ್ಚ್‌ನಿಂದ ಮೇ ತಿಂಗಳವರೆಗೆ ಇದ್ದ ಎರಡನೆಯ ಅಲೆಯ ತೀವ್ರತೆಯ ಕಾರಣದಿಂದಾಗಿ ಭಾರತದ ಜಿಡಿಪಿ ಬೆಳವಣಿಗೆ ಅಂದಾಜನ್ನು ಇಳಿಕೆ ಮಾಡಲಾಗಿದೆ’ ಎಂದು ಸಂಸ್ಥೆಯು ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ ಹೇಳಿದೆ.

ಜಾಗತಿಕ ಮಟ್ಟದ ಹಲವು ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ದರವನ್ನು ತಗ್ಗಿಸಿವೆ. ಈ ಸಂಸ್ಥೆಗಳ ಸಾಲಿಗೆ ಈಗ ಐಎಂಎಫ್ ಕೂಡ ಸೇರಿಕೊಂಡಿದೆ. ಹಿಂದಿನ ತಿಂಗಳಿನಲ್ಲಿ, ಎಸ್ಆ್ಯಂಡ್‌ಪಿ ಕೂಡ ಭಾರತದ ಜಿಡಿಪಿ ಬೆಳವಣಿಗೆ ದರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 9.5ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.

ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ ದೇಶವು ಈ ಹಣಕಾಸು ವರ್ಷದಲ್ಲಿ ಶೇ 8.3ರಷ್ಟು ಬೆಳವಣಿಗೆ ಕಾಣಲಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ (ಎಡಿಬಿ) ಅಂದಾಜಿನ ಪ್ರಕಾರ ಆರ್ಥಿಕ ಬೆಳವಣಿಗೆ ದರವು ಶೇ 10ರಷ್ಟು ಇರಲಿದೆ. ಈ ಮೊದಲು ಎಡಿಬಿ, ಬೆಳವಣಿಗೆ ದರವು ಶೇ 11ರಷ್ಟು ಇರಲಿದೆ ಎಂದು ಹೇಳಿತ್ತು. ಅಮೆರಿಕದ ರೇಟಿಂಗ್ಸ್ ಸಂಸ್ಥೆಯಾಗಿರುವ ಮೂಡಿಸ್‌, ಜಿಡಿಪಿ ಬೆಳವಣಿಗೆ ಶೇ 9.3ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು