ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ನಂತರ ಮನೆಯಲ್ಲಿ ನಗದು ಇಟ್ಟುಕೊಳ್ಳುವ ಪ್ರಮಾಣ ಹೆಚ್ಚಳ

ನಗದು ನಿರ್ವಹಣಾ ಕಂಪನಿ ಸಿಎಂಎಸ್ ಇನ್ಫೊ ಸಿಸ್ಟಂಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಕೌಲ್
Last Updated 30 ಅಕ್ಟೋಬರ್ 2018, 9:31 IST
ಅಕ್ಷರ ಗಾತ್ರ

ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟು ರದ್ದತಿ ನಂತರ ಜನರು ಮನೆಯಲ್ಲಿ ಇಟ್ಟುಕೊಳ್ಳುವ ನಗದಿನ ಪ್ರಮಾಣ ಹೆಚ್ಚಾಗಿದೆ ಎಂದುನಗದು ನಿರ್ವಹಣಾ ಕಂಪನಿ ಸಿಎಂಎಸ್ ಇನ್ಫೊ ಸಿಸ್ಟಂಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಕೌಲ್ ಮಾಹಿತಿ ನೀಡಿದ್ದಾರೆ.

ಲೈವ್‌ ಮಿಂಟ್ ಸುದ್ದಿ ತಾಣಕ್ಕೆ ಸಂದರ್ಶನ ನೀಡಿರುವ ಕೌಲ್, ನೋಟು ರದ್ದತಿಯ ನಂತರ ದೇಶದ ನಗದು ಹರಿವು ಮತ್ತು ಡಿಜಿಟಲ್ ವಹಿವಾಟಿನಲ್ಲಿ ಆದ ಬೆಳವಣಿಗೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದಾರೆ. ಸಿಎಂಎಸ್ ಇನ್ಫೊ ಸಿಸ್ಟಂಸ್‌ ಕಂಪನಿಯು 57,000ಕ್ಕೂ ಹೆಚ್ಚು ಎಟಿಎಂಗಳ ನಿರ್ವಹಣೆ ಜವಾಬ್ದಾರಿ ವಹಿಸಿರುವುದಲ್ಲದೆ, 34,000ಕ್ಕೂ ಹೆಚ್ಚು ನಗದು ನಿರ್ವಹಣಾ ಕೇಂದ್ರಗಳನ್ನು ಹೊಂದಿದೆ.

ಎಟಿಂಎ ಬಗ್ಗೆ ಕಡಿಮೆಯಾದ ನಂಬಿಕೆ, ಹೆಚ್ಚಿತು ನಗದು ವಹಿವಾಟು

ನೋಟು ರದ್ದತಿಯಿಂದ ಒಳಿತು, ಕೆಡುಕು ಎರಡೂ ಆಗಿವೆ. ಈಕ್ವಿಟಿ ಮಾರುಕಟ್ಟೆಯಲ್ಲಿನ ಹರಿವು ಹೆಚ್ಚಳ ದೀರ್ಘಾವಧಿಯಲ್ಲಿ ಉಳಿತಾಯದ ಹೆಚ್ಚಳಕ್ಕೆ ನೆರವಾಗಲಿದೆ. ದೇಶದ ನಗದು ವಿತರಣೆ ವ್ಯವಸ್ಥೆಯ ದೌರ್ಬಲ್ಯವನ್ನು ತಿಳಿದುಕೊಳ್ಳಲೂ ನೋಟು ರದ್ದತಿ ನೆರವಾಗಿದೆ. ದುರದೃಷ್ಟವಶಾತ್, ನೋಟು ರದ್ದತಿ ನಂತರ ಎಟಿಎಂಗಳಲ್ಲಿ ನಗದು ಲಭ್ಯತೆ ಕಡಿಮೆಯಾಯಿತು. ಎಟಿಎಂಗಳಲ್ಲಿ ನಗದು ಸಿಗುವ ನಂಬಿಕೆ ಕಡಿಮೆಯಾಗಿ ಜನ ಹೆಚ್ಚು ಹಣ ವಿತ್‌ಡ್ರಾ ಮಾಡಿಕೊಳ್ಳಲು ಆರಂಭಿಸಿದರು. ವಿತ್‌ಡ್ರಾ ಮಾಡುವ ಪ್ರಮಾಣ ಶೇ 18ರಿಂದ 20ರಷ್ಟು ಹೆಚ್ಚಾಯಿತು. ನೋಟು ರದ್ದತಿಗಿಂತಲೂ ಮೊದಲು ಜನ ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳುತ್ತಿದ್ದರೋ ನಂತರ ಅದಕ್ಕಿಂತಲೂ ಹೆಚ್ಚು ನಗದನ್ನು ಇಟ್ಟುಕೊಳ್ಳಲಾರಂಭಿಸಿದರು.

ದೇಶದ ಆರ್ಥಿಕ ಬೆಳವಣಿಗೆಯಲ್ಲಿಯೂ ನಗದು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಟಿಎಂಗಳಿಂದ ನಗದು ವಿತ್‌ಡ್ರಾ ಮಾಡುವ ಪ್ರಮಾಣ ಶೇ 22ರಷ್ಟು ಹೆಚ್ಚಾಗಿದ್ದು, 2018ರ ಏಪ್ರಿಲ್‌ನಲ್ಲಿ ₹2.65 ಲಕ್ಷ ಕೋಟಿ ವಿತ್‌ಡ್ರಾ ಮಾಡಲಾಗಿದೆ. ನಮ್ಮ ವಿಶ್ಲೇಷಕರ ಪ್ರಕಾರ, ಬ್ಯಾಂಕ್‌ನ ಶಾಖೆಯೊಂದರಲ್ಲಿ ನಗದು ವಹಿವಾಟು ನಡೆಸುವುದಕ್ಕೆ ಅಂದಾಜು ₹40ರಿಂದ 50ರ ವರೆಗೆ ವೆಚ್ಚವಾದರೆ ಎಟಿಎಂ ವಹಿವಾಟಿಗೆ ₹12ರಿಂದ 15 ಸಾಕು ಎಂದುರಾಜೀವ್ ಕೌಲ್ ಮಾಹಿತಿ ನೀಡಿದ್ದಾರೆ.

ಎಟಿಂಎಗಳ ಅನಿವಾರ್ಯತೆ...

ಗ್ರಾಮೀಣ ಮತ್ತು ಅರೆ–ನಗರ ಪ್ರದೇಶಗಳಲ್ಲಿ ಬಹುತೇಕರಿಗೆ ಮೊದಲ ಡಿಜಿಟಲ್ ಅನುಭವ ನೀಡುವುದೇ ಎಟಿಎಂಗಳು. ಜತೆಗೆ, ದೇಶದ ಹಣಕಾಸು ಹರಿವಿನಲ್ಲಿ ಎಟಿಎಂಗಳು ಪ್ರಮುಖ ಪಾತ್ರ ವಹಿಸುತ್ತಿವೆ. 2016–17ರಲ್ಲಿ ಎಟಿಎಂಗಳ ಮಾರಾಟಕ್ಕೆ ಹೋಲಿಸಿದರೆ ಈಗ ಕಡಿಮೆಯಾಗಿದೆ. ನಾಗರಿಕರ ಸಮಯ ಉಳಿತಾಯದ ದೃಷ್ಟಿಯಿಂದ ಮತ್ತು ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರಿವ ಸಲುವಾಗಿ ಗ್ರಾಮೀಣ ಮತ್ತು ಅರೆ–ನಗರ ಪ್ರದೇಶಗಳಲ್ಲಿ ಎಟಿಎಂಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಕೌಲ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ನಗದು ಬಳಕೆ ಹೆಚ್ಚೇ?

ಜಪಾನ್‌ನಲ್ಲಿಜಿಡಿಪಿಗೆ (ಒಟ್ಟು ದೇಶೀಯ ಉತ್ಪನ್ನ) ಶೇ 18ರಷ್ಟು ನಗದು ವಹಿವಾಟು ನಡೆಯುತ್ತಿದ್ದರೆ ಭಾರತದಲ್ಲಿ ಶೇ 12ರಷ್ಟಿದೆ. ಜರ್ಮನಿಯಲ್ಲಿ ಶೇ 75ರಿಂದ 80ರಷ್ಟು ಚಿಲ್ಲರೆ ನಗದು ವಹಿವಾಟು ನಡೆಯುತ್ತಿದ್ದರೆ, ಭಾರತದಲ್ಲಿ ಶೇ 85ರಿಂದ 90ರಷ್ಟು ನಡೆಯುತ್ತಿದೆ. ಅಭಿವೃದ್ಧಿಹೊಂದಿದ ಆರ್ಥಿಕತೆಗಳಲ್ಲಿ ನಗದಿನ ಪ್ರಮಾಣ ಹೆಚ್ಚಿದೆ. ಅಮೆರಿಕದಲ್ಲಿ ಕಳೆದ 5 ವರ್ಷಗಳಲ್ಲಿ ನಗದಿನ ಪ್ರಮಾಣ ಶೇ 7ರಷ್ಟು ಹೆಚ್ಚಿದೆ (ಭಾರತದಲ್ಲಿ ನೋಟು ರದ್ದತಿಗೂ ಮುನ್ನ ಶೇ 11–12 ಹೆಚ್ಚಾಗಿತ್ತು). ಹೀಗಾಗಿ ವ್ಯವಹಾರಕ್ಕೆ ನಗದನ್ನು ಆದ್ಯತೆಯ ಮಾಧ್ಯಮವನ್ನಾಗಿ ಪರಿಗಣಿಸಬೇಕಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿರುವಂತೆ ಡಿಜಿಟಲ್ ಮತ್ತು ನಗದು ವ್ಯವಸ್ಥೆ ಎರಡೂ ಅಸ್ತಿತ್ವದಲ್ಲಿದ್ದರೆ ಉತ್ತಮ ಎಂದು ಅವರು ಹೇಳಿದ್ದಾರೆ.

ನಗದು–ಡಿಜಿಟಲ್, ಎರಡೂ ವ್ಯವಹಾಗಳಲ್ಲಿದೆ ಪ್ರಯೋಜನ ಮತ್ತು ಲೋಪ

ನಗದು ಮತ್ತು ಡಿಜಿಟಲ್, ಈ ಎರಡೂ ಮಾದರಿಯ ವಹಿವಾಟಿನಲ್ಲಿಯೂ ಪ್ರಯೋಜನ ಹಾಗೂ ಲೋಪಗಳಿವೆ. ನಗದಿನ ನಿರ್ವಹಣೆಗೆ ಹೆಚ್ಚು ಸಮಯ ಬೇಕು. ಮತ್ತೊಂದೆಡೆ, ಕ್ರೆಡಿಟ್‌ ಕಾರ್ಡ್‌ ವಹಿವಾಟಿನ ವೆಚ್ಚದ ಪ್ರಮಾಣ ಶೇ 1.5ರಿಂದ 2ರಷ್ಟಿದ್ದರೆ ನಗದು ವಹಿವಾಟಿಗೆ ತಗಲುವ ವೆಚ್ಚದ ಪ್ರಮಾಣ ಶೇ 0.25ರಷ್ಟಿದೆ. ಹೆಚ್ಚಿದ ವಹಿವಾಟು ವೆಚ್ಚ, ಆನ್‌ಲೈನ್ ಅಕ್ರಮಗಳು ಡಿಜಿಟಲ್ ಪಾವತಿ ಎದುರಿಸುತ್ತಿರುವ ಸಮಸ್ಯೆಗಳು ಎಂದುಕೌಲ್ ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ ಅಕ್ರಮಗಳು, ದತ್ತಾಂಶ ಕಳವು ಮತ್ತಿತರ ಸಮಸ್ಯೆಗಳು ಡಿಜಿಟಲ್ ಪಾವತಿ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸಿವೆ. ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇ–ಕಾಮರ್ಸ್‌ ಅಕ್ರಮಗಳಾಗುತ್ತಿವೆ. ಹೀಗಾಗಿ ‘ಕ್ಯಾಶ್ ಆನ್ ಡೆಲಿವರಿ’ ಆಯ್ಕೆ ಬಳಸುವವರೇ ಹೆಚ್ಚಾಗಿದ್ದಾರೆ. ನೆಟ್‌ವರ್ಕ್ ಸಮಸ್ಯೆ, ಡಿಜಿಟಲ್ ವಹಿವಾಟಿಗೆ ಹೆಚ್ಚು ವೆಚ್ಚ ತಗಲುವುದು ಮತ್ತಿತರ ಕಾರಣಗಳು ಜನರನ್ನು ಡಿಜಿಟಲ್ ಪಾವತಿಯಿಂದ ದೂರವುಳಿಯುವಂತೆ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಗದಿಗೇ ಬೇಡಿಕೆ ಹೆಚ್ಚು

ಸೇವಾ ವೆಚ್ಚ ಕಡಿತಗೊಳಿಸುವ ಸಲುವಾಗಿ ಬ್ಯಾಂಕ್‌ಗಳು ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುತ್ತಿವೆ. ಆದರೆ, ಡಿಜಿಟಲ್ ವಹಿವಾಟು ಮಾತ್ರವೇ ಹಣಕಾಸು ಹರಿವಿಗೆ ಇರುವ ತೊಡಕುಗಳನ್ನು ನಿವಾರಿಸಲಾರದು ಎಂಬುದನ್ನು ಗಮನಿಸಬೇಕಾದ ಅಂಶ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ನಗದನ್ನೇ ಅವಲಂಬಿಸಿದ್ದಾರೆ. ಕಡಿಮೆ ಆದಾಯವಿರುವ ಅನೇಕ ಕುಟುಂಬಗಳು ಇನ್ನೂ ಬ್ಯಾಂಕಿಂಗ್ ವ್ಯವಸ್ಥೆಗೇ ಬಂದಿಲ್ಲ. ಸುಮಾರು 20 ಕೋಟಿ ಜನ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಜನ ಧನಯೋಜನೆಯಡಿ ಅನೇಕರು ಬ್ಯಾಂಕ್ ಖಾತೆ ತೆರೆದಿದ್ದರೂ ಅವರೆಲ್ಲ ಸಕ್ರಿಯರಾಗಿಲ್ಲಎಂದು ಕೌಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT