ಮಂಗಳವಾರ, ಜನವರಿ 21, 2020
19 °C
ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಸಲಹೆ

ಆರ್ಥಿಕ ಶಿಸ್ತು, ದಿಟ್ಟ ಸುಧಾರಣಾ ಕ್ರಮ ಅಗತ್ಯ: ಗೀತಾ ಗೋಪಿನಾಥ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತವು ತನ್ನ ವಿತ್ತೀಯ ಕೊರತೆ ಗುರಿ ಕಾಯ್ದುಕೊಳ್ಳಬೇಕಾಗಿದ್ದು, ಆ ಉದ್ದೇಶ ಸಾಧನೆಗೆ ವೆಚ್ಚದಲ್ಲಿ ದಕ್ಷತೆ ಮತ್ತು ವರಮಾನ ಸಂಗ್ರಹದಲ್ಲಿ ಹೆಚ್ಚಳ ಸಾಧಿಸಬೇಕಾಗಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್‌ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) 92ನೇ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ‘ಇತ್ತೀಚಿನ ಕೆಲ ತ್ರೈಮಾಸಿಕಗಳಲ್ಲಿ ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆ ಮತ್ತು ಸರಕು – ಸೇವೆಗಳ ಬೇಡಿಕೆಯು ಗಮನಾರ್ಹವಾಗಿ ಕುಸಿದಿದೆ. ಹೂಡಿಕೆ ಕುಸಿತವು ದೀರ್ಘ ಸಮಯದವರೆಗೆ ಮುಂದುವರೆದರೆ ಅದು  ಆರ್ಥಿಕ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಹೇಳಿದ್ದಾರೆ.

‘ವಿತ್ತೀಯ ಕೊರತೆ ವಿಷಯದಲ್ಲಿ ಸ್ಥಿರತೆ ಮತ್ತು ವರಮಾನ ವೃದ್ಧಿ ಗುರಿ ಕಾಯ್ದುಕೊಳ್ಳುವುದು ತುಂಬ ಮಹತ್ವದ ಸಂಗತಿಯಾಗಿದೆ. ಇದನ್ನು ಸಾಧಿಸಲು ವರಮಾನ ಸಂಗ್ರಹದಲ್ಲಿ ಹೆಚ್ಚಳ ಮತ್ತು ವೆಚ್ಚದಲ್ಲಿ ದಕ್ಷತೆ ಸಾಧಿಸಬೇಕಾಗುತ್ತದೆ.

‘ವರಮಾನ ವೃದ್ಧಿ ಬಗ್ಗೆ ನಾವು ಮಾತನಾಡುವಾಗ ಮಧ್ಯಂತರ ಅವಧಿಯ ಗುರಿ ನಿಗದಿಪಡಿಸಬೇಕು. ರಾತ್ರಿ ಬೆಳಗಾಗುವುದರೊಳಗೆ ಅದನ್ನು ಸಾಧಿಸುವುದು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟಾರೆ ವಿತ್ತೀಯ ಕೊರತೆಯು ‘ಜ–20’ ದೇಶಗಳ ಪೈಕಿ ಗರಿಷ್ಠ ಮಟ್ಟದಲ್ಲಿ ಇದೆ. ಹೀಗಾಗಿ ಇದನ್ನು ತುಂಬ ಜಾಗರೂಕತೆಯಿಂದ ನಿಭಾಯಿಸಬೇಕು.

‘ಹೊಸ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವಾಗ ಅವುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮತ್ತು ಖಚಿತತೆ ಇರಬೇಕು. ಈ ಮಾತು ಜಿಎಸ್‌ಟಿಗೂ ಅನ್ವಯಿಸುತ್ತದೆ. ಭಾರತದ ರಫ್ತು ವಹಿವಾಟು ಹೆಚ್ಚಿಸಲು ಮತ್ತು ತಯಾರಿಕಾ ವಲಯಕ್ಕೆ ಉತ್ತೇಜನ ನೀಡುವಂತಹ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ.

ತೆರಿಗೆ ವರಮಾನ ಸಂಗ್ರಹ ನಿಧಾನಗೊಂಡಿರುವುದರಿಂದ ವಿತ್ತೀಯ ಕೊರತೆ ಗುರಿಯನ್ನು ‘ಜಿಡಿಪಿ’ಯ ಶೇ 4ಕ್ಕೆ ಸಡಿಲಿಸಬೇಕು ಎಂದು ಕೆಲ ರಾಜ್ಯ ಸರ್ಕಾರಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಿವೆ.

ಕೇಂದ್ರ ಸರ್ಕಾರವು ಭಾರಿ ರಾಜಕೀಯ ಜನಾದೇಶ ಹೊಂದಿರುವಾಗ ದಿಟ್ಟತನದಿಂದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಇದು ಸಕಾಲ
-ಗೀತಾ ಗೋಪಿನಾಥ್ ಐಎಂಎಫ್‌ ಮುಖ್ಯ ಆರ್ಥಿಕ ತಜ್ಞೆ

ನಾವು ಆರ್ಥಿಕ ಪ್ರಗತಿ ಸಾಧಿಸಬಹುದೇ, ಭಾರತದಿಂದ ಇದು ಸಾಧ್ಯವಾಗುವುದೇ ಎನ್ನುವ ಸ್ವಯಂ ಅನುಮಾನ ಪ್ರವೃತ್ತಿಯಿಂದ ಉದ್ಯಮಿಗಳು ಹೊರ ಬರಬೇಕು
-ನಿರ್ಮಲಾ ಸೀತಾರಾಮನ್‌, ಸಚಿವೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು