ನವದೆಹಲಿ: ಭಾರತದಲ್ಲಿ ಕಾರುಗಳ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳೆಯುವ ‘ಭಾರತ್ ಎನ್‌ಸಿಎಪಿ’ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಚಾಲನೆ ನೀಡಿದರು. 3.5 ಟನ್‌ವರೆಗಿನ ತೂಕದ ವಾಹನಗಳು ಸುರಕ್ಷತೆಯ ದೃಷ್ಟಿಯಿಂದ ಎಷ್ಟು ದಕ್ಷವಾಗಿವೆ ಎಂಬುದನ್ನು ತೀರ್ಮಾನಿಸುವುದಕ್ಕೆ ಇದು ನೆರವಾಗುತ್ತದೆ.
ಭಾರತ್ ಎನ್‌ಸಿಎಪಿ ಅಡಿಯಲ್ಲಿ ಕಾರುಗಳ ಸುರಕ್ಷತಾ ವೈಶಿಷ್ಟ್ಯಗಳನ್ನು ಪರೀಕ್ಷೆಗೆ ಒಳಪಡಿಸುವುದು ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಪರೀಕ್ಷೆಗಳಿಗಿಂತ ಕಡಿಮೆ ವೆಚ್ಚದ್ದು ಎಂದು ಗಡ್ಕರಿ ಹೇಳಿದ್ದಾರೆ. ಈ ಯೋಜನೆಯ ಅಡಿಯಲ್ಲಿ ನೀಡುವ ಶ್ರೇಯಾಂಕವು ಗ್ರಾಹಕರಿಗೆ ವಾಹನ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತೀರ್ಮಾನಿಸಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಭಾರತ್ ಎನ್‌ಸಿಎಪಿ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
‘ಸುರಕ್ಷತೆಗೆ ವಿದೇಶಗಳಲ್ಲಿ ಶ್ರೇಯಾಂಕ ಪಡೆದುಕೊಳ್ಳುವುದಕ್ಕೆ ₹2.5 ಕೋಟಿ ವೆಚ್ಚವಾದರೆ, ಭಾರತದಲ್ಲಿ ಅದಕ್ಕೆ ₹60 ಲಕ್ಷ ಮಾತ್ರ ವೆಚ್ಚವಾಗುತ್ತದೆ’ ಎಂದು ಗಡ್ಕರಿ ಹೇಳಿದ್ದಾರೆ.
ಈ ಯೋಜನೆಯ ಅಡಿಯಲ್ಲಿ ಕಾರು ತಯಾರಿಕಾ ಕಂಪನಿಗಳು, ತಮ್ಮ ವಾಹನ ಮಾದರಿಗಳನ್ನು ಪರೀಕ್ಷೆಗೆ ನೀಡಬಹುದು. ಹೀಗೆ ವಾಹನ ನೀಡುವುದು ಕಡ್ಡಾವಲ್ಲ, ಇದು ಐಚ್ಛಿಕವಾಗಿರುತ್ತದೆ. ವಾಹನವು ವಯಸ್ಕರಿಗೆ ಹಾಗೂ ಮಕ್ಕಳಿಗೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಸೊನ್ನೆಯಿಂದ ಐದರವರೆಗಿನ ಶ್ರೇಯಾಂಕದ ಮೂಲಕ ತಿಳಿಸಲಾಗುತ್ತದೆ.
ಆಟೊಮೊಬೈಲ್ ತಯಾರಿಕೆಯಲ್ಲಿ ಭಾರತವು ಈಗ ಮೂರನೆಯ ಸ್ಥಾನದಲ್ಲಿದೆ (ಮೊದಲ ಸ್ಥಾನದಲ್ಲಿ ಚೀನಾ, ಎರಡನೆಯ ಸ್ಥಾನದಲ್ಲಿ ಅಮೆರಿಕಾ ಇದೆ) ಎಂದು ಗಡ್ಕರಿ ಹೇಳಿದ್ದಾರೆ. ಭಾರತ್ ಎನ್‌ಸಿಎಪಿ ಹಾಗೂ ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ತಿಳಿಸಿದ್ದಾರೆ.
ಭಾರತ್ ಎನ್‌ಸಿಎಪಿ ಯೋಜನೆಯನ್ನು ಆಟೊಮೊಬೈಲ್ ಉದ್ಯಮ ಸ್ವಾಗತಿಸಿದೆ. ಮೊದಲ ಹಂತದಲ್ಲಿ ಮೂರು ಮಾದರಿಗಳನ್ನು ಪರೀಕ್ಷೆಗೆ ಒದಗಿಸಲಾಗುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಹೇಳಿದೆ.
ಈ ಯೋಜನೆಯು ಸುರಕ್ಷತಾ ಗುಣಮಟ್ಟವನ್ನು ಹೆಚ್ಚಿಸಲಿದೆ ಎದಂದು ಹುಂಡೈ ಮೋಟರ್ ಇಂಡಿಯಾ ಲಿ. ಹೇಳಿದೆ. ‘ಗ್ರಾಹಕರು ಅಗತ್ಯ ಮಾಹಿತಿಯನ್ನು ಹೊಂದಿ, ಖರೀದಿ ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಈ ಯೋಜನೆಯು ದೊಡ್ಡ ಕೊಡುಗೆ ನೀಡಲಿದೆ’ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಸಂಘ (ಎಸ್‌ಐಎಎಂ) ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.