ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹300 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳದ NSE ನಿಯಂತ್ರಿಸುವ ಬಾಬಾ ಯಾರು: ಕಾಂಗ್ರೆಸ್‌

ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾಗೆ ಐ.ಟಿ ಬಿಸಿ: ಪ್ರಧಾನಿ, ಹಣಕಾಸು ಸಚಿವರ ಮೌನದ ಬಗ್ಗೆ ಕಾಂಗ್ರೆಸ್ ಪ್ರಶ್ನೆ
Last Updated 17 ಫೆಬ್ರುವರಿ 2022, 13:19 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ್ದು, ಅದರ ಬೆನ್ನಲ್ಲೇ ಎನ್‌ಎಸ್‌ಇ ಕಾರ್ಯಾಚರಣೆಯ ಬಗ್ಗೆ ಪ್ರಧಾನಿ ಮತ್ತು ಹಣಕಾಸು ಸಚಿವರು ಮೌನ ವಹಿಸಿರುವುದನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಚಿತ್ರಾ ರಾಮಕೃಷ್ಣ ಮತ್ತು ಸಮೂಹದ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಸುಬ್ರಮಣಿಯನ್‌ ಅವರಿಗೆ ಸೇರಿದ ಮುಂಬೈನಲ್ಲಿರುವ ಜಾಗಗಳಲ್ಲಿ ಐಟಿ ದಾಳಿ ನಡೆದಿದೆ. ತೆರಿಗೆ ವಂಚನೆಗೆ ಸಂಬಂಧಿತ ತನಿಖೆಯ ಭಾಗವಾಗಿ ಐಟಿ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಎನ್‌ಎಸ್‌ಇಯ ಸಮೂಹದ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸಲಹೆಗಾರರಾಗಿ ಸುಬ್ರಮಣಿಯನ್‌ ಅವರ ನೇಮಕಾತಿಯಲ್ಲಿ ಹಿಮಾಲಯದ ಯೋಗಿ ಒಬ್ಬರ ನಿರ್ದೇಶನವನ್ನು ಚಿತ್ರಾ ಪಾಲಿಸಿದ್ದಾರೆ ಎಂದು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಇತ್ತೀಚಿನ ಆದೇಶದಲ್ಲಿ ತಿಳಿಸಿತ್ತು. ಅದರ ಬೆನ್ನಲ್ಲೇ ಚಿತ್ರಾ ಅವರ ನಡೆ ಚರ್ಚೆಗೆ ಗ್ರಾಸವಾಗಿತ್ತು.

ಈ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಮಾಡಿರುವ ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲಾ, 'ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು (ಎನ್‌ಎಸ್‌ಇ) ''ಬಾಬಾ'' ಮುನ್ನಡೆಸುತ್ತಿರುವುದರ ಬಗ್ಗೆ ಕಾಂಗ್ರೆಸ್‌ ಫೆಬ್ರುವರಿ 15ರಂದು ಪ್ರಶ್ನೆ ಮಾಡಿತ್ತು. ಆ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ–ಹಣಕಾಸು ಸಚಿವಾಲಯ–ಸಿಬಿಐ–ಇಡಿ-ಸಂಸ್ಥಿತಿಕ ವ್ಯವಹಾರಗಳ ಸಚಿವಾಲಯ–ಎಫ್‌ಐಯು–ಎಸ್‌ಎಫ್‌ಐಇ ಎಲ್ಲವೂ ಮೌನವಹಿಸಿವೆ,' ಎಂದು ಟ್ವೀಟಿಸಿದ್ದಾರೆ.

'ಆದಾಯ ತೆರಿಗೆ ಇಲಾಖೆಯು ತಡವಾಗಿ ಎಚ್ಚೆತ್ತಿದೆ. ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯವು ಇನ್ನೂ ನಿರಾಕರಿಸುತ್ತಲಿವೆ' ಎಂದು ಆರೋಪಿಸಿದ್ದಾರೆ.

₹300 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಒಳಗೊಂಡಿರುವ ಎನ್ಎನ್‌ಇ ಅನ್ನು 'ಬಾಬಾ' ಒಬ್ಬರು ಎಲ್ಲಿಂದಲೋ ಹೇಗೆ ನಡೆಸುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಸುರ್ಜೇವಾಲಾ ಪ್ರಕಟಿಸಿದ್ದಾರೆ.

'ಬಾಬಾ ಎಲ್ಲಿದ್ದಾರೆ ಎಂಬುದನ್ನು ಪ್ರಧಾನಿ (ನರೇಂದ್ರ ಮೋದಿ) ಮತ್ತು ಹಣಕಾಸು ಸಚಿವರು (ನಿರ್ಮಲಾ ಸೀತಾರಾಮನ್‌) ಹೇಳಬಲ್ಲರೇ? ಅವರ ಐಪಿ ಅಡ್ರೆಸ್‌ ಅನ್ನು ಏಕೆ ಪತ್ತೆ ಮಾಡಲು ಆಗುತ್ತಿಲ್ಲ? ಒಳಗಿನವರೇ ನಡೆಸಿರುವ ವಹಿವಾಟಿನ ಕುರಿತು ಹೇಗೆ ತಳ್ಳಿ ಹಾಕುವಿರಿ? ಮಾಹಿತಿ ಇದ್ದರೂ ಪ್ರಧಾನಿ–ಹಣಕಾಸು ಸಚಿವರು–ಸೆಬಿ 2016ರಿಂದಲೂ ಏನು ಮಾಡುತ್ತಿದ್ದಾರೆ,' ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಹಣಕಾಸಿನ ಅಕ್ರಮ ಮತ್ತು ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಮತ್ತು ದಾಖಲೆಗಳನ್ನು ಕಲೆಹಾಕಲು ಇಲಾಖೆಯ ಮುಂಬೈನ ತನಿಖಾ ತಂಡವು ಬೆಳಗ್ಗೆ ಈ ದಾಳಿ ನಡೆಸಿದೆ.

ಸುಬ್ರಮಣಿಯನ್‌ ಅವರನ್ನು ಮುಖ್ಯ ಯೋಜನಾ ಸಲಹೆಗಾರ ಮತ್ತು ಸಮೂಹದ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಮರುನೇಮಕ ಮಾಡಿರುವ ಸಂಬಂಧ ಆಡಳಿತಾತ್ಮಕ ವೈಫಲ್ಯ ಆಗಿದೆ ಎಂದು ಆರೋಪಿಸಿ ಸೆಬಿ ಚಿತ್ರಾ ಮತ್ತು ಇತರರಿಗೆ ದಂಡ ವಿಧಿಸಿತ್ತು. ಚಿತ್ರಾ ರಾಮಕೃಷ್ಣ ಅವರಿಗೆ ₹ 3 ಕೋಟಿ ದಂಡ, ಎನ್‌ಎಸ್‌ಇ ಮತ್ತು ಸುಬ್ರಮಣಿಯನ್‌, ಮಾಜಿ ಸಿಇಒ ರವಿ ನರೈನ್‌ ಅವರಿಗೆ ತಲಾ ₹ 2 ಕೋಟಿ ಹಾಗೂ ಮುಖ್ಯ ನಿಯಂತ್ರಣ ಅಧಿಕಾರಿ ವಿ.ಆರ್‌. ನರಸಿಂಹನ್‌ ಅವರಿಗೆ ₹ 6 ಲಕ್ಷ ದಂಡ ವಿಧಿಸಿದೆ.

ಚಿತ್ರಾ ಅವರು 2013ರ ಏಪ್ರಿಲ್‌ನಿಂದ 2016ರ ಡಿಸೆಂಬರ್ ಅವಧಿವರೆಗೆ ಎನ್‌ಎಸ್‌ಇಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT