ಭಾನುವಾರ, ನವೆಂಬರ್ 27, 2022
26 °C
ಅಡಮಾನ ಇಲ್ಲದೇ ಸಾಲ l

ನವೋದ್ಯಮಕ್ಕೆ ಸಾಲ ಖಾತರಿ- ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ನವೋದ್ಯಮಗಳನ್ನು ಸಾಲ ಖಾತರಿ ಯೋಜನೆಯ (ಸಿಜಿಎಸ್‌) ವ್ಯಾಪ್ತಿಗೆ ತರುವ ಸಂಬಂಧ ಕೇಂದ್ರ ಸರ್ಕಾರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ (ಡಿಪಿಐಐಟಿ) ಅಧಿಸೂಚನೆಯ ಪ್ರಕಾರ, ಅಕ್ಟೋಬರ್‌ 6ರಂದು ಅಥವಾ ನಂತರ ಸಾಲ ಮಂಜೂರು ಆಗಿದ್ದರೆ ಅಂತಹ ನವೋದ್ಯಮಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ.

ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ನೀಡಿರುವ ಸಾಲಕ್ಕೆ ಸರ್ಕಾರವೇ ಖಾತರಿದಾರ ಆಗುವ ಉದ್ದೇಶದಿಂದ ನವೋದ್ಯಮಗಳಿಗೆ ಸಾಲ ಖಾತರಿ ಯೋಜನೆಗೆ (ಸಿಜಿಎಸ್‌ಎಸ್‌) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಇಲಾಖೆಯು ತಿಳಿಸಿದೆ.

ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಲು ಈ ಯೋಜನೆಯು ನವೋದ್ಯಮಗಳಿಗೆ ನೆರವಾಗಲಿದೆ. ಪ್ರತಿ ಸಾಲಗಾರನಿಗೆ ನೀಡುವ ಸಾಲದ ಗರಿಷ್ಠ ಮೊತ್ತವು ₹10 ಕೋಟಿಯನ್ನು ಮೀರುವಂತಿಲ್ಲ ಎಂದು ಇಲಾಖೆಯು ಸೂಚನೆ ನೀಡಿದೆ.

ಸ್ಥಿರವಾದ ವರಮಾನ ಹೊಂದಿರುವ, ಒಂದು ವರ್ಷಕ್ಕೂ ಅಧಿಕ ಸಮಯದವರೆಗಿನ ಪ್ರತಿ ತಿಂಗಳ ಲೆಕ್ಕಪರಿಶೋಧಿತ ವರದಿ ಹೊಂದಿರುವ, ಸಾಲಕ್ಕೆ ಉತ್ತರದಾಯಿ ಆಗಿರುವ, ಸಾಲ ಬಾಕಿ ಉಳಿಸಿಕೊಂಡಿರದ ಹಾಗೂ ಆರ್‌ಬಿಐ ಮಾರ್ಗಸೂಚಿಯ ಪ್ರಕಾರ, ಅನುತ್ಪಾದಕ ಆಸ್ತಿ ಹೊಂದಿರದೇ ಇರುವ ನವೋದ್ಯಮವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ನವೋದ್ಯಮಕ್ಕೆ ನೀಡುವ ಸಾಲಕ್ಕೆ ಖಾತರಿ ಆಗುವ ಉದ್ದೇಶದಿಂದ
ಕೇಂದ್ರ ಸರ್ಕಾರವು ಒಂದು ಟ್ರಸ್ಟ್‌ ಅಥವಾ ನಿಧಿಯನ್ನು ಸ್ಥಾಪಿಸಲಿದೆ. ಈ ನಿಧಿಯನ್ನು ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟೀ ಕಂಪನಿಯು ನಿರ್ವಹಣೆ ಮಾಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು