ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಐಸಿ ಪ್ರೀಮಿಯಂ ಸಂಗ್ರಹ: ದಶಕದಲ್ಲೇ ಗರಿಷ್ಠ ದಾಖಲೆ

Published 11 ಮೇ 2024, 15:24 IST
Last Updated 11 ಮೇ 2024, 15:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಏಪ್ರಿಲ್‌ನಲ್ಲಿ ಒಟ್ಟು ₹12,384 ಕೋಟಿ ಪ್ರೀಮಿಯಂ ಸಂಗ್ರಹಿಸಿದೆ. ಇದು ಕಳೆದ ಒಂದು ದಶಕದ ಅವಧಿಯಲ್ಲಿ ತಿಂಗಳೊಂದರಲ್ಲಿ ಸಂಗ್ರಹವಾಗಿರುವ ಗರಿಷ್ಠ ಮೊತ್ತವಾಗಿದೆ ಎಂದು ಎಲ್‌ಐಸಿ ತಿಳಿಸಿದೆ.

ಜೀವ ವಿಮಾ ಪರಿಷತ್‌ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ–ಅಂಶದ ಅನ್ವಯ ಎಲ್‌ಐಸಿಯು ಕಳೆದ ವರ್ಷದ ಏಪ್ರಿಲ್‌ನಲ್ಲಿ ₹5,810 ಕೋಟಿ ಪ್ರೀಮಿಯಂ ಸಂಗ್ರಹಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 113ರಷ್ಟು ಏರಿಕೆಯಾಗಿದೆ.

ಇತ್ತೀಚೆಗೆ ಹೊಸ ಮಾರುಕಟ್ಟೆ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಹಕ ಕೇಂದ್ರಿತ ಸೇವೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿಮಾದಾರರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಹಾಗಾಗಿ, ಈ ಗರಿಷ್ಠ ಮೊತ್ತ ಸಂಗ್ರಹಿಸಲು ಸಾಧ್ಯವಾಗಿದೆ ಎಂದು ಎಲ್ಐಸಿ ತಿಳಿಸಿದೆ.

ಏಪ್ರಿಲ್‌ನಲ್ಲಿ ವೈಯಕ್ತಿಕ ಪ್ರೀಮಿಯಂ ವಿಭಾಗದಲ್ಲಿ ₹3,175 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 25.17ರಷ್ಟು ಹೆಚ್ಚಳವಾಗಿದೆ. ಗುಂಪು ಪ್ರೀಮಿಯಂ ವಿಭಾಗದಲ್ಲಿ ಶೇ 182.16ರಷ್ಟು ಏರಿಕೆಯಾಗಿದ್ದು, ಒಟ್ಟು ₹9,141 ಕೋಟಿ ಸಂಗ್ರಹವಾಗಿದೆ.

ವಾರ್ಷಿಕ ಗುಂಪು ಪ್ರೀಮಿಯಂ ವಿಭಾಗದಲ್ಲೂ ಶೇ 100ರಷ್ಟು ಏರಿಕೆಯಾಗಿದ್ದು, ₹66.83 ಕೋಟಿ ಸಂಗ್ರಹವಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT