ಭಾನುವಾರ, ಡಿಸೆಂಬರ್ 6, 2020
19 °C
ವಿಶೇಷ ಪ್ಯಾಕೇಜ್‌ಗೆ ಹಣಕಾಸು ಸಚಿವಾಲಯಕ್ಕೆ ಮನವಿ

ಲಾಕ್‌ಡೌನ್‌ ಹಿನ್ನೆಲೆ: ಕಾಫಿ ಬೆಳೆಗಾರರಿಗೆ ₹ 700 ಕೋಟಿ ನಷ್ಟ

ಮಹೇಶ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣಕ್ಕೆ ರಾಜ್ಯದ ಕಾಫಿ ಬೆಳೆಗಾರರು ಅಂದಾಜು ₹ 700 ಕೋಟಿ ಮೊತ್ತದ ನಷ್ಟಕ್ಕೆ ಗುರಿಯಾಗಿದ್ದಾರೆ.

ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿನ ರೋಬಸ್ಟಾ ಬೀಜ ಮತ್ತು ಮೆಣಸು ಕೊನೆಯ ಹಂತದ ಕೊಯ್ಲಿನಲ್ಲಿ ಇರುವಾಗಲೇ ದೇಶದಾದ್ಯಂತ ಜಾರಿಗೆ ಬಂದಿದ್ದ ದಿಗ್ಬಂಧನದ ಕಾರಣಕ್ಕೆ ಬೆಳೆಗಾರರು ಭಾರಿ ನಷ್ಟಕ್ಕೆ ಗುರಿಯಾಗಿದ್ದಾರೆ.

ರಫ್ತು ವಹಿವಾಟಿನಲ್ಲಿನ ನಷ್ಟದ ಮೊತ್ತವೇ ₹ 250 ಕೋಟಿಗಳಷ್ಟಿದೆ. ರಫ್ತುದಾರರು ಉತ್ಪನ್ನಗಳನ್ನು ಬಂದರುಗಳಿಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ರಫ್ತು ಪರ್ಮಿಟ್‌ ಪಡೆಯಲೂ ವಿಳಂಬವಾಗಿತ್ತು. ಗಮನಾರ್ಹ ಪ್ರಮಾಣದ ಕಾಫಿ ಬೀಜಗಳೂ ಪ್ಲ್ಯಾಂಟೇಷನ್‌ಗಳಲ್ಲಿಯೇ ಉಳಿದಿದ್ದವು.  ಬೀಜಗಳನ್ನು ಕ್ಯೂರಿಂಗ್‌ ವರ್ಕ್ಸ್‌ಗೆ ಸಾಗಿಸಲೂ ಸಾಧ್ಯವಾಗಿರಲಿಲ್ಲ.

‘ಕಾಫಿ ಉದ್ದಿಮೆಯು ಈಗಾಗಲೇ 2018–19 ಮತ್ತು 2019–20ನೇ ಸಾಲಿನಲ್ಲಿನ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಎರಡು ವರ್ಷಗಳ ಉತ್ಪಾದನೆಯು ಕ್ರಮವಾಗಿ ಶೇ 35 ಮತ್ತು ಶೇ 50ರಷ್ಟು ಕಡಿಮೆಯಾಗಿತ್ತು.  ಕೋವಿಡ್‌ ಲಾಕ್‌ಡೌನ್‌ ರೋಬಸ್ಟಾದ ಕೊಯ್ಲು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು  ಕರ್ನಾಟಕ ಪ್ಲ್ಯಾಂಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಶಿರೀಷ್‌ ವಿಜಯೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ರೋಬಸ್ಟಾ ಮತ್ತು ಮೆಣಸು ಕೊಯ್ಲಿಗೆ ಎದುರಾದ ಕಂಟಕ ಮತ್ತು ಬೆಳೆಗಾರರ ದಾಸ್ತಾನು ನಷ್ಟದ ಒಟ್ಟಾರೆ ಹಾನಿಯು ₹ 441 ಕೋಟಿಗಳಷ್ಟಿದೆ. ಕಚ್ಚಾ ಸರಕುಗಳ ಬೆಲೆ ಏರಿಕೆ, ಕೂಲಿ ಮತ್ತಿತರ ಕಾರಣಕ್ಕೆ ಉತ್ಪಾದನಾ ವೆಚ್ಚವು ದುಬಾರಿಯಾಗಿ ಪರಿಣಮಿಸಿದೆ.

‘ಸಾಲ ಮರುಪಾವತಿ ಮುಂದೂಡಿಕೆಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಮತ್ತು ಸಬ್ಸಿಡಿ ಬಡ್ಡಿ ದರದಲ್ಲಿ ವಿಶೇಷ ಅವಧಿ ಸಾಲ ನೀಡಲು ‘ಕೆಪಿಎ’ ಕೇಂದ್ರದ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದೆ.

‘ಕಾಫಿ ಮಂಡಳಿಯ ಕೋರಿಕೆ ಮೇರೆಗೆ ನಾವು ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸಿದ್ದೇವೆ. ಉದ್ದಿಮೆಯ ಉಳಿವಿಗೆ  ವಿಶೇಷ ಪ್ಯಾಕೇಜ್‌ ಪ್ರಕಟಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದೂ ವಿಜಯೇಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು