ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕೊಳೆಯುತ್ತಿದೆ ವಿದೇಶಿ ಈರುಳ್ಳಿ, ಸ್ಥಳೀಯ ಪೂರೈಕೆ ಹೆಚ್ಚಳ

Last Updated 16 ಜನವರಿ 2020, 7:21 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು:ಬೆಲೆ ಗಗನಕ್ಕೆರುತ್ತಿದ್ದಂತೆ ವರ್ತಕರು ಟರ್ಕಿ ಮತ್ತು ಈಜಿಪ್ಟ್‌ನಿಂದ ಈರುಳ್ಳಿ ಆಮದು ಮಾಡಿಕೊಂಡರು. ಸ್ಥಳೀಯ ಈರುಳ್ಳಿ ಬೆಲೆ ಹೆಚ್ಚಿದರೂ ವಿದೇಶದಿಂದ ಬಂದದ್ದನ್ನು ಕೊಂಡು ಹೋಗಲು ಗ್ರಾಹಕರು ಹಿಂಜರಿಕೆ ತೋರಿದರು. ಕಳೆದ ಒಂದು ತಿಂಗಳಿಂದ ಮಹಾರಾಷ್ಟ್ರ, ಗುಜರಾತ್‌ ಹಾಗೂ ಮಧ್ಯ ಪ್ರದೇಶದಿಂದ ಹೊಸ ಈರುಳ್ಳಿಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಆಮದು ಈರುಳ್ಳಿಗೆ ಬೇಡಿಕೆ ತೀವ್ರ ಕುಸಿದಿದ್ದು, ಯಶವಂತಪುರ ಎಪಿಎಂಸಿಯಲ್ಲಿ ಅವು ಕೊಳೆಯುವ ಹಂತ ತಲುಪಿವೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ₹ 200 ಮುಟ್ಟುತ್ತಿದ್ದಂತೆ ವಿವಿಧ ರಾಷ್ಟ್ರಗಳಿಂದ ತರಕಾರಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿತು. ಟರ್ಕಿಯ ಚಿನ್ನದ ಬಣ್ಣದ ಹಾಗೂ ಈಜಿಪ್ಟ್‌ನ ಗಾಢ ಕೆಂಪು ಈರುಳ್ಳಿ ತರಿಸಿಕೊಳ್ಳಲಾಯಿತು. ಆದರೆ, ಅವುಗಳ ಬಣ್ಣ, ಗಾತ್ರ ಮತ್ತು ರುಚಿಯ ಕಾರಣಗಳಿಂದ ಗ್ರಾಹಕರು ಖರೀದಿಗೆ ಮನಸ್ಸು ಮಾಡಲೇ ಇಲ್ಲ.

'ಕಳೆದ ಎರಡು ವಾರಗಳಿಂದ ಸ್ಥಳೀಯವಾಗಿ ಬೆಳೆದ ಈರುಳ್ಳಿ ಪೂರೈಕೆ ದಿಢೀರ್‌ ಹೆಚ್ಚಳವಾಗಿದೆ. ಬಿಜಾಪುರ, ಕಲಬುರ್ಗಿ ಹಾಗೂ ರಾಯಚೂರಿನಿಂದ ಸಗಟು ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಇತರೆ ರಾಷ್ಟ್ರಗಳಿಂದಲೂ ಪೂರೈಕೆ ಹೆಚ್ಚಿದೆ' ಎಂದು ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್‌ ಕೆ. ಹೇಳಿದ್ದಾರೆ.

ಬೇಡಿಕೆ ಇಲ್ಲ...

ಪ್ರವಾಹದ ಕಾರಣದಿಂದಾಗಿ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬೆಳೆ ನಾಶವಾಗಿ, ಈರುಳ್ಳಿ ಪೂರೈಕೆ ಕುಸಿದಿತ್ತು.ಮುಂಬೈ, ಮಂಗಳೂರು ಹಾಗೂ ಹುಬ್ಬಳ್ಳಿಯಿಂದ ತರಿಸಿಕೊಳ್ಳಲಾದ 750 ಟನ್‌ ಟರ್ಕಿ ಮತ್ತು ಈಜಿಪ್ಟ್‌ ಆಮದು ಈರುಳ್ಳಿ ದಾಸ್ತಾನಿನಲ್ಲಿ ಅರ್ಧದಷ್ಟು ಹಾಗೆಯೇ ಉಳಿದಿದೆ. ಎರಡು ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 40–65 ನೀಡಿ ಆಮದು ಮಾಡಿಕೊಳ್ಳಲಾಗಿದ್ದ ಈರುಳ್ಳಿ ಕೆ.ಜಿ.ಗೆ ₹ 100 ರಿಂದ ₹ 120ಕ್ಕೆ ಮಾರಾಟ ಮಾಡಲಾಗಿತ್ತು.

ಚಿನ್ನದ ಬಣ್ಣದ ಈರುಳ್ಳಿಯಲ್ಲಿ ನೀರಿನ ಅಂಶ ಹೆಚ್ಚು, ಗಾಢ ಕೆಂಪು ಈರುಳ್ಳಿಯಲ್ಲಿ ಅಡುಗೆ ಮಾಡಿದರೆ ಇಡೀ ಅಡುಗೆಯೇ ನೇರಳೆ ಬಣ್ಣಕ್ಕೆ ತಿರುಗುತ್ತದೆ ಎಂದು ಗ್ರಾಹಕರು ಅವುಗಳ ಬಳಕೆಗೆ ಉತ್ಸಾಹ ತೋರಲಿಲ್ಲ. ವಿದೇಶಿ ಈರುಳ್ಳಿಗೆ ಬೇಡಿಕೆ ಕುಸಿಯುತ್ತಿದ್ದಂತೆ ದಾಸ್ತಾನುಕೊಳೆಯುತ್ತಿದೆ. ವರ್ತಕರು ಈಜಿಪ್ಟ್‌ ಈರುಳ್ಳಿಯನ್ನು ಕೆ.ಜಿ.ಗೆ ₹ 15ಕ್ಕೆ ನೀಡುತ್ತಿದ್ದಾರೆ.

ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಅರ್ಧದಷ್ಟು ದಾಸ್ತಾನು ಹಾಗೆಯೇ ಉಳಿದಿರುವುದರಿಂದ ಆಮದು ಮಾಡಿಕೊಂಡವರು ಹಾಗೂ ವರ್ತಕರು ನಷ್ಟ ಅನುಭವಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಿಂದ ಪೂರೈಕೆ ಹೆಚ್ಚಿದ್ದು, ಕಳೆದ ಎರಡು ವಾರಗಳಲ್ಲೇ ಈರುಳ್ಳಿ ಬೆಲೆ ₹ 70 ರಿಂದ ₹ 30ಕ್ಕೆ ಕುಸಿದಿದೆ. ಮಾರ್ಚ್‌ ಅಂತ್ಯಕ್ಕೆ ಬೆಲೆ ಪ್ರತಿ ಕೆ.ಜಿ.ಗೆ ₹ 10 ಅಥವಾ ಅದಕ್ಕಿಂತಲೂ ಕಡಿಮೆಯಾಗಬಹುದೆಂದು ವರ್ತಕರುಆತಂಕದಲ್ಲಿರುವುದಾಗಿ ಎ‍ಪಿಎಂಸಿಯ ಲೋಕೇಶ್‌ ತಿಳಿಸಿದ್ದಾರೆ.

'ಪೂರೈಕೆ ಕಡಿಮೆಯಾಗಿದ್ದಾಗ ಈರುಳ್ಳಿ ಬೆಳೆದಿದ್ದ ಕೆಲವು ರೈತರು ಲಾಭ ಗಳಿಸಿದರು. ಆಬಗ್ಗೆ ತಿಳಿದುಕೊಂಡಿರುವ ಉತ್ತರ ಕರ್ನಾಟಕ ಭಾಗದ ಸಾವಿರಾರು ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಚಳ್ಳಕೆರೆಯಿಂದ ಇನ್ನೂ ಪೂರೈಕೆ ಆರಂಭವಾಗಿಲ್ಲ. ಮಾರ್ಚ್‌ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ' ಎಂದಿದ್ದಾರೆ.

ಹತ್ತು ಕ್ವಿಂಟಾಲ್‌ ಈರುಳ್ಳಿ ತಂದಿದ್ದ ಕಲಬುರ್ಗಿಯ ರೈತ ವಿಶ್ವನಾಥ್ ಅಮೃತ್‌ ಘೋಡ್ಕೆ ಪೆಚ್ಚು ಮೋರೆ ಹೊತ್ತಿದ್ದರು. ಮೂರು ವಾರಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ₹ 12,000 ಪಡೆದಿದ್ದ ಅವರು, ಸೋಮವಾರ ಕ್ವಿಂಟಾಲ್‌ಗೆ ₹ 3,000 ಪಡೆಯುವುದೂ ಕಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT