ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಸಣ್ಣ ಉದ್ದಿಮೆಗೆ ಹೆಚ್ಚಿನ ಹಾನಿ

ದುಡಿಯುವ ಬಂಡವಾಳ ಕೊರತೆ
Last Updated 5 ಮೇ 2020, 18:12 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಸಣ್ಣ ಉದ್ದಿಮೆಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಕೆಲವು ಉದ್ದಿಮೆಗಳ ವಹಿವಾಟು ಶೇ 50ರಷ್ಟು ಇಳಿಕೆ ಆಗಿದ್ದರೆ, ಇನ್ನೂ ಕೆಲವು ಉದ್ದಿಮೆಗಳು ಸಂಪೂರ್ಣವಾಗಿ ನಷ್ಟ ಅನುಭವಿಸಿವೆ’ ಎಂದು ಇನ್‌ಸ್ಟಾಮೊಜೊ ಕಂಪನಿಯ ಸಹ ಸ್ಥಾಪಕ ಆಕಾಶ್‌ ಗೆಹನಿ ತಿಳಿಸಿದರು.

ಎಂಎಸ್‌ಎಂಇಗಳು ಆನ್‌ಲೈನ್‌ ವಹಿವಾಟಿಗೆ ಬರಲು, ಹಣಕಾಸು ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು, ಡಿಜಿಟಲ್‌ ಪಾವತಿಗೆ ನೆರವಾಗುವುದು ಸೇರಿದಂತೆ ಇನ್ನೂ ಹಲವು ಕೆಲಸಗಳಲ್ಲಿ ಇನ್‌ಸ್ಟಾಮೊಜೊ ತೊಡಗಿಸಿಕೊಂಡಿದೆ.

‘ಲಾಕ್‌ಡೌನ್‌ನಿಂದಾಗಿ ನಗದು ಹರಿವಿನ ಬಿಕ್ಕಟ್ಟು ಎದುರಾಗಿದೆ. ಪ್ರತಿ ತಿಂಗಳಿಗೂ ಹಣದ ಅಗತ್ಯ ಇರುವ ಕೆಲವು ಉದ್ದಿಮೆಗಳಿಗೆ ಬಂಡವಾಳವೇ ಸಿಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ, ಬಾಗಿಲು ಮುಚ್ಚುವ ಅಥವಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

‍‘ಲಾಕ್‌ಡೌನಿನ ಸದ್ಯದ ಪರಿಣಾಮಗಳ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಆದರೆ, ಇನ್ನೂ ಎಷ್ಟು ದಿನಗಳವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಹಾಗೂ ಲಾಕ್‌ಡೌನ್‌ ನಂತರದ ಪರಿಸ್ಥಿತಿಗಳೇನು ಎನ್ನುವ ಬಗ್ಗೆಯೂ ಅಂದಾಜು ಮಾಡಬೇಕಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕವೂ ಈ ಉದ್ದಿಮೆಗಳು ಚೇತರಿಸಿಕೊಳ್ಳಲು ಸಮಯ ಹಿಡಿಯಲಿದೆ. ಕೆಲವು ‘ಎಂಎಸ್‌ಎಂಇ’ಗಳು ಶಾಶ್ವತವಾಗಿ ಬಾಗಿಲು ಮುಚ್ಚುವ ಸ್ಥಿತಿಗೆ ಬರುವ ಅಪಾಯವೂ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳುತ್ತಿರುವುದರಿಂದ ಅವರು ಮರಳಿ ಬರದೇ ಇದ್ದರೆ, ಮುಂದಿನ ದಿನಗಳಲ್ಲಿ ದುಡಿಯುವ ಕಾರ್ಮಿಕರ ಕೊರತೆ ಎದುರಾಗಲಿದೆ.ದೆಹಲಿ ಮತ್ತು ಮುಂಬೈನಲ್ಲಿ ವಲಸೆ ಕಾರ್ಮಿಕರ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಾಜ್ಯದ ಒಳಗಿನ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಕರೆತರುವುದು ಕಷ್ಟವಾಗುವುದಿಲ್ಲ.

‘ಲಾಕ್‌ಡೌನ್ ವಿಸ್ತರಣೆ ಆಗಲಿ, ಆಗದೇ ಇರಲಿ. ಗ್ರಾಹಕರ ಮನಸ್ಥಿತಿ ಸದ್ಯದ ಮಟ್ಟಿಗೆ ಬದಲಾಗುವುದಿಲ್ಲ. ಹಲವು ಕೈಗಾರಿಕೆಗಳು ಹೆಚ್ಚಿನ ಹೊಡೆತ ಅನುಭವಿಸಲಿವೆ. ಬಾಗಿಲು ಮುಚ್ಚುವ ಗಂಭೀರ ಪರಿಸ್ಥಿತಿಗೆ ತಲುಪದೇ ಇದ್ದರೂ ಕಾರ್ಯಾಚರಣೆ ಮೇಲಂತೂ ತೀವ್ರ ಸ್ವರೂಪದ ಪರಿಣಾಮ ಆಗಲಿದೆ. ಈವೆಂಟ್‌ ಉದ್ದಿಮೆಗೆ ಮುಂದಿನ ಒಂದು ವರ್ಷದವರೆಗೆ ಯಾವುದೇ ಕೆಲಸ ಇರುವುದಿಲ್ಲ.

‘ಸದ್ಯದ ಮಟ್ಟಿಗೆ ಇ–ಕಾಮರ್ಸ್‌ ವಹಿವಾಟು ಮುಖ್ಯವಾಗಿ ಅಗತ್ಯವಸ್ತುಗಳ ಪೂರೈಕೆಯಿಂದಾಗಿ ತುಸು ಉತ್ತಮವಾಗಿದೆ. ಒಟ್ಟಾರೆಯಾಗಿ, ಎಲ್ಲಾ ವಲಯಗಳೂ ಉದ್ಯೋಗ ನಷ್ಟ, ವೇತನ ಕಡಿತದ ಪರಿಣಾಮ ಎದುರಿಸಬೇಕಾಗಲಿದೆ. ಗ್ರಾಹಕರ ಖರೀದಿಸುವ ಮನೋವೃತ್ತಿಯಲ್ಲಿ ಬದಲಾವಣೆ ಆಗಲಿದ್ದು, ಇದರಿಂದಾಗಿಯೂ ಉದ್ಯಮಗಳ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT