ಸಬ್ಸಿಡಿಯೇತರ ಎಲ್‌ಪಿಜಿ ಬೆಲೆ ₹ 11.5ರಂತೆ ಹೆಚ್ಚಳ

ನವದೆಹಲಿ: ಸಬ್ಸಿಡಿಯೇತರ ಅಡುಗೆ ಅನಿಲದ (ಎಲ್‌ಪಿಜಿ) ಪ್ರತಿ ಸಿಲಿಂಡರ್ ಬೆಲೆಯನ್ನು ₹ 11.5ರಂತೆ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಈಗ ಪ್ರತಿ ಸಿಲಿಂಡರ್ ಬೆಲೆ ₹ 596ಕ್ಕೆ ಏರಿಕೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತ 78ನೇ ದಿನವೂ ಸ್ಥಿರವಾಗಿದೆ. ಮಾರ್ಚ್ 16ರಿಂದ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಎಟಿಎಫ್ ತೀವ್ರ ಏರಿಕೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ವಿಮಾನ ಇಂಧನ (ಎಟಿಎಫ್) ಬೆಲೆಯನ್ನು ಪ್ರತಿ ಕಿಲೊ ಲೀಟರ್‌ಗೆ ₹ 12,126.75 ರಂತೆ (ಶೇ 56.5ರಷ್ಟು) ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ‘ಎಟಿಎಫ್’ ಬೆಲೆ ಈಗ ಪ್ರತಿ ಕಿಲೊ ಲೀಟರ್‌ಗೆ ₹ 33,575.37ಕ್ಕೆ ತಲುಪಿದೆ.
ಫೆಬ್ರುವರಿಯಿಂದೀಚೆಗೆ ಸತತ 7 ಬಾರಿ ‘ಎಟಿಎಫ್’ ಬೆಲೆ ಇಳಿಸಲಾಗಿತ್ತು.
ಸಬ್ಸಿಡಿಯೇತರ ಎಲ್‌ಪಿಜಿಯ 14.2 ಕೆ.ಜಿ ತೂಕದ ಪ್ರತಿ ಸಿಲಿಂಡರ್ ಬೆಲೆಯನ್ನು ಮೂರು ತಿಂಗಳ ಸತತ ಇಳಿಕೆ ನಂತರ ಹೆಚ್ಚಿಸಲಾಗಿದೆ. ಮೂರು ಬಾರಿಯ ದರ ಕಡಿತದಿಂದಾಗಿ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್‌ಗೆ ₹ 277ರಂತೆ ಕಡಿಮೆಯಾಗಿತ್ತು.
ಒಂದು ವರ್ಷದ ಅವಧಿಯಲ್ಲಿ ಸಬ್ಸಿಡಿ ಒಳಗೊಂಡ 14.2 ಕೆಜಿಯ 12 ಸಿಲಿಂಡರ್ ಪೂರೈಕೆ ನಂತರದ ಸಿಲಿಂಡರ್‌ಗೆ ಗ್ರಾಹಕರು ಮಾರುಕಟ್ಟೆ ದರ ಪಾವತಿಸಬೇಕಾಗುತ್ತದೆ. ಸಬ್ಸಿಡಿ ಬಿಟ್ಟುಕೊಟ್ಟ ಗ್ರಾಹಕರೂ ಮಾರುಕಟ್ಟೆ ದರದಲ್ಲಿಯೇ ಎಲ್‌ಪಿಜಿ ಖರೀದಿಸುತ್ತಾರೆ. ದೇಶದಾದ್ಯಂತ ಗ್ರಾಹಕರು ಎಲ್‌ಪಿಜಿ ಖರೀದಿಸಲು ಮಾರುಕಟ್ಟೆ ದರವನ್ನೇ ಪಾವತಿಸುತ್ತಾರೆ. ಸಬ್ಸಿಡಿ ಮೊತ್ತವನ್ನು ಸರ್ಕಾರ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.