ಶನಿವಾರ, ಫೆಬ್ರವರಿ 29, 2020
19 °C
ಪಿಡಬ್ಲ್ಯುಸಿ ಸಮೀಕ್ಷೆಯಲ್ಲಿ ಸಿಇಒಗಳ ಅಭಿಮತ

ಅತ್ಯುತ್ತಮ ಮಾರುಕಟ್ಟೆ: ಭಾರತಕ್ಕೆ 4ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವೋಸ್‌: ಬಹುರಾಷ್ಟ್ರೀಯ ಕಂಪನಿಗಳ ವಹಿವಾಟು ಹೆಚ್ಚಳ ಮತ್ತು ಮಾರುಕಟ್ಟೆ ವಿಸ್ತರಣೆ ವಿಷಯದಲ್ಲಿ ಭಾರತ 4ನೇ ಅತ್ಯುತ್ತಮ ಮಾರುಕಟ್ಟೆಯಾಗಿ ವಿಶ್ವದ ಗಮನ ಸೆಳೆಯುತ್ತಿದೆ.

ವಿಶ್ವದಾದ್ಯಂತ ಆರ್ಥಿಕ ಬೆಳವಣಿಗೆ ದರವು ಮಂದಗತಿಯಲ್ಲಿ ಇದ್ದರೂ, ಜಾಗತಿಕ ಕಂಪನಿಗಳ ವಹಿವಾಟು ಹೆಚ್ಚಳಕ್ಕೆ ಭಾರತವು ನಾಲ್ಕನೇ ಅತ್ಯುತ್ತಮ ಮಾರುಕಟ್ಟೆಯಾಗಿದೆ. ಅಮೆರಿಕ, ಚೀನಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇರುವುದು ಜಾಗತಿಕ ಕಂಪನಿಗಳ ಮುಖ್ಯಸ್ಥರ (ಸಿಇಒ) ಸಮೀಕ್ಷೆಯಲ್ಲಿ ಕಂಡುಬಂದಿದೆ.

ಇನ್ನೊಂದೆಡೆ ಭಾರತದ ಸಿಇಒಗಳು ತಮ್ಮ ಕಂಪನಿಗಳ ವರಮಾನ ಹೆಚ್ಚಳ ವಿಶ್ವಾಸದ ವಿಷಯದಲ್ಲಿ ಚೀನಾ ನಂತರದ ಎರಡನೇ ಸ್ಥಾನವನ್ನು ಭಾರತಕ್ಕೆ ನೀಡಿದ್ದಾರೆ. ಚೀನಾದಲ್ಲಿನ ವರಮಾನಕ್ಕೆ ಸಂಬಂಧಿಸಿದಂತೆ ಶೇ 45ರಷ್ಟು ಮತ್ತು ಭಾರತದ ಬಗ್ಗೆ ಶೇ 40ರಷ್ಟು ವಿಶ್ವಾಸ ತಳೆದಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) 50ನೇ ಶೃಂಗಸಭೆಯಲ್ಲಿ ಈ ಸಮೀಕ್ಷೆಯನ್ನು ಪ್ರಕಟಿಸಲಾಗಿದೆ.

2020ನೇ ವರ್ಷದ ಬಗ್ಗೆ ಬಹುರಾಷ್ಟ್ರೀಯ ಕಂಪನಿಗಳ ಬಹುತೇಕ ಸಿಇಒಗಳು ಹೆಚ್ಚಿನ ಆಶಾವಾದ ತಳೆದಿಲ್ಲ. ಮುಂದಿನ 12 ತಿಂಗಳಲ್ಲಿ ತಮ್ಮ ಕಂಪನಿಯ ವಹಿವಾಟು ಉತ್ತಮ ಪ್ರಗತಿ ಸಾಧಿಸುವ ಬಗ್ಗೆ ಕೇವಲ ಶೇ 27ರಷ್ಟು ಸಿಇಒಗಳು ಮಾತ್ರ ದೃಢ ವಿಶ್ವಾಸ ತಳೆದಿದ್ದಾರೆ. ಹಿಂದಿನ ವರ್ಷ ಈ ವಿಶ್ವಾಸದ ಮಟ್ಟ ಶೇ 35ರಷ್ಟಿತ್ತು.

ವಿಶ್ವದಾದ್ಯಂತ ವಹಿವಾಟು ವೃದ್ಧಿ ಕುರಿತ ವಿಶ್ವಾಸದ ಮಟ್ಟವೂ ಕುಸಿತ ಕಂಡಿದೆ. ಇದು ದೇಶದಿಂದ ದೇಶಕ್ಕೆ ವ್ಯತ್ಯಾಸಗೊಂಡಿದೆ. ಪ್ರಮುಖ ಆರ್ಥಿಕತೆಗಳ ಪೈಕಿ ಚೀನಾ ಮತ್ತು ಭಾರತ ಮೊದಲ ಎರಡು ಸ್ಥಾನಗಳಲ್ಲಿ ಇವೆ.

ಸಾಮ್ಯತೆ: ಕಂಪನಿಗಳ ವಾರ್ಷಿಕ ವರಮಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಿಇಒಗಳ ಮುನ್ನೋಟ ಮತ್ತು ಜಾಗತಿಕ ಆರ್ಥಿಕತೆಯ ವಾಸ್ತವಿಕ ಪ್ರಗತಿ ಮಧ್ಯೆ ಹೆಚ್ಚಿನ ಸಾಮ್ಯತೆ ಇರುವುದು 2008ರಿಂದ ದೃಢಪಡುತ್ತಿದೆ ಎಂದು ಸಮೀಕ್ಷೆ ನಡೆಸಿರುವ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್‌ (ಪಿಡಬ್ಲ್ಯುಸಿ) ತಿಳಿಸಿದೆ.

ಪ್ರಸಕ್ತ ವರ್ಷ ಜಾಗತಿಕ ಆರ್ಥಿಕ ವೃದ್ಧಿ ದರವು (ಜಿಡಿಪಿ) ಕಡಿಮೆ ಮಟ್ಟದಲ್ಲಿ (ಶೇ 2.4ರಷ್ಟು) ಇರುವುದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧಕ್ಕೂ ಹೆಚ್ಚು ಸಿಇಒಗಳು (ಶೇ 53) ದೃಢಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು