ಶನಿವಾರ, ಜನವರಿ 28, 2023
13 °C

ಖರೀದಿ ಭರಾಟೆಗೆ ಕೊಡುಗೆ ಶೇ 20ರಷ್ಟು ಜನರಿಂದ ಮಾತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ತೀರಾ ಅಗತ್ಯವಲ್ಲದ ಹಾಗೂ ಐಷಾರಾಮಿ ಉತ್ಪನ್ನಗಳನ್ನು ಹೆಚ್ಚು ಖರೀದಿಸುತ್ತಿರುವುದು ಒಟ್ಟು ಜನಸಂಖ್ಯೆಯ ಶೇಕಡ 20ರಷ್ಟು ಮಂದಿ ಮಾತ್ರ ಎಂದು ಯುಬಿಎಸ್‌ ಸೆಕ್ಯುರಿಟೀಸ್ ಇಂಡಿಯಾ ನಡೆಸಿದ ಅಧ್ಯಯನವು ಹೇಳಿದೆ. ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾದರು ಎಂಬ ವಾದಕ್ಕೆ ಈ ಅಧ್ಯಯನವು ‍ಪುಷ್ಟಿ ನೀಡುವಂತಿದೆ.

ಐಷಾರಾಮಿ ಹಾಗೂ ತೀರಾ ಅವಶ್ಯಕವಲ್ಲದ ಉತ್ಪನ್ನಗಳನ್ನು ಖರೀದಿಸುವಲ್ಲಿ ಹೆಚ್ಚಿನ ಪಾಲು ಇರುವುದು ಸ್ಥಿತಿವಂತ ವರ್ಗಗಳದ್ದು. ಇದು ಈ ವರ್ಗಗಳ ಆದಾಯದ ಮೇಲೆ ಸಾಂಕ್ರಾಮಿಕವು ಪರಿಣಾಮ ಬೀರಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ತಾನ್ವಿ ಗುಪ್ತ–ಜೈನ್ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಅಧ್ಯಯನವನ್ನು ಆಗಸ್ಟ್‌ನಲ್ಲಿ ನಡೆಸಲಾಗಿದೆ. ಹೆಚ್ಚಿನ ಆದಾಯ ಹೊಂದಿರುವ ಒಟ್ಟು 1,500 ಜನರಿಂದ ಪ್ರತಿಕ್ರಿಯೆ ಪಡೆಯಲಾಗಿದೆ. ಆಗಸ್ಟ್‌ಗೂ ಮೊದಲಿನ ಮೂರು ತಿಂಗಳುಗಳಲ್ಲಿ ಇವರಲ್ಲಿ ಶೇಕಡ 50ಕ್ಕೂ ಹೆಚ್ಚಿನ ಪ್ರಮಾಣದ ಜನ ತಾವು ಅಂದುಕೊಂಡ ರೀತಿಯಲ್ಲಿ ಚಿನ್ನ, ಚಿನ್ನಾಭರಣ ಖರೀದಿಸಿದ್ದಾರೆ. ಶೇಕಡ 50ಕ್ಕಿಂತ ಹೆಚ್ಚಿನ ಪ್ರಮಾಣದ ಜನ ಮುಂದಿನ ಎರಡು ವರ್ಷಗಳಲ್ಲಿ ಆಸ್ತಿಯ ಮೇಲೆ ಹೂಡಿಕೆ ಮಾಡುವ, ಕಾರು ಅಥವಾ ದ್ವಿಚಕ್ರ ವಾಹನ ಖರೀದಿಸುವ ಉದ್ದೇಶ ಹೊಂದಿದ್ದಾರೆ.

2023ರಲ್ಲಿ ತಮ್ಮ ಆದಾಯವು ಇನ್ನಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆಯು ಶೇ 70ರಷ್ಟು ಮಂದಿಯಲ್ಲಿ ಇದೆ. ಅಂದರೆ, ಶ್ರೀಮಂತ ವರ್ಗಗಳಿಗೆ ಸೇರಿದವರು ಉತ್ಪನ್ನಗಳ ಖರೀದಿಯ ಚಾಲಕ ಶಕ್ತಿಯಾಗಿ ಇರಲಿದ್ದಾರೆ. ಶೇ 55ರಷ್ಟು ಮಂದಿ ಹೊಸ ಕಾರು ಅಥವಾ ದ್ಚಿಚಕ್ರ ವಾಹನ ಖರೀದಿಸುವ ಉದ್ದೇಶ ಹೊಂದಿದ್ದಾರೆ. ಶೇ 50ರಷ್ಟು ಮಂದಿ ಎರಡು ವರ್ಷಗಳಲ್ಲಿ ಮನೆ ಅಥವಾ ಆಸ್ತಿ ಖರೀದಿಸುವ ಉದ್ದೇಶ ಇರಿಸಿಕೊಂಡಿದ್ದಾರೆ.

ಸಾಂಕ್ರಾಮಿಕದ ಅವಧಿಯಲ್ಲಿ ಸಂಘಟಿತ ವಲಯವು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿತು. ಅಸಂಘಟಿತ ವಲಯದ ಪಾಲು ಕಡಿಮೆಯಾಯಿತು. ಶ್ರೀಮಂತರು ಬ್ರ್ಯಾಂಡೆಡ್ ಉತ್ಪನ್ನಗಳ ಮೇಲೆ ವೆಚ್ಚ ಮಾಡುವುದನ್ನು ಮುಂದುವರಿಸಿದರು ಎಂದು ಅಧ್ಯಯನ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.