ಭಾನುವಾರ, ಫೆಬ್ರವರಿ 23, 2020
19 °C
ಅಂತರರಾಷ್ಟ್ರೀಯ ಹಣಕಾಸು ನಿಧಿಯ ನಿರ್ದೇಶಕರ ಅಭಿಪ್ರಾಯ

ಆರ್ಥಿಕತೆಗೆ ತುರ್ತುಕ್ರಮ ಅಗತ್ಯ : ಹಣಕಾಸು ನಿಧಿ ನಿರ್ದೇಶಕರ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಭಾರತದ ಆರ್ಥಿಕತೆಯನ್ನು ಮಂದಗತಿಯ ಬೆಳವಣಿಗೆ ಸ್ಥಿತಿಯಿಂದ ಹೊರತರಲು ಕೇಂದ್ರ ಸರ್ಕಾರ ತುರ್ತುಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಭಿಪ್ರಾಯಪಟ್ಟಿದೆ.  

ಕೆಲ ವರ್ಷಗಳಿಂದ ಭಾರತವು,ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆಯಾಗಿದೆ. ಲಕ್ಷಾಂತರ ಮಂದಿ ಬಡತನದಿಂದ ಹೊರಬಂದಿದ್ದಾರೆ. ಆದರೆ, ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಎಂದು ಕಾರ್ಮಿಕ ಮಾರುಕಟ್ಟೆ ಅಂಕಿ–ಅಂಶ ನೀಡಿದೆ. ಹೀಗಾಗಿ ಸಮಗ್ರ ಮತ್ತು ಸುಸ್ಥಿರ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದು ಹೇಳಿದೆ.

ಸಹಜ ಪ್ರಕ್ರಿಯೆ: ಸದ್ಯದ ಮಂದಗತಿಯು ಒಂದು ಸಹಜ ಪ್ರಕ್ರಿಯೆಯಾಗಿದ್ದು, ರಚನಾತ್ಮಕ ಪರಿಣಾಮವಲ್ಲ ಎಂದು ನಂಬಿದ್ದೇವೆ. ಏಕೆಂದರೆ, ಹಣಕಾಸು ವಲಯದಲ್ಲಿನ ಸಮಸ್ಯೆಗಳು, ಈ ಹಿಂದೆ ನಾವು ಭಾವಿಸಿದಷ್ಟು ಬೇಗ ಬಗೆಹರಿಯುವುದಿಲ್ಲ. ಅದೇ ಮಂದಗತಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ.

ಭಾರತವು ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿದೆಯೇ ಎನ್ನುವ ಪ್ರಶ್ನೆಗೆ, ಈಗಲೇ ಹಾಗೆ ಹೇಳಲು ಸಾಧ್ಯವಿಲ್ಲ. ಸದ್ಯಕ್ಕಂತೂ ಬೆಳವಣಿಗೆಯು ಮಂದಗತಿಯಲ್ಲಿದೆ ಎನ್ನುವುದು ಕಾಣಿಸುತ್ತಿದೆ. ಇದು ಅಚ್ಚರಿ ಮೂಡಿಸಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 4.5ಕ್ಕೆ ಕುಸಿದಿದೆ. ಹಣಕಾಸು ವಲಯದ ಸಮಸ್ಯೆ
ಗಳು ಮತ್ತು ವಹಿವಾಟು ನಡೆಸಲು ಅಗತ್ಯವಾದ ಆತ್ಮವಿಶ್ವಾಸದ ಕೊರತೆಯಿಂದಾಗಿ ಖಾಸಗಿ ಹೂಡಿಕೆ ಕಡಿಮೆಯಾಗಿದೆ. 

ಜಿಎಸ್‌ಟಿಯಂತಹ ಸಾಂಸ್ಥಿಕ ಸುಧಾರಣೆಗಳನ್ನು ದೇಶದಾದ್ಯಂತ ಜಾರಿಗೊಳಿಸುವಲ್ಲಿ ಆಗಿರುವ ಸಮಸ್ಯೆಗಳು ಸಹ ಖಾಸಗಿ ಹೂಡಿಕೆಯ ಮೇಲೆ ಪರಿಣಾಮ ಬೀರಿವೆ. ‘ಆರ್ಥಿಕತೆಗೆ ಉತ್ತೇಜನ ನೀಡಲು ವಿತ್ತೀಯ ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ಆದರೆ ಸರ್ಕಾರದ ಮುಂದೆ ಸೀಮಿತ ಆಯ್ಕೆಗಳಷ್ಟೇ ಇವೆ. ಸರ್ಕಾರದ ವಿತ್ತೀಯ ಕೊರತೆ ಮತ್ತು ಸಾಲವೂ ಈಗಾಗಲೇ ಮಿತಿ ಮೀರಿದೆ’ ಎಂದು ವಾಸ್ತವ ಚಿತ್ರಣವನ್ನು ವಿವರಿಸಿದೆ. 

ಯುವಕರಲ್ಲಿ ಉಳಿತಾಯದ ಆಸಕ್ತಿ ಕಮ್ಮಿ

ಭಾರತದಲ್ಲಿ ಹದಿಹರೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಅವರಲ್ಲಿ ಉಳಿತಾಯ ಮಾಡುವ ಪ್ರವೃತ್ತಿ ಮಾತ್ರ ಸಾಕಷ್ಟು ಕಡಿಮೆ ಇದೆ ಎಂದು ಐಎಂಎಫ್‌ ಹೇಳಿದೆ.

ಭಾರತದಲ್ಲಿ ಕೌಟುಂಬಿಕ ಉಳಿತಾಯದ ಪ್ರಮಾಣ ಇಳಿಮುಖವಾಗಿದೆ. ಹೀಗಾಗಿ ದೇಶದ ಹಣಕಾಸು ವ್ಯವಸ್ಥೆಯ ಬಗ್ಗೆ ಯುವಸಮೂಹದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ದೇಶದಲ್ಲಿ ಕೌಟುಂಬಿಕ ಉಳಿತಾಯವು ಎಂಟು ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಅದು ಹೇಳಿದೆ. 2016ರಲ್ಲಿ ನೋಟು ರದ್ದತಿ ಜಾರಿಗೊಳಿಸಿದ ಬಳಿಕ ಜಿಡಿಪಿಯ ಶೇ 3.6ಕ್ಕೆ ಕುಸಿದಿತ್ತು. ವಿಮೆ, ಷೇರುಗಳಲ್ಲಿ ಹೂಡಿಕೆ, ಠೇವಣಿ ಇಡುವ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು