ಬುಧವಾರ, ಜುಲೈ 15, 2020
22 °C

ಆರ್ಥಿಕ ಬಿಕ್ಕಟ್ಟು ಸುಧಾರಿಸಲು ವಾರಕ್ಕೆ 60 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

narayana murthy

ನವದೆಹಲಿ: ಲಾಕ್‍ಡೌನ್ ಮುಂದುವರಿದರೆ ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವಿಗೀಡಾಗುವುದಕ್ಕಿಂತ ಹೆಚ್ಚು ಮಂದಿ ಹಸಿವಿನಿಂದ ಸಾಯುತ್ತಾರೆ ಎಂದು ಇನ್ಫೋಸಿಸ್ ಸಂಸ್ಥಾಪಕ  ಎನ್.ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ. ಇಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದು, ಕೊರೊನಾವೈರಸ್‌ನ್ನು ದೇಶ ಸಹಜವಾಗಿ ಕಾಣಬೇಕು.ಸೋಂಕು ತಗಲುವುದಕ್ಕೆ ಸಾಧ್ಯತೆ ಇರುವವರಿಗೆ ರಕ್ಷಣೆ ನೀಡಿ ಜನರು ಕೆಲಸಕ್ಕೆ ಮರಳಬೇಕಿದೆ ಎಂದಿದ್ದಾರೆ.

ಡೇಟಾ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ. ನಾವು ಅಭಿಪ್ರಾಯಗಳನ್ನೇ ಅವಲಂಬಿಸಿಕೊಂಡಿರಬಾರದು ಎಂದಿದ್ದಾರೆ  ಮೂರ್ತಿ. ಭಾರತದಲ್ಲಿರುವ ಕೋವಿಡ್-19 ಯಾವ ರೀತಿ ಭಿನ್ನ ಎಂಬುದರ ಬಗ್ಗೆ ಮಾಹಿತಿ, ಅಧ್ಯಯನ ನಡೆದಿದೆ. ಭಾವುಕತೆಯನ್ನು ಬದಿಗಿರಿಸಿ ಇದನ್ನು ಯಾವ ರೀತಿ ಎದುರಿಸಬಹುದ ಎಂದು ನೋಡಬೇಕು. ಕೊರೊನಾವೈರಸ್ ಡೇಟಾಯುಕ್ತ ಸಮಸ್ಯೆಯಾಗಿದ್ದು, ದೇಶದ ಜನರ ಆರೋಗ್ಯ ಮತ್ತು  ಆರ್ಥಿಕತೆಗೆ ಹೊಡೆತ ಬೀಳದಂತೆ ಪರಿಹರಿಸಿಕೊಳ್ಳಬಹುದು.

ಕಾರ್ಪರೇಟ್ ಮತ್ತು ವ್ಯವಹಾರಗಳು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕಾರ್ಯವೆಸಗಲು ಸರ್ಕಾರ ಅನುಮತಿ ನೀಡಬೇಕು. ಕೆಲಸದ ವೇಳೆ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಹೆಚ್ಚಿನ ಪಾಳಿಗಳಲ್ಲಿ ಕೆಲಸ ಮಾಡಬೇಕು. ಯಾಕೆಂದರೆ ಮುಂದಿನ 12-18 ತಿಂಗಳುಗಳ ವರೆಗೆ  ಕೊರೊನಾವೈರಸ್ ದಿನನಿತ್ಯದ ಜೀವನದಲ್ಲಿ ಇರಲಿದೆ.

ದೇಶದಲ್ಲಿರುವ  ಪರೀಕ್ಷಾ ಸಾಮರ್ಥ್ಯದ ಬಗ್ಗೆ ಮಾತನಾಡಿದ ಮೂರ್ತಿ, ಭಾರತದಲ್ಲಿ ಪ್ರತಿದಿನ 1 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದರೂ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಲು 37 ವರ್ಷಗಳೇ ಬೇಕಾಗುತ್ತದೆ. ಸದ್ಯ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಮುಂಬರುವ ದಿನಗಳಲ್ಲಿ ಔಷಧಿ ಕಂಡು ಹಿಡಿದರ ಅದು ಭಾರತೀಯರ ಜೀನ್ (ವಂಶವಾಹಿ) ಮೇಲೆ ಅದು ಪರಿಣಾಮಕಾರಿಯಾಗಲಿದೆಯೇ ಎಂಬುದು ನಮಗೆ ಗೊತ್ತಲ್ಲ.

ಭಾರತೀಯರು ಮತ್ತಷ್ಟು ಶ್ರಮದಿಂದ  ಹೆಚ್ಚು ಹೊತ್ತು ಕೆಲಸ ಮಾಡಬೇಕಿದೆ. ಮುಂಬರುವ ಎರಡು ಮೂರು ವರ್ಷಗಳಲ್ಲಿ  ದೇಶ ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಭಾರತೀಯರು ವಾರದ 6 ದಿನ 10 ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕಿದೆ.   ವಾರದಲ್ಲಿ 40 ಗಂಟೆ ಕಾಲ ಕೆಲಸ ಮಾಡುವುದನ್ನು 60 ಗಂಟೆಗಳಿಗೆ ಹೋಲಿಸಿದರೆ ತ್ವರಿತ ಗತಿಯಲ್ಲಿ  ದೇಶ ಅಭಿವೃದ್ಧಿ ಹೊಂದಲಿದೆ. ಸ್ವಂತ ಉದ್ದಿಮೆದಾರರು ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ವೈರಸ್ ವಿರುದ್ಧ ಹೋರಾಡಲಿರುವ ಪರಿಹಾರ ಮಾರ್ಗ ಮತ್ತು ಕೆಲಸದಲ್ಲಿ ಸಮತೋಲನವನ್ನು ಕಂಡುಕೊಳ್ಳಬೇಕು.

ಮನೆಯಿಂದ ಕೆಲಸ ಮಾಡುವ ಸಂಪ್ರದಾಯದಲ್ಲಿ ಉತ್ಪಾದನಾ ಮಟ್ಟವನ್ನು ನಿರ್ಣಯಿಸಬೇಕು. ಹೀಗೆ ಉತ್ಪಾದನಾ ಮಟ್ಟವನ್ನು ನಿರ್ಣಯಿಸದೇ ಹೋದರೆ ಮನೆಯಿಂದ ಕೆಲಸ ಮಾಡುವ ವಿಧಾನ ಭಾರತೀಯರಿಗೆ ಒಗ್ಗಲಾರದು. ಪ್ರತಿಯೊಂದು ಸ್ಥಾನದಲ್ಲಿರುವವರಿಗೆ ಉತ್ಪಾದನಾ ಪ್ರಮಾಣ ಇಷ್ಟು ಎಂದು ನಿರ್ಧರಿಸಿದರೆ ಅವರು ಬಯಸಿದ ಜಾಗದಿಂದ ಕೆಲಸ ಮಾಡಬಹುದು ಎಂದು ಮೂರ್ತಿ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು