ಗುರುವಾರ , ನವೆಂಬರ್ 26, 2020
21 °C
ಹೂಡಿಕೆ ಹೆಚ್ಚಳ

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 30ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನ–ಸಾಂದರ್ಭಿಕ ಚಿತ್ರ

ಮುಂಬೈ: ಭಾರತದಲ್ಲಿ ಈ ವರ್ಷ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ಶೇ 30ರಷ್ಟು ಇಳಿಕೆಯಾಗಿ 86.6 ಟನ್‌ ತಲುಪಿದೆ. ಕೋವಿಡ್‌–19 ಕಾರಣಗಳು ಹಾಗೂ ಬೆಲೆ ಏರಿಕೆಯಿಂದ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿರುವುದಾಗಿ ವಿಶ್ವ ಚಿನ್ನ ಮಂಡಳಿಯು (ಡಬ್ಲ್ಯುಜಿಸಿ) ವರದಿಯಲ್ಲಿ ತಿಳಿಸಿದೆ.

ಡಬ್ಲ್ಯುಜಿಸಿ ಪ್ರಕಾರ, 2019ರ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ 123.9 ಟನ್‌ಗಳಷ್ಟಿತ್ತು. ಮೌಲ್ಯದ ಆಧಾರದ ಮೇಲೆ ಕಳೆದ ವರ್ಷ ಇದೇ ಅವಧಿಯಲ್ಲಿ ₹41,300 ಕೋಟಿಯಷ್ಟಿದ್ದ ಚಿನ್ನದ ಬೇಡಿಕೆ ಶೇ 4ರಷ್ಟು ಇಳಿಕೆಯಾಗಿ ₹39,510 ಕೋಟಿ ಆಗಿದೆ.

'ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ 70ರಷ್ಟು ಕುಸಿತದೊಂದಿಗೆ 64 ಟನ್‌ ದಾಖಲಾಗಿತ್ತು. ಮೂರನೇ ತ್ರೈಮಾಸಿಕದಲ್ಲಿ ಬೇಡಿಕೆ ಶೇ 30ರಷ್ಟು ಇಳಿಕೆಯೊಂದಿಗೆ 86.6 ಟನ್‌ ಆಗಿದೆ. ಲಾಕ್‌ಡೌನ್‌ ಸಡಿಲಿಕೆ ಹಾಗೂ ಆಗಸ್ಟ್‌ನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾದ ಕಾರಣ ಜನರು ಚಿನ್ನದ ಖರೀದಿ ನಡೆಸಿದ್ದಾರೆ' ಎಂದು ಡಬ್ಲ್ಯುಜಿಸಿ ಭಾರತದ ಎಂಡಿ ಸೋಮಸುಂದರಂ ಪಿ.ಆರ್‌ ಹೇಳಿದ್ದಾರೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 101.6 ಟನ್‌ಗಳಷ್ಟಿದ್ದ ಚಿನ್ನದ ಆಭರಣಗಳ ಬೇಡಿಯು ಶೇ 48ರಷ್ಟು ಕಡಿಮೆಯಾಗಿ 52.8 ಟನ್‌ ದಾಖಲಾಗಿದೆ. ಮೌಲ್ಯದ ಆಧಾರದಲ್ಲಿಯೂ ಶೇ 29ರಷ್ಟು ಇಳಿಕೆಯಾಗಿ ₹24,100 ಕೋಟಿಯಾಗಿದೆ. 2019ರ ಜುಲೈ–ಸೆಪ್ಟೆಂಬರ್‌ನಲ್ಲಿ  ₹33,850 ಕೋಟಿ ಬೇಡಿಕೆ ದಾಖಲಾಗಿತ್ತು.

ಆದರೆ, ಚಿನ್ನದ ಹೂಡಿಕೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 52ರಷ್ಟು ಏರಿಕೆಯಾಗಿದೆ. 2019ರಲ್ಲಿ ಮೂರನೇ ತ್ರೈಮಾಸಿಕದಲ್ಲಿ 22.3 ಟನ್‌ ಚಿನ್ನ ಹೂಡಿಕೆಯಾಗಿದ್ದರೆ, ಈ ವರ್ಷ 33.8 ಟನ್‌ನಷ್ಟು ಚಿನ್ನ ಹೂಡಿಕೆಗೆ ಮೀಸಲಾಗಿದೆ. ಮೌಲ್ಯದ ಆಧಾರದ ಮೇಲೆ ಶೇ 107ರಷ್ಟು ಹೆಚ್ಚಳವಾಗಿ ₹15,410 ಕೋಟಿ ತಲುಪಿದೆ. ಕಳೆದ ವರ್ಷ ಚಿನ್ನದ ಹೂಡಿಕೆ ಮೌಲ್ಯ ₹7,450 ಕೋಟಿ.

ದಸರಾ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು, ಮದುವೆ ಸಮಾರಂಭಗಳ ಕಾರಣದಿಂದ ಚಿನ್ನದ ಖರೀದಿಯ ಪ್ರಮಾಣ ನಾಲ್ಕನೇ ತ್ರೈಮಾಸಿಕದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇರುವುದಾಗಿ ಸೋಮಸುಂದರಂ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು