ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಡಿಕೆ ಹೆಚ್ಚಳದಿಂದ ಗರಿಗೆದರಿದ ಸೇವಾವಲಯ: 5 ತಿಂಗಳ ಗರಿಷ್ಠ ಮಟ್ಟಕ್ಕೆ

Published : 4 ಸೆಪ್ಟೆಂಬರ್ 2024, 14:45 IST
Last Updated : 4 ಸೆಪ್ಟೆಂಬರ್ 2024, 14:45 IST
ಫಾಲೋ ಮಾಡಿ
Comments

ನವದೆಹಲಿ: ಬೇಡಿಕೆಗಳ ಹೆಚ್ಚಳದಿಂದ ದೇಶದ ಸೇವಾ ವಲಯದ ಚಟುವಟಿಕೆಯ ಬೆಳವಣಿಗೆ ಆಗಸ್ಟ್‌ ತಿಂಗಳಲ್ಲಿ 5 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ.‌

ಸೇವಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್‌ ಬ್ಯುಸಿನೆಸ್‌ ಸೂಚ್ಯಂಕವು, ಜುಲೈ ತಿಂಗಳಲ್ಲಿ 60.3 ದಾಖಲಾಗಿತ್ತು. ಆಗಸ್ಟ್‌ನಲ್ಲಿ 60.9ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ. 

‘ಸೇವಾ ವಲಯದಲ್ಲಿ ವ್ಯಾಪಾರ ಚಟುವಟಿಕೆಯು ವೇಗವಾಗಿದ್ದರಿಂದ ಸೂಚ್ಯಂಕವು ಆಗಸ್ಟ್‌ನಲ್ಲಿ ದೃಢವಾದ ಬೆಳವಣಿಗೆ ದಾಖಲಿಸಿದೆ. ಮಾರ್ಚ್‌ ಬಳೀಕದ ಅತಿ ವೇಗದ ಬೆಳವಣಿಗೆ ಇದಾಗಿದೆ. ದೇಶೀಯ ಬೇಡಿಕೆಗಳು ಸೇರಿದಂತೆ ಹೊಸ ಬೇಡಿಕೆಗಳ ಏರಿಕೆಯಿಂದ ಸೂಚ್ಯಂಕವು ಪ್ರಗತಿ ಕಂಡಿದೆ’ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್‌ ಭಂಡಾರಿ ಹೇಳಿದ್ದಾರೆ.

ತಯಾರಿಕಾ ಮತ್ತು ಸೇವಾ ವಲಯದಲ್ಲಿನ ತಯಾರಿಕಾ ವೆಚ್ಚದ ಏರಿಕೆಯು ಆರು ತಿಂಗಳಲ್ಲಿ ಬಹಳ ನಿಧಾನವಾಗಿಯೇ ಇದೆ. ಇದರ ಪರಿಣಾಮ ಉತ್ಪಾದನೆ ವೆಚ್ಚದ ಹಣದುಬ್ಬರ ಇಳಿಕೆಯಾಗಿದೆ. ಸೇವಾ ವಲಯವೂ ಇದೇ ಪ್ರವೃತ್ತಿ ತೋರಿದೆ. ಒಟ್ಟಾರೆ ಹಣದುಬ್ಬರ ದರದ ಏರಿಕೆಯು ಜುಲೈಗಿಂತಲೂ ನಿಧಾನಗೊಂಡಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ನೇಮಕಾತಿ ಕಡಿಮೆಯಾಗಿದೆ. ಆದರೂ, ಉದ್ಯೋಗ ದರವು ಸದೃಢವಾಗಿದೆ ಎಂದು ತಿಳಿಸಿದ್ದಾರೆ.

ಉತ್ಪಾದನಾ ವೆಚ್ಚ ಸ್ಥಿರ: ಎಚ್‌ಎಸ್‌ಬಿಸಿ ಇಂಡಿಯಾ ಕಾಂಪೊಸಿಟ್ ಉತ್ಪಾದನಾ ಸೂಚ್ಯಂಕವು ಆಗಸ್ಟ್‌ನಲ್ಲಿ 60.7ರಷ್ಟಿದೆ. ಜುಲೈನಲ್ಲೂ ಇದೇ ಸೂಚ್ಯಂಕವಿತ್ತು.

ಸೇವಾ ಪೂರೈಕೆದಾರರು ಮಾರ್ಚ್‌ನಿಂದ ವ್ಯಾಪಾರ ಚಟುವಟಿಕೆಯಲ್ಲಿ ದೃಢವಾದ ಹೆಚ್ಚಳ ಕಂಡಿದ್ದಾರೆ. ಆದರೆ ಸರಕುಗಳ ತಯಾರಕರು ಉತ್ಪಾದನೆಯಲ್ಲಿ ಇಳಿಕೆ ಕಂಡಿದ್ದಾರೆ. ಇದರಿಂದ ಸೂಚ್ಯಂಕಗಳು ಯಥಾಸ್ಥಿತಿಯಲ್ಲಿವೆ.

ಆಗಸ್ಟ್ ಸಮೀಕ್ಷೆಯ ಮಾಹಿತಿಯು ಭಾರತೀಯ ಸರಕುಗಳು ಮತ್ತು ಸೇವೆಗಳಿಗೆ ವಿಧಿಸಲಾದ ದರವು ಜುಲೈಗಿಂತ ಕಡಿಮೆ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. 

ಸೇವಾ ವಲಯದ ಸೂಚ್ಯಂಕ

2023

ಆಗಸ್ಟ್‌;60.1

ಸೆಪ್ಟೆಂಬರ್; 61

ಅಕ್ಟೋಬರ್‌;58.4

ನವೆಂಬರ್;56.9

ಡಿಸೆಂಬರ್‌; 59

2024

ಜನವರಿ;61.8

ಫೆಬ್ರುವರಿ;60.6

ಮಾರ್ಚ್‌;61.2

ಏಪ್ರಿಲ್‌;60.8

ಮೇ;60.2

ಜೂನ್‌;60.5

ಜುಲೈ;60.3

ಆಗಸ್ಟ್;60.9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT