ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಸಿ: ಖರೀದಿದಾರರಿಗೆ ತೆರಿಗೆ ಹೊರೆ

ಸರಕು ಮತ್ತು ಸೇವಾ ತೆರಿಗೆ ನಿಯಮ ಬದಲಾವಣೆ ತಂದ ಸಂಕಷ್ಟ
Last Updated 22 ಡಿಸೆಂಬರ್ 2019, 20:04 IST
ಅಕ್ಷರ ಗಾತ್ರ

ದಾವಣಗೆರೆ: ಜಿಎಸ್‌ಟಿ ಪಾವತಿಸಲು ಜಾರಿಗೆ ತಂದಿರುವ ನೂತನ ನಿಯಮಾವಳಿಯಿಂದಾಗಿ ‘ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌’ (ಐಟಿಸಿ) ಸೌಲಭ್ಯ ಸಕಾಲದಲ್ಲಿ ಸಿಗದೇ ವರ್ತಕರು ಹೆಚ್ಚುವರಿ ತೆರಿಗೆ ಭರಿಸಬೇಕಾದ ಪರಿಸ್ಥಿತಿ ಬಂದಿದೆ.

ಹಿಂದಿನ ತಿಂಗಳು ಹೊರಡಿಸಿರುವ ಆದೇಶದ ಪ್ರಕಾರ, ಉತ್ಪಾದಕ ಅಥವಾ ಮಾರಾಟಗಾರ ಜಿಎಸ್‌ಟಿ ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್‌ ಮಾಡಿರುವ ಮಾರಿದ ಉತ್ಪನ್ನಗಳ ‘ಇನ್‌ವಾಯ್ಸ್’ ಹಾಗೂ ‘ಡೆಬಿಟ್‌ ನೋಟ್‌’ ದಾಖಲೆಗಳ ಜೊತೆಗೆ ಸಲ್ಲಿಸಿದ ದಾಖಲೆಗಳ ಶೇ 20ರಷ್ಟನ್ನು ಅಪ್‌ಲೋಡ್‌ ಮಾಡದ ದಾಖಲೆಗೆ ಐಟಿಸಿ ಸೌಲಭ್ಯವನ್ನು ಮಾತ್ರ ಆ ತಿಂಗಳು ಪಡೆಯಬಹುದಾಗಿದೆ. ಮಾರಾಟಗಾರ ಉಳಿದ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದರಷ್ಟೇ ಬಾಕಿ ಇರುವ ಶೇ 80ರಷ್ಟು ಐಟಿಸಿ ಸೌಲಭ್ಯ ಖರೀದಿದಾರನಿಗೆ ಸಿಗಲಿದೆ. ಒಂದೊಮ್ಮೆ ಮಾರಾಟಗಾರ ನಂತರವೂ ದಾಖಲೆ ಅಪ್‌ಲೋಡ್‌ ಮಾಡದೇ ಇದ್ದರೆ ಈ ಹಿಂದೆ ಪಡೆದಿದ್ದ ಐಟಿಸಿ ಸೌಲಭ್ಯದ ಶೇ 20ಕ್ಕೂ ಖರೀದಿದಾರ ತೆರಿಗೆ ಕಟ್ಟಬೇಕಾಗುತ್ತದೆ.

‘ಮಾರಾಟಗಾರ ಸಕಾಲದಲ್ಲಿ ಇನ್‌ವಾಯ್ಸ್ ಹಾಗೂ ಕ್ರೆಡಿಟ್‌ ನೋಟ್‌ ದಾಖಲೆ ಸಲ್ಲಿಸದೇ ಇದ್ದರೆ, ವರ್ಷಾಂತ್ಯದಲ್ಲಿ ಖರೀದಿದಾರ ತೆರಿಗೆ ಹಾಗೂ ಬಡ್ಡಿ ಎರಡನ್ನೂ ಪಾವತಿಸಬೇಕಾಗುತ್ತದೆ. ಎರಡು ವರ್ಷಗಳ ಬಳಿಕ ಲೆಕ್ಕ ತಪಾಸಣೆಗೆ ಅಧಿಕಾರಿಗಳು ಬಂದಾಗ ತೆರಿಗೆ ಪಾವತಿಸದೇ ಇರುವುದು ಕಂಡುಬಂದರೆ ವಿಧಿಸುವ ಬಡ್ಡಿಯ ಮೊತ್ತವೇ ತೆರಿಗೆಯ ಎರಡು ಪಟ್ಟು ಆಗಲಿದೆ. ಈ ನೂತನ ನಿಯಮದಿಂದಾಗಿ ತಾನು ಮಾಡದ ತಪ್ಪಿಗೆ ಖರೀದಿದಾರರು ಐಟಿಸಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ’ ಎಂದು ದಾವಣಗೆರೆಯ ತೆರಿಗೆ ಸಲಹೆಗಾರ ಶಿವಯೋಗಿ ಎ. ಬೇಸರ ವ್ಯಕ್ತಪಡಿಸುತ್ತಾರೆ.

‘ನೂತನ ವ್ಯವಸ್ಥೆಯಿಂದ ಐಟಿಸಿ ಸಕಾಲಕ್ಕೆ ಸಿಗದೇ ವ್ಯಾಪಾರಿಗಳು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತಿದೆ.ಇದರಿಂದಾಗಿ ವಹಿವಾಟು ನಡೆಸಲು ಹಣಕಾಸಿನ ಕೊರತೆ ಉಂಟಾಗುತ್ತದೆ. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ವರ್ತಕರಿಗೆ ಇದರ ಪರಿಣಾಮ ಇನ್ನೂ ಗೊತ್ತಾಗಿಲ್ಲ. ತೆರಿಗೆ ಪಾವತಿಸಲು ಬಂದಾಗ ಸಮಸ್ಯೆಯ ತೀವ್ರತೆಯ ಅರಿವಾಗಲಿದೆ’ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಪರ್ಯಾಯ ಮಾರ್ಗ

‘ಇನ್‌ವಾಯ್ಸ್ ಹಾಗೂ ಕ್ರೆಡಿಟ್‌ ನೋಟ್‌ ಅನ್ನು ಮಾರಾಟಗಾರರು ಅಪ್‌ಲೋಡ್‌ ಮಾಡುವ ಬದಲು ಖರೀದಿದಾರರು ಅಪ್‌ಲೋಡ್‌ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಖರೀದಿದಾರರು ಅಪ್‌ಲೋಡ್‌ ಮಾಡಿದ ಮಾಹಿತಿಯು ಪೂರೈಕೆದಾರರ ಲಾಗಿನ್‌ನಲ್ಲಿ ಕಾಣಿಸಿಕೊಳ್ಳಬೇಕು.ಅದಕ್ಕೆ ಅವರು ಒಪ್ಪಿಗೆ ಸೂಚಿಸಬೇಕು. ಇಲ್ಲವೇ ಸೂಕ್ತ ಕಾರಣ ನೀಡಿ ತಿರಸ್ಕರಿಸಲು ಅವಕಾಶ ಕಲ್ಪಿಸಬೇಕು. ಖರೀದಿದಾರರು ಮಾಹಿತಿ ಸಲ್ಲಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಆಯಾ ತಿಂಗಳು ಐಟಿಸಿ ಸೌಲಭ್ಯ ಪಡೆಯಲು ವರ್ತಕರಿಗೆ ಅನುಕೂಲವಾಗಲಿದೆ. ಇದಕ್ಕೆ ಅಗತ್ಯವಿರುವ ಬದಲಾವಣೆಯನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ಮಾಡಿಕೊಳ್ಳಬೇಕು’ ಎಂದು ಶಿವಯೋಗಿ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT