ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1ರಷ್ಟು ಸಿರಿವಂತರಲ್ಲಿ ದೇಶದ ಸಂಪತ್ತಿನ ಕೇಂದ್ರೀಕರಣ

Published 21 ಮಾರ್ಚ್ 2024, 0:28 IST
Last Updated 21 ಮಾರ್ಚ್ 2024, 0:28 IST
ಅಕ್ಷರ ಗಾತ್ರ
ನವದೆಹಲಿ: ಪ್ರಸ್ತುತ ಭಾರತದಲ್ಲಿ ಸಂಪತ್ತಿನ ಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್‌ ವಸಾಹತುಶಾಹಿ ಕಾಲಕ್ಕಿಂತಲೂ ಅಸಮಾನತೆಯ ಪ್ರಮಾಣ ಹೆಚ್ಚಿದೆ ಎಂದು ಪ್ಯಾರಿಸ್‌ ಮೂಲದ ವಿಶ್ವ ಅಸಮಾನತೆ ಲ್ಯಾಬ್‌ನ ವರದಿ ಹೇಳಿದೆ.

2022–23ನೇ ಸಾಲಿನಡಿ ದೇಶದ ಶೇ 40.1ರಷ್ಟು ಸಂಪತ್ತಿನ ಒಡೆತನವು ಶೇ 1ರಷ್ಟು ಇರುವ ಸಿರಿವಂತರ ಹಿಡಿತದಲ್ಲಿದೆ. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಈ ಸಿರಿವಂತರ ಪ್ರಮಾಣ ಶೇ 15ಕ್ಕಿಂತಲೂ ಕಡಿಮೆ ಇತ್ತು. 2022–23ನೇ ಸಾಲಿನಡಿ ಶೇ 1ರಷ್ಟು ಸಿರಿವಂತರ ಆದಾಯವು ಶೇ 22.6ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದೆ.

ದೇಶದಲ್ಲಿ ಸ್ವಾತಂತ್ರ್ಯ ನಂತರದಿಂದ 1980ರ ವರೆಗೆ ಅಸಮಾನತೆ ಪ್ರಮಾಣ ತಗ್ಗಿತ್ತು. ಆ ನಂತರದ ವರ್ಷದಿಂದ 2000ರ ವರೆಗೆ ಗಗನಕ್ಕೇರಿದೆ ಎಂದು ‘1922ರಿಂದ 2023ರ ವರೆಗೆ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ’ ಶೀರ್ಷಿಕೆಯಡಿ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.  

2014–15ರಿಂದ 2022–23ರ ನಡುವೆ ಅಸಮಾನತೆ ಪ್ರಮಾಣ ಅತಿಹೆಚ್ಚಿದೆ. 2022–23ರಲ್ಲಿ ಶೇ 1ರಷ್ಟು ಸಿರಿವಂತರ ಆದಾಯ ಮತ್ತು ಸಂಪತ್ತಿನ ಪಾಲಿನ ಏರಿಕೆಯು ಚಾರಿತ್ರಿಕ ಮಟ್ಟಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಹಾಗೂ ಅಮೆರಿಕಕ್ಕೆ ಹೋಲಿಸಿದರೆ ಭಾರತೀಯ ಸಿರಿವಂತರ ಆದಾಯದ ಪಾಲು ದುಪ್ಪಟ್ಟಾಗಿದೆ ಎಂದು ವಿವರಿಸಿದೆ.

ಸಂಪತ್ತಿನ ಅಸಮಾನತೆ ವಿಷಯದಲ್ಲಿ ಭಾರತವು ಪೆರು, ಯೆಮೆನ್ ಹಾಗೂ ಇತರೆ ಕೆಲವು ಸಣ್ಣ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಭಾರತದ ತೆರಿಗೆ ವ್ಯವಸ್ಥೆಯನ್ನು ನಿವ್ವಳ ಸಂಪತ್ತಿನ ಮಸೂರದಿಂದ ನೋಡಿದಾಗ ಹಿಂಜರಿತವಾಗಿರುವ ಪುರಾವೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದೆ.

‘ಭಾರತದಲ್ಲಿರುವ ಆಧುನಿಕ ಮಧ್ಯಮ ವರ್ಗವು ಬ್ರಿಟಿಷ್‌ ಕಾಲಘಟ್ಟಕ್ಕಿಂತಲೂ ಹೆಚ್ಚಿನ ಅಸಮಾನತೆಗೆ ತುತ್ತಾಗಿದ್ದು, ಬಿಲಿಯನೇರ್‌ ರಾಜ್‌ ವ್ಯವಸ್ಥೆಯಡಿ ಸಿಲುಕಿದೆ’ ಎಂದು ಅರ್ಥಶಾಸ್ತ್ರಜ್ಞ ನಿತಿನ್ ಕುಮಾರ್ ಭಾರತಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT