ಮಂಗಳವಾರ, ಜನವರಿ 26, 2021
28 °C

ಡಿಸೆಂಬರ್‌ನ ಇಂಧನ ಬೇಡಿಕೆ 11 ತಿಂಗಳಲ್ಲೇ ಗರಿಷ್ಠ

ಪಿಟಿಐ/ ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಂಡುಕೊಳ್ಳುತ್ತಿವೆ. ಹೀಗಾಗಿ ಇಂಧನ ಬೇಡಿಕೆಯು ಸತತ ನಾಲ್ಕನೇ ತಿಂಗಳಿನಲ್ಲಿಯೂ ಏರಿಕೆಯಾಗಿದೆ.

ಇಂಧನ ಬೇಡಿಕೆಯು ಡಿಸೆಂಬರ್‌ನಲ್ಲಿ ಶೇ 4.1ರಷ್ಟು ಹೆಚ್ಚಾಗಿದ್ದು 1.86 ಕೋಟಿ ಟನ್‌ಗಳಿಗೆ ತಲುಪಿದೆ. 2020ರ ಜನವರಿ ಬಳಿಕ ಅತ್ಯಂತ ಗರಿಷ್ಠ ಮಟ್ಟ ಇದಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ‘ಪೆಟ್ರೋಲಿಯಂ ಪ್ಲಾನಿಂಗ್‌ ಆ್ಯಡ್‌ ಅನಲಿಸಿಸ್‌ ಸೆಲ್‌’ (ಪಿಪಿಎಸಿ) ತಿಳಿಸಿದೆ.

ಆದರೆ, ವಾರ್ಷಿಕವಾಗಿ ಬೇಡಿಕೆಯು ಶೇ 1.8ರಷ್ಟು ಇಳಿಕೆ ಕಂಡಿದ್ದು, ಕೋವಿಡ್‌ಗೂ ಮುಂಚಿನ ಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ ಎಂದು ಹೇಳಿದೆ.

ಪೆಟ್ರೋಲ್‌ ಬಳಕೆಯು ಸೆಪ್ಟೆಂಬರ್‌ನಲ್ಲಿಯೇ ಕೋವಿಡ್‌ಗೂ ಮುಂಚಿನ ಸ್ಥಿತಿಗೆ ಮರಳಿದೆ. ಪೆಟ್ರೋಲಿಯಂ ಬೇಡಿಕೆಯು ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇ 1.5ರಷ್ಟು ಹೆಚ್ಚಾಗಿದ್ದು 27 ಲಕ್ಷ ಟನ್‌ಗಳಷ್ಟಾಗಿದೆ.

ಡೀಸೆಲ್‌ ಬಳಕೆಯು ಅಕ್ಟೋಬರ್‌ನಲ್ಲಿಯೇ ಕೋವಿಡ್‌ಗೂ ಮುಂಚಿನ ಸ್ಥಿತಿಗೆ ತಲುಪಿತ್ತು. ಆದರೆ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಮತ್ತೆ ಇಳಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ಶೇ 7ರಷ್ಟು ಏರಿಕೆ ಕಂಡಿದ್ದ ಡೀಸೆಲ್‌ ಬೇಡಿಕೆಯು ನವೆಂಬರ್‌ನಲ್ಲಿ ಶೇ 6.9ರಷ್ಟು ಹಾಗೂ ಡಿಸೆಂಬರ್‌ನಲ್ಲಿ ಶೇ 2.7ರಷ್ಟು ಇಳಿಕೆ ಕಂಡಿದೆ. ಡಿಸೆಂಬರ್‌ನಲ್ಲಿ 71.8 ಲಕ್ಷ ಟನ್‌ಗಳಷ್ಟು ಡೀಸೆಲ್‌ ಬಳಕೆ ಆಗಿದೆ.

ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಏಪ್ರಿಲ್‌ನಲ್ಲಿ ಇಂಧನ ಬೇಡಿಕೆ ಶೇ 49ರಷ್ಟು ಕುಸಿತ ಕಂಡಿತ್ತು. ಹಂತ ಹಂತವಾಗಿ ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವು ಮಾಡುತ್ತಿದ್ದಂತೆಯೇ ಇಂಧನ ಬೇಡಿಕೆಯಲ್ಲಿಯೂ ಚೇತರಿಕೆ ಕಾಣಲಾರಂಭಿಸಿದೆ. ಹಬ್ಬದ ಋತುವಿನಲ್ಲಿ ಇಂಧನ ಬಳಕೆ ಹೆಚ್ಚಾಯಿತು. ಹೀಗಿದ್ದರೂ ಬಹುತೇಕ ಪ್ರದೇಶಗಳಲ್ಲಿ ಶಾಲಾ–ಕಾಲೇಜುಗಳು ಆರಂಭವಾಗದೇ ಇರುವುದರಿಂದ ಸಾರ್ವಜನಿಕ ಸಾರಿಗೆ ಸಹ ಸ್ಥಿತಿಗೆ ಬಂದಿಲ್ಲ.

ವಿಮಾನ ಇಂಧನ (ಜೆಟ್‌) ಮಾರಾಟ ಶೇ 41ರಷ್ಟು ಇಳಿಕೆಯಾಗಿದ್ದು 4.28 ಲಕ್ಷ ಟನ್‌ಗಳಿಗೆ ತಲುಪಿದೆ. ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ವಿಮಾನಯಾನ ಕ್ಷೇತ್ರವೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಾರಾಟದಲ್ಲಿ ಇಳಿಕೆ ಆಗಿದೆ.

ಅಂಕಿ–ಅಂಶ

ಇಂಧನ ಬೇಡಿಕೆ (ಕೋಟಿ ಟನ್‌ಗಳಲ್ಲಿ)

ನವೆಂಬರ್‌;1.78

ಡಿಸೆಂಬರ್‌;1.86

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು