ತಯಾರಿಕಾ ವಲಯದ ಚಟುವಟಿಕೆ: ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

ನವದೆಹಲಿ/ಬೆಂಗಳೂರು: ದೇಶದ ತಯಾರಿಕಾ ವಲಯದ ಚಟುವಟಿಕೆಯು ನವೆಂಬರ್ ತಿಂಗಳಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.
ಕೋವಿಡ್–19 ಸಾಂಕ್ರಾಮಿಕವು ವಲಯದ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಬೇಡಿಕೆ ಕಡಿಮೆ ಇರುವುದು ತಯಾರಿಕೆಯನ್ನು ತಗ್ಗಿಸಿದೆ ಎಂದು ಐಎಚ್ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.
ಐಎಚ್ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಅಕ್ಟೋಬರ್ನಲ್ಲಿ 58.9ರಷ್ಟಿತ್ತು. ಇದು ನವೆಂಬರ್ನಲ್ಲಿ 56.3ಕ್ಕೆ ಇಳಿಕೆ ಆಗಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟವಾಗಿದೆ. ಹೀಗಿದ್ದರೂ, ಪಿಎಂಐ 50ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿತವಾಗುವುದರಿಂದ, ತಯಾರಿಕಾ ವಲಯದ ಬೆಳವಣಿಗೆಯು ಉತ್ತಮವಾಗಿಯೇ ಇದೆ ಎಂಬುದನ್ನು ಸೂಚಿಸುತ್ತಿದೆ ಎಂದು ಐಎಚ್ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.
‘ಭಾರತದ ತಯಾರಿಕಾ ವಲಯವು ಚೇತರಿಕೆಯ ಹಾದಿಯಲ್ಲಿದೆ. ಆದರೆ, ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಅದಕ್ಕೆ ಸಂಬಂಧಿಸಿದ ನಿರ್ಬಂಧಗಳಿಂದಾಗಿ ನವೆಂಬರ್ನಲ್ಲಿ ಚೇತರಿಕೆಯ ಪ್ರಮಾಣದಲ್ಲಿ ಇಳಿಕೆ ಆಗಿದೆ’ ಎಂದು ಐಎಚ್ಎಸ್ ಮರ್ಕಿಟ್ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ
ಈ ವರ್ಷದ ಒಟ್ಟಾರೆ ಬೆಳವಣಿಗೆಯನ್ನು ಅಂದಾಜು ಮಾಡಬೇಕಿದೆ. ಆದರೆ, ಸಾರ್ವಜನಿಕ ನೀತಿ, ರೂಪಾಯಿ ಮೌಲ್ಯ ಇಳಿಕೆ ಹಾಗೂ ಕೋವಿಡ್–19 ಸಾಂಕ್ರಾಮಿಕವು ವಹಿವಾಟು ನಡೆಸುವ ವಿಶ್ವಾಸವನ್ನು ಕುಗ್ಗಿಸಿವೆ ಎಂದು ಸಮೀಕ್ಷೆಯು ಹೇಳಿದೆ.
ಕೊರೊನಾ ವೈರಸ್ ಹರಡಲು ಆರಂಭಿಸಿದಾಗಿನಿಂದ ಲಕ್ಷಗಟ್ಟಲೆ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಮಂದಿ ವೇತನ ಕಡಿತದ ಸಮಸ್ಯೆ ಎದುರಿಸಿದ್ದಾರೆ. ತಯಾರಿಕಾ ವಲಯವು ಸತತ ಎಂಟನೇ ತಿಂಗಳಿನಲ್ಲಿಯೂ ಸಿಬ್ಬಂದಿ ಕಡಿತ ಮುಂದುವರಿಸಿದೆ. ಆಗಸ್ಟ್ನಿಂದ ತಯಾರಿಕಾ ವೆಚ್ಚವು ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರಿಂದಾಗಿ ಕಂಪನಿಗಳು ಮಾರಾಟ ದರವನ್ನು ಹೆಚ್ಚಿಸುತ್ತಲೇ ಇವೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜು ಮಾಡಿರುವಂತೆ ಹಣದುಬ್ಬರವು ಶೇ 6ರ ಮಟ್ಟಕ್ಕಿಂತಲೂ ಹೆಚ್ಚಿರಲಿದೆ. ಈ ಕಾರಣಕ್ಕಾಗಿ ಬಡ್ಡಿದರ ಕಡಿತ ಮಾಡಲು ಸೀಮಿತ ಅವಕಾಶ ದೊರೆಯಲಿದೆ ಎಂದು ಹೇಳಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.