ಹೂಡಿಕೆಗೆ ಇನ್ನೊಂದು ಆಯ್ಕೆ ‘ಬೆಳ್ಳಿ ಇಟಿಎಫ್’: ತಜ್ಞರ ಅಭಿಪ್ರಾಯ

ನವದೆಹಲಿ: ಬೆಳ್ಳಿಯ ವಿನಿಮಯ ವಹಿವಾಟು ನಿಧಿ (ಇಟಿಎಫ್) ಆರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿರ್ಧಾರ ಮಾಡಿರುವುದರಿಂದ ಸಣ್ಣ ಹೂಡಿಕೆದಾರರಿಗೆ ಬಂಡವಾಳ ತೊಡಗಿಸಲು ಹೊಸದೊಂದು ಆಯ್ಕೆ ದೊರೆಯಲಿದೆ ಎಂದು ತಜ್ಞರು ಹೇಳಿದ್ದಾರೆ.
ಚಿನ್ನದ ಇಟಿಎಫ್ನಂತೆಯೇ ಬೆಳ್ಳಿಯ ಇಟಿಎಫ್ ಕೂಡ ಹೂಡಿಕೆಯನ್ನು ತಕ್ಷಣಕ್ಕೆ ನಗದು ಮಾಡಿಕೊಳ್ಳುವ ಅವಕಾಶವನ್ನು ಮತ್ತು ಇತರ ಹಲವು ಅನುಕೂಲಗಳನ್ನು ಸಣ್ಣ ಹೂಡಿಕೆದಾರರಿಗೆ ನೀಡಲಿದೆ ಎಂದು ಕ್ವಾಂಟಂ ಮ್ಯೂಚುವಲ್ ಫಂಡ್ನ ಪರ್ಯಾಯ ಹೂಡಿಕೆಯ ಹಿರಿಯ ನಿಧಿ ನಿರ್ವಾಹಕ ಚಿರಾಗ್ ಮೆಹ್ತಾ ಹೇಳಿದ್ದಾರೆ.
ಬೆಳ್ಳಿಯ ಇಟಿಎಫ್ ಆರಂಭಿಸಲು ಮುಂದಾಗಿರುವುದು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಬಯಸುವ ಸಣ್ಣ ಹೂಡಿಕೆದಾರರ ಪಾಲಿಗೆ ಸೂಕ್ತವಾಗಿದೆ. ಆದಾಗ್ಯೂ, ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯ ಪ್ರಯೋಜನಗಳು ಬೆಳ್ಳಿಗಿಂತ ಹೆಚ್ಚು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮೆಹ್ತಾ ಅವರು ಸಲಹೆ ನೀಡಿದ್ದಾರೆ.
2021ರ ಆಗಸ್ಟ್ 31ರ ವೇಳೆಗೆ ಚಿನ್ನದ ಇಟಿಎಫ್ಗಳ ನಿರ್ವಹಣಾ ಸಂಪತ್ತು ಮೌಲ್ಯ ₹ 16,350 ಕೋಟಿಗಳಷ್ಟಾಗಿತ್ತು.
ಭಾರತದಲ್ಲಿ ಬೆಳ್ಳಿ ಇಟಿಎಫ್ ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದು ಖಚಿತವಿಲ್ಲ. ಏಕೆಂದರೆ, ಚಿನ್ನದ ಇಟಿಎಫ್ಅನ್ನು 2007ರಲ್ಲಿ ಪ್ರಾರಂಭಿಸಿದ್ದರೂ ಅದು ಇನ್ನೂ ಉದ್ಯಮದ ಒಟ್ಟು ನಿರ್ವಹಣಾ ಸಂಪತ್ತು ಮೌಲ್ಯದ ಶೇಕಡ 0.45ರಷ್ಟು ಮಾತ್ರ ಇದೆ. ಹೀಗಿದ್ದರೂ, ಹೂಡಿಕೆದಾರರಿಗೆ ಹೆಚ್ಚುವರಿ ಆಯ್ಕೆ ನೀಡಲು ಮ್ಯೂಚುವಲ್ ಫಂಡ್ಗಳಿಗೆ ಇದು ಸಹಾಯ ಮಾಡಲಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ನ ಚೀಫ್ ಬಿಸಿನೆಸ್ ಆಫಿಸರ್ ದೀಪಕ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬೆಳ್ಳಿ ಇಟಿಎಫ್ನಲ್ಲಿ ಹೂಡಿಕೆ ಮಾಡುವವರು ಬೆಳ್ಳಿಯ ಶುದ್ಧತೆ ಅಥವಾ ಕಳ್ಳತನದ ಬಗ್ಗೆ ಚಿಂತಿಸಬೇಕಾಗಿಲ್ಲ. ಇದನ್ನು ವೃತ್ತಿಪರ ವಾಲ್ಟ್ ಮ್ಯಾನೇಜರ್ಗಳು ನಿರ್ವಹಿಸುತ್ತಾರೆ ಎಂದು ನಿಯೋ ಮನಿ ಕಂಪನಿಯ ವಹಿವಾಟು ಮುಖ್ಯಸ್ಥ ಸ್ವಪ್ನಿಲ್ ಭಾಸ್ಕರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.