ನವದೆಹಲಿ: ಸಾಲಪತ್ರ ಆಧಾರಿತ (ಡೆಟ್) ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಗಳಿಗೆ ಏಪ್ರಿಲ್ 1ರಿಂದ, ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಪ್ರಯೋಜನಗಳು ಸಿಗುವುದಿಲ್ಲ. ಆದಾಯ ತೆರಿಗೆ ಲೆಕ್ಕಹಾಕುವ ಸಂದರ್ಭದಲ್ಲಿ ಡೆಟ್ ಮ್ಯೂಚುವಲ್ ಫಂಡ್‌ಗಳನ್ನು, ಹೂಡಿಕೆಗಳಿಗೆ ಬಡ್ಡಿ ನೀಡುವ ಇತರ ಉತ್ಪನ್ನಗಳ ರೀತಿಯಲ್ಲಿಯೇ ಪರಿಗಣಿಸಲಾಗುತ್ತದೆ.
ಈ ಬದಲಾವಣೆಗಳಿಗೆ ಅಗತ್ಯವಿರುವ ತಿದ್ದುಪಡಿಗಳನ್ನು ಹಣಕಾಸು ಮಸೂದೆ 2023 ಒಳಗೊಂಡಿದೆ. ಇದಕ್ಕೆ ಲೋಕಸಭೆಯು ಶುಕ್ರವಾರ ಅನುಮೋದನೆ ನೀಡಿದೆ.
ಏನು ಪರಿಣಾಮ?: ಏಪ್ರಿಲ್ 1ರಿಂದ ಅನ್ವಯ ಆಗುವಂತೆ, ಡೆಟ್ ಮ್ಯೂಚುವಲ್ ಫಂಡ್ ಹೂಡಿಕೆಗಳಿಂದ ಸಿಗುವ ಲಾಭಕ್ಕೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು ವಿಧಿಸಲಾಗುತ್ತದೆ. ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯು ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಆಗಿದ್ದಿದ್ದರೆ, ಅದರಿಂದ ಸಿಗುವ ಲಾಭಕ್ಕೆ ಇದುವರೆಗೆ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ವಿಧಿಸಲಾಗುತ್ತಿತ್ತು. ಅಲ್ಲದೆ, ಇಂಡೆಕ್ಸೇಷನ್ (ತೆರಿಗೆ ಲೆಕ್ಕಹಾಕುವಾಗ ಹಣದುಬ್ಬರದ ಪ್ರಮಾಣವನ್ನು ಪರಿಗಣಿಸುವುದು) ಪ್ರಯೋಜನ ಕೂಡ ಹೂಡಿಕೆದಾರರಿಗೆ ಸಿಗುತ್ತಿತ್ತು. ಈ ಕಾರಣದಿಂದಾಗಿಯೂ ಡೆಟ್ ಮ್ಯೂಚುವಲ್ ಫಂಡ್‌ಗಳು ಜನಪ್ರಿಯವಾಗಿದ್ದವು.
ಈಗಿರುವ ನಿಯಮಗಳ ಅನ್ವಯ, ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಹೂಡಿಕೆಯಲ್ಲಿ ಡೆಟ್ ಮ್ಯೂಚುವಲ್ ಫಂಡ್‌ಗಳಿಂದ ಸಿಗುವ ಲಾಭಕ್ಕೆ ಹೂಡಿಕೆದಾರರು ತಮ್ಮ ವೈಯಕ್ತಿಕ ತೆರಿಗೆ ದರಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕು. ಹೂಡಿಕೆಯ ಅವಧಿಯು ಮೂರು ವರ್ಷಗಳಿಗಿಂತ ಹೆಚ್ಚಿದ್ದರೆ, ಇಂಡೆಕ್ಸೇಷನ್ ಪ್ರಯೋಜನ ಪಡೆದು ಶೇ 20ರಷ್ಟು ತೆರಿಗೆ ಪಾವತಿಸಬೇಕು. ಅಥವಾ, ಇಂಡೆಕ್ಸೇಷನ್ ಪ್ರಯೋಜನವನ್ನು ಬಿಟ್ಟುಕೊಟ್ಟು ಶೇ 10ರಷ್ಟು ತೆರಿಗೆ ಪಾವತಿಸಿದರೆ ಸಾಕು.
ಲೋಕಸಭೆಯು ಶುಕ್ರವಾರ ಅನುಮೋದನೆ ನೀಡಿರುವ ತಿದ್ದುಪಡಿಯು ಜಾರಿಗೆ ಬಂದ ನಂತರದಲ್ಲಿ (ಏಪ್ರಿಲ್ 1ರಿಂದ), ಇಂತಹ ಮ್ಯೂಚುವಲ್ ಫಂಡ್‌ಗಳಿಂದ ಸಿಗುವ ಲಾಭವನ್ನು ಅಲ್ಪಾವಧಿ ಬಂಡವಾಳ ವೃದ್ಧಿ ಎಂದು ಪರಿಗಣಿಸಲಾಗುತ್ತದೆ. ಆ ಲಾಭಕ್ಕೆ ಹೂಡಿಕೆದಾರನ ವೈಯಕ್ತಿಕ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.
ದೇಶಿ ಕಂಪನಿಗಳ ಷೇರುಗಳಲ್ಲಿ ಶೇಕಡ 35ಕ್ಕಿಂತ ಕಡಿಮೆ ಮೊತ್ತವನ್ನು ತೊಡಗಿಸಿರುವ ಮ್ಯೂಚುವಲ್ ಫಂಡ್‌ಗಳಿಗೆ ಈ ರೀತಿಯಲ್ಲಿ ತೆರಿಗೆ ಲೆಕ್ಕಹಾಕಲಾಗುತ್ತದೆ. ಚಿನ್ನದ ವಿನಿಮಯ ವಹಿವಾಟು ನಿಧಿಗಳು (ಇಟಿಎಫ್) ಕೂಡ ಇದರ ವ್ಯಾಪ್ತಿಗೆ ಬರಲಿವೆ.
ಇದರಿಂದಾಗಿ ತೆರಿಗೆ ಲೆಕ್ಕಹಾಕುವಾಗ, ಈ ಬಗೆಯ ಮ್ಯೂಚುವಲ್ ಫಂಡ್‌ಗಳು ಹಾಗೂ ಬ್ಯಾಂಕ್ ಠೇವಣಿಗಳು ಒಂದೇ ಬಗೆಯದ್ದಾಗಲಿವೆ. ‘ಒಂದೇ ಸ್ವರೂಪದ ಹೂಡಿಕೆ ಉತ್ಪನ್ನಗಳ ನಡುವೆ ಸಮಾನತೆ ತರುವ ಉದ್ದೇಶದಿಂದ ಹೀಗೆ ಮಾಡಲಾಗಿದೆ’ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದ್ದಾರೆ.
ವಿದೇಶ ಪ್ರಯಾಣಗಳಿಗೆ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳನ್ನು ಉದಾರೀಕೃತ ಪಾವತಿ ವ್ಯವಸ್ಥೆ (ಎಲ್‌ಆರ್‌ಎಸ್) ಅಡಿಯಲ್ಲಿ ತರಲಾಗುತ್ತದೆ. ಈ ಮೂಲಕ ಇಂತಹ ಪಾವತಿಗಳು ಮೂಲದಲ್ಲಿಯೇ ತೆರಿಗೆ ಕಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.