ಸೋಮವಾರ, ಜನವರಿ 20, 2020
27 °C

ಬ್ಯಾಂಕ್‌ ವ್ಯವಹಾರಗಳಲ್ಲಿ ನಾಮನಿರ್ದೇಶನ ಮಹತ್ವ

ವಸಂತ ಜಿ. ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ವ್ಯಾಪಾರಿಯೊಬ್ಬರು ಆಕಸ್ಮಿಕವಾಗಿ ಮೃತಪಟ್ಟಾಗ ಅವರ ಮಡದಿ ನಿಶಾ ಅವರಿಗೆ ತಮ್ಮ ಪತಿಯ ವ್ಯಾಪಾರ– ವ್ಯವಹಾರ ಹಾಗೂ ಹಣದ ಹೂಡಿಕೆಗಳ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ. ತಮ್ಮ ಪತಿಯ ಬ್ಯಾಂಕ್‌ ಖಾತೆಗಳು ಮತ್ತು ಠೇವಣಿಯ ವಿವರಗಳೂ ಗೊತ್ತಿರಲಿಲ್ಲ. ಜಾಣ ವ್ಯಾಪಾರಿಯು ತಮ್ಮ ಬ್ಯಾಂಕ್‌ ಖಾತೆಯಲ್ಲಿನ ಠೇವಣಿಗಳಿಗೆ ಪತ್ನಿಯ ಹೆಸರನ್ನು ನಾಮನಿರ್ದೇಶನ (ನಾಮಿನಿ) ಮಾಡಿದ್ದರು. ಬ್ಯಾಂಕ್‌ ವ್ಯವಹಾರಗಳಲ್ಲಿ ಎಷ್ಟೋ ಬಾರಿ ತಮಗೆ ಗೊತ್ತಿಲ್ಲದೆಯೇ ಖಾತೆದಾರರು ಬ್ಯಾಂಕ್‌ನ ನಿಯಮಾ
ವಳಿಗಳನ್ನು ಅನುಸರಿಸಿರುತ್ತಾರೆ. ಅಂತೆಯೇ ಈ ವ್ಯಾಪಾರಿಯೂ ತಮ್ಮ ಪತ್ನಿಯ ಹೆಸರನ್ನು ಸೂಚಿಸಿದ್ದರು. ಇದು ನಿಶಾ ಅವರ ಗಂಭೀರ ಸಮಸ್ಯೆಯೊಂದನ್ನು ಸುಲಭವಾಗಿ ಪರಿಹರಿಸಿತ್ತು. ದಾಖಲೆ ಮತ್ತು ಗುರುತು ಪತ್ರಗಳನ್ನು ನೀಡುವಂತೆ ನಿಶಾ ಅವರನ್ನು ಬ್ಯಾಂಕ್‌ ಕೇಳಿತು. ಹೀಗಾಗಿ ಪತಿ ಇರಿಸಿದ್ದ ಠೇವಣಿ ಮತ್ತಿತರ ಬ್ಯಾಂಕಿಂಗ್‌ ವ್ಯವಹಾರದ ಮಾಹಿತಿ ನಿಶಾ ಅವರಿಗೆ ದೊರೆಯುವಂತಾಯಿತು. ಒಂದು ವೇಳೆ ನಿಶಾ ಅವರ ಹೆಸರಿನ ಬದಲಾಗಿ ಬೇರೊಬ್ಬರ ಹೆಸರನ್ನು ನಾಮನಿರ್ದೇಶನಗೊಳಿಸಿದ್ದರೆ ಪತಿಯ ವ್ಯವಹಾರಗಳಿಗೆ ಸುಲಭವಾಗಿ ಅವರು ವಾರಸುದಾರರಾಗುತ್ತಿಲ್ಲ.

ಈ ಮೇಲಿನ ಪ್ರಕರಣವು ಹಣ ಹೂಡಿಕೆಗಳಲ್ಲಿ ನಾಮನಿರ್ದೇಶನದ ಮಹತ್ವವನ್ನು ತೋರಿಸುತ್ತದೆ. ಪಿಪಿಎಫ್, ಜೀವ ವಿಮೆ, ಮ್ಯೂಚುವಲ್ ಫಂಡ್ ಅಥವಾ ಬ್ಯಾಂಕ್ ಠೇವಣಿ ಸೇರಿದಂತೆ ಯಾವುದೇ ಹಣದ ವ್ಯವಹಾರ ಆಗಿರಲಿ ಕಡ್ಡಾಯವಾಗಿ ನಾಮನಿರ್ದೇಶನ ಮಾಡಲು ಮರೆಯಬಾರದು.

ನಾಮನಿರ್ದೇಶನ ಎಂದರೆ ಏನು?: ತಮ್ಮ ಖಾತೆಗೆ ವಾರಸುದಾರರನ್ನು ಸೂಚಿಸಲು ಅಥವಾ ನೇಮಿಸಲು ಖಾತೆದಾರರಿಗೆ ಅನುವು ಮಾಡಿಕೊಡುವ ಸೌಲಭ್ಯ ಇದಾಗಿದೆ. ಮರಣಾ ನಂತರ ತಮ್ಮ ಖಾತೆಯ ಠೇವಣಿ ಹಣವನ್ನು ಪಡೆಯುವ ಹಕ್ಕನ್ನು ವಾರಸುದಾರರಿಗೆ ಇದು ನೀಡುತ್ತದೆ. ಇದರಿಂದ ಪ್ರಮಾಣ ಪತ್ರ, ಆಡಳಿತ ಪತ್ರ ಅಥವಾ ನ್ಯಾಯಾಲಯದ ಆದೇಶಕ್ಕೆ ಕಾಯದೆ ಸುಲಭವಾಗಿ ನಾಮನಿರ್ದೇಶನಗೊಂಡವರು ಖಾತೆಯ
ಲ್ಲಿನ ಹಣ ಮತ್ತು ಇತರ ವ್ಯವಹಾರಗಳಿಗೆ ಹಕ್ಕುದಾರರಾಗಿರುತ್ತಾರೆ. 

ನಾಮನಿರ್ದೇಶನ ಕಡ್ಡಾಯವೇ ಇಲ್ಲ. ಖಾತೆಗೆ ಯಾರನ್ನೂ ನಾಮನಿರ್ದೇಶನ ಮಾಡಲು ಇಚ್ಛಿಸುವುದಿಲ್ಲ ಎಂದು ಅರ್ಜಿಯಲ್ಲಿ ಸೂಚಿಸ ಬೇಕಾಗುತ್ತದೆ. ಆದರೂ, ನಿಮ್ಮ ಬ್ಯಾಂಕ್‌ ಖಾತೆಯ ಹಕ್ಕುಗಳ ಇತ್ಯರ್ಥಕ್ಕೆ ಹಾಗೂ ಕಾರ್ಯವಿಧಾನವನ್ನು ಸರಳಗೊಳಿಸಲು ನಿಮ್ಮ ನಂಬಿಕಸ್ಥರನ್ನೇ ನಾಮನಿರ್ದೇಶನ ಮಾಡುವುದು ಸೂಕ್ತ. ಅವರು ನಿಮ್ಮ ಖಾತೆಗೆ ‘ಟ್ರಸ್ಟಿ’ಯಂತೆಯೇ ಹೊರತು, ನಿಮ್ಮ ಜೀವಿತಾವಧಿಯಲ್ಲಿಯೇ ನಿಮ್ಮ ಖಾತೆ, ಹಣಕಾಸು ವ್ಯವಹಾರಗಳ ಮೇಲೆ ಹಕ್ಕುದಾರಿಕೆ ಸ್ಥಾಪಿಸಲು ಅವಕಾಶ ಇರುವುದಿಲ್ಲ.

ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರು, ವಿವಿಧ ಅವಧಿಗಳವರೆಗೆ ಠೇವಣಿ ಇರಿಸಿರುವ ವೈಯಕ್ತಿಕ ಅಥವಾ ಜಂಟಿ ಖಾತೆದಾರರು ‘ನಾಮಿನಿ’ಯನ್ನು ಸೂಚಿಸಬಹುದು. ಖಾತೆದಾರರು ಒಬ್ಬರನ್ನು ಮಾತ್ರವೇ ತಮ್ಮ ಖಾತೆಗೆ ನಾಮನಿರ್ದೇಶನ ಮಾಡಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಠೇವಣಿ ಖಾತೆಗಳಿದ್ದಲ್ಲಿ, ಅವರ ಪರವಾಗಿ ಕಾರ್ಯ ನಿರ್ವಹಿಸಲು ಕಾನೂನುಬದ್ಧವಾದ ಅರ್ಹ ವ್ಯಕ್ತಿಯನ್ನು ಸೂಚಿಸಬಹುದು.

ವೈಯಕ್ತಿಕ ಅಥವಾ ಜಂಟಿ ಖಾತೆ ಯಾವುದೇ ಆಗಲಿ ಒಂದು ಠೇವಣಿಗೆ ಒಬ್ಬರನ್ನು ಮಾತ್ರವೇ ‘ನಾಮಿನಿ’ ಮಾಡಲು ಸಾಧ್ಯ. ಆದರೆ, ಮ್ಯೂಚುವಲ್ ಫಂಡ್‌ ಅಥವಾ ಪಿಪಿಎಫ್‌ನಂತಹ ಖಾತೆಗಳಿಗೆ ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ಮಾಡಲು ಅವಕಾಶ ಇರುತ್ತದೆ. ಬ್ಯಾಂಕ್‌ನ ಬೇರೆ ಬೇರೆ ಠೇವಣಿ ಖಾತೆಗಳಿಗೆ ವಿಭಿನ್ನ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಆಯ್ಕೆ ಇರುತ್ತದೆ. ಇವರು ನಿಮ್ಮ ಸಂಬಂಧಿಯೇ ಆಗಬೇಕೆಂದೇನೂ ಇಲ್ಲ. ಸ್ನೇಹಿತ, ನಂಬಿಕಸ್ಥರು ಅಥವಾ ಪರಿಚಯಸ್ಥರು ಯಾರಾದರೂ ಆಗಿರಬಹುದು.

ಬ್ಯಾಂಕ್‌ ಖಾತೆಯನ್ನು ತೆರೆಯುವಾಗ ಅಥವಾ ನಂತರ ‘ನಾಮಿನಿ’ ವ್ಯಕ್ತಿಯನ್ನು ನೋಂದಾಯಿಸ ಬಹುದು. ಠೇವಣಿ ಖಾತೆಗಳು ಮತ್ತು ಲಾಕರ್‌ ಸೇವೆಗಳು ಸೇರಿದಂತೆ ವಿವಿಧ ಬಗೆಯ ಠೇವಣಿ ಖಾತೆಗಳಿಗೆ ವಿವಿಧ ನಮೂನೆಗಳು ಇರುತ್ತವೆ. ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ನಾಮನಿರ್ದೇಶನ ಮತ್ತು ನಿಮ್ಮ ಠೇವಣಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಸ್ವೀಕೃತಿ ಪತ್ರವೊಂದನ್ನು ನೀಡುತ್ತದೆ. ಖಾತೆಯು ಚಾಲ್ತಿಯಲ್ಲಿ ಇರುವವರೆಗೆ ಯಾವ ಸಮಯದಲ್ಲಾದರೂ ನಾಮನಿರ್ದೇಶನಗೊಂಡ ವ್ಯಕ್ತಿಯನ್ನು ಬದಲಾಯಿ ಸುವ ಅಥವಾ ರದ್ದುಗೊಳಿಸುವ ಅವಕಾಶ ಇರುತ್ತದೆ.

ಇದನ್ನು ಮಾಡುವಾಗ ಕೆಲವು ನಿಯಮ ಪಾಲಿಸಬೇಕಾಗುತ್ತದೆ. ಖಾತೆಯು ಒಬ್ಬರಿಗಿಂತ ಹೆಚ್ಚು ಮಂದಿಗೆ ಸೇರಿದ್ದರೆ (ಜಂಟಿ ಖಾತೆ) ಬದಲಾವಣೆಗಾಗಿ ಅಗತ್ಯ ನಮೂನೆಗಳಿಗೆ ಸಹಿ ಮಾಡಬೇಕಾಗುತ್ತದೆ. ಡಿಎ–1 ನಮೂನೆಯನ್ನು ಹೊಸ ನಾಮನಿರ್ದೇಶನಕ್ಕಾಗಿ, ಡಿಎ–2 ಮತ್ತು ಡಿಎ–3 ನಮೂನೆಗಳನ್ನು ರದ್ದತಿ ಹಾಗೂ ಮಾರ್ಪಾಡುಗಳಿಗಾಗಿ ಬಳಸಬೇಕಾಗುತ್ತದೆ. ಈ ಅರ್ಜಿಗಳನ್ನು ಬ್ಯಾಂಕ್‌ನ ವೆಬ್‌ಸೈಟ್‌ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

(ಲೇಖಕ: ಮಣಿಪಾಲ್‌ ಅಕಾಡೆಮಿ ಆಫ್‌ ಬ್ಯಾಂಕಿಂಗ್‌ನ ಉಪನ್ಯಾಸಕ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು